ಕುಂದಾಪುರ ಮಿರರ್ ಸುದ್ದಿ…


ಕುಂದಾಪುರ: ಈ ಬಾರಿಯ 154ನೇ ಗಾಂಧೀ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿಕೊಳ್ಳುವ ಮೂಲಕ ಉಡುಪಿ ಜಿಲ್ಲೆಯ ಎಸ್.ಡಿ.ಎಂ.ಸಿ ಸಮನ್ವಯ ಸಮಿತಿಯ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಗಮನ ಸೆಳೆದಿದ್ದಾರೆ. ಅಬ್ದುಲ್ ಸಲಾಂ ಚಿತ್ತೂರು ಹಾಗೂ ಅವರ ಕುಟುಂಬ ತಮ್ಮ ಮನೆಯಲ್ಲಿಯೇ ಗಾಂಧೀ ಜಯಂತಿ ಆಚರಿಸಿಕೊಂಡಿದ್ದು, ವಂಡ್ಸೆ ಗ್ರಾಮ ಪಂಚಾಯತ್ ನ ಎಸ್ ಎಲ್ ಆರ್ ಎಂ ಘಟಕದ ಕಸ ವಿಲೇವಾರಿ ಸಿಬ್ಬಂದಿಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸುವ ಮೂಲಕ ಗಾಂಧೀಜಿಯ ರಾಮ ರಾಜ್ಯದ ಕನಸಿಗೆ ಸ್ಪಂದಿಸಿದ್ದಾರೆ.
ವಂಡ್ಸೆ ಗ್ರಾಮ ಪಂಚಾಯತ್ ವತಿಯಿಂದ ನಡೆಯುತ್ತಿರುವ ಎಸ್ ಎಲ್ ಆರ್ ಎಂ ಘಟಕದ ಸದಸ್ಯರು ಕಳೆದ ಐದು ವರ್ಷಗಳಿಂದ ಚಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ ಅಂಗಡಿಗಳಿಂದ ದಿನಂಪ್ರತಿ ಕಸ ಸಂಗ್ರಹಿಸಿ ಕೊಂಡು ಹೋಗುತ್ತಿರುವುದರಿಂದ ಪ್ರತಿ ಮನೆಯ ಮತ್ತು ಅಂಗಡಿಯ ಪರಿಸರ ಬಹಳ ಸುಂದರವಾಗಿ ಸ್ವಚ್ಛವಾಗಿತ್ತು, ಅಲ್ಲದೆ ದಿನಂಪ್ರತಿ ಕಸ ಸಂಗ್ರಹಣೆಗೆ ಬರುವ ವಾಹನ ಚಾಲಕರು ಮತ್ತು ಸಿಬ್ಬಂದಿಗಳು ಮನೆಯವರೊಂದಿಗೆ ಉತ್ತಮವಾಗಿ ನಡವಳಿಕೆ ಸಹನೆ ತಾಳ್ಮೆಯಿಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು, ಗಾಂಧಿ ಕಂಡ ಸ್ವಚ್ಛ ಭಾರತದ ಕನಸನ್ನು ನನಸಾಗಿಸುವಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿರುವ SLRM ಸಿಬ್ಬಂದಿಗಳನ್ನು ಈ ಬಾರಿಯ ಗಾಂಧೀ ಜಯಂತಿಯ ದಿನದಂದು ಅವರ ಕರ್ತವ್ಯದ ನಡುವೆ ಎಸ್ ಎಲ್ ಆರ್ ಎಂ ತಂಡದ ಮೇಲ್ವಿಚಾರಕರಾದ ಶ್ವೇತಾ ,ಅಶ್ವಿನಿ ಚಾಲಕ ಸತೀಶ್ ಸಿಬ್ಬಂದಿಗಳಾದ ಚಂದ್ರ ಮತ್ತು ಗಣೇಶ್ ಇವರನ್ನು ಅಬ್ದುಲ್ ಸಲಾಂ ಚಿತ್ತೂರು ಕುಟುಂಬ ಹಾಗೂ ನೆರೆಹೊರೆಯವರು ಅಬ್ದುಲ್ ಸಲಾಂರ ಮನೆ ದಾರುಸ್ಸಲಾಂನಲ್ಲಿ ಗೌರವಿಸಿ ಅಭಿನಂದಿಸಿದ್ದಾರೆ.
ಸ್ಥಳೀಯ ವೈದ್ಯ, ಚಿತ್ತೂರು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಡಾ. ರಾಜೇಶ್ ಬಾಯರಿಯವರು ಎಸ್ ಎಲ್ ಆರ್ ಎಂ ನ ಐವರು ಸಿಬ್ಬಂದಿಗಳನ್ನು ಗೌರವಿಸಿ ಅಭಿನಂದಿಸಿ ಮಾತನಾಡಿ, ಪರಿಸರ ಸ್ವಚ್ಛತೆಯೊಂದಿಗೆ ದೇಶವನ್ನೇ ಸ್ವಚ್ಛಗೊಳಿಸುತ್ತಿರುವ ಕಾರ್ಯ ಶ್ಲಾಘನೀಯ. ದೇಶಾದ್ಯಂತ ಕರ್ತವ್ಯ ನಿರ್ವಹಿಸುವ ಲಕ್ಷಾಂತರ ಸ್ವಚ್ಛತಾ ಸಿಬ್ಬಂದಿಗಳಿಗೆ ಈ ಗೌರವ ಸಲ್ಲಬೇಕು ಎಂದರು.
ಇದೇ ಸಂದರ್ಭದಲ್ಲಿ ಗಾಂಧಿ ಜಯಂತಿಯಂದೇ ಹುಟ್ಟಿದ ತಾಲೂಕು ಪಂಚಾಯತ್ ಮಾಜಿ ಸದಸ್ಯ ಉದಯ ಜಿ. ಪೂಜಾರಿ ಅವರನ್ನು ಅಭಿಮಾನಿಗಳು, ಗೆಳೆಯರು ಅಭಿನಂದಿಸಿದರು.ಬಳಿಕ ಮಾತನಾಡಿದ ಅವರು, ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಕನಸನ್ನು ಸಾಕಾರಗೊಳಿಸುವಲ್ಲಿ ವಂಡ್ಸೆ ಗ್ರಾಮ ಪಂಚಾಯತ್ ನ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಯವರ ಶ್ರಮ ಇಂದು ಸಾರ್ಥಕತೆಯನ್ನು ಕಾಣುತ್ತಿದೆ ಎಂದರು,
ಚಿತ್ತೂರು ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ಶೆಟ್ಟಿ, ಹಿರಿಯರಾದ ಹಸನ್ ಸಾಹೇಬ್ , ಉತ್ತಮ ಕೃಷಿಕರಾದ ಹರವರಿ ಗುಂಡು ಪೂಜಾರಿ, ಸೂಪರ್ ಮಾರ್ಕೆಟ್ ಸಂತೋಷ್ ಶೆಟ್ಟಿ, ಸಂಜೀವ ಭಂಡಾರಿ, ಮಹಾಬಲ ಶೆಟ್ಟಿ, ಕೆ .ಅಬ್ದುಲ್ ರೆಹಮಾನ್ , ಮೋನು ಸಾಹೇಬ್, ಹಂಝಾ ಸಾಹೇಬ್, ಮೂಕಾಂಬುಶೆಡ್ತಿ , ಪದ್ಮಾವತಿ ಶೆಟ್ಟಿ, ಅಮನ್, ನೌಶಾದ್ ಹಾಗೂ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ರಾಘವೇಂದ್ರ ಪದಾಧಿಕಾರಿಗಳಾದ ಕುಸುಮಾಕರ ಪೂಜಾರಿ, ಇ. ಮಹಮ್ಮದ್ , ರಿಯಾಝ್, ರಿಕ್ಷಾ ಚಾಲಕರು ಮತ್ತು ನೆರೆಹೊರೆಯವರು ಉಪಸ್ಥಿತರಿದ್ದರು, ಅಬ್ದುಲ್ ಸಲಾಂ ಚಿತ್ತೂರು ಪ್ರಾಸ್ತಾವಿಸಿ ಸ್ವಾಗತಿಸಿ ವಂದಿಸಿದರು.











