ಕುಂದಾಪುರ ಮಿರರ್ ಸುದ್ದಿ…
ಕೋಟ: ಈ ಗ್ರಾಮದಲ್ಲಿ ಸಿಹಿ ನೀರು ಶೇಖರಣೆ ಎಂಬ ನೆಪದಲ್ಲಿ ಡ್ಯಾಮ ನಿರ್ಮಾಣ ಕಾರ್ಯದ ಸರ್ವೆಕಾರ್ಯ ಎಷ್ಟು ಸೂಕ್ತ ಈ ಬಗ್ಗೆ ಸಾಕಷ್ಟು ಬಾರಿ ವಿರೋಧಿಸಿ ಪ್ರತಿಭಟಿಸಿ ಪತ್ರ ಬರೆಯಲಾಗಿದೆ ಗ್ರಾಮಸಭೆಯಲ್ಲಿ ತರಾಟೆ ತೆಗೆದುಕೊಂಡಿದ್ದೇವೆ ಇದು ಸಮಂಜಸವೇ ಎಂದು ಪಾಂಡೇಶ್ವರ ಗ್ರಾಮಸಭೆಯಲ್ಲಿ ಗ್ರಾಮಪಂಚಾಯತ್ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಆಕ್ರೋಶ ಹೊರಹಾಕಿದ ಘಟನೆ ಶುಕ್ರವಾರ ನಡೆಯಿತು.
ಪಾಂಡೇಶ್ವರ ಗ್ರಾಮಪಂಚಾಯತ್ ವಠಾರದಲ್ಲಿ ಪ್ರಥಮ ಗ್ರಾಮಸಭೆಯಲ್ಲಿ ಉಡುಪಿ ಜಿಲ್ಲೆಯ ಸಣ್ಣನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಶಾಂತಾರಾಮ್ ಇವರನ್ನು ತರಾಟೆ ತೆಗೆದುಕೊಂಡ ಗ್ರಾಮಸ್ಥರು ಸತತ ಹಲವಾರು ಗ್ರಾಮಸಭೆಯಲ್ಲಿ ಈ ಬಗ್ಗೆ ಉಲ್ಲೇಖಿಸಿ ಪ್ರತಿಭಟಿಸಿ ಈ ಯೋಜನೆಯಿಂದ ಗ್ರಾಮದಲ್ಲಿ ಕೃತಕ ನೆರೆ ಸೃಷ್ಠಿಯಾಗಲಿದೆ, ಗ್ರಾಮದ ಕೃಷಿ ಕಾರ್ಯಕ್ಕೂ ಸಮಸ್ಯೆಯಾಗಲಿದೆ ಪಂಚಾಯತ್ ಪರಿಗಣನೆಗೆ ಬಾರದ ಯೋಜನೆ ಅನುಷ್ಠಾನ ಹೇಗೆ ಸಾಧ್ಯ, 300ಕೋಟಿ ಯೋಜನೆಯಿಂದ ಗುತ್ತಿಗೆದಾರರಿಗೆ ಲಾಭವೇ ವಿನಹ ಗ್ರಾಮಸ್ಥರಿಗಲ್ಲ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು.
ಯೋಜನೆ ಜಾರಿಗೊಳಿಸುದಾದರೆ ಸಮರ್ಪಕ ತಡೆಗೊಡೆ ರಚಿಸಿ
ಈ ಯೋಜನೆ ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ನೀಡದೆ ಮುಂದುವರೆಸುವುದಾದರೆ ಇಡೀ ಗ್ರಾಮದ ನದಿ ತೀರದಲ್ಲಿ ತಡೆಗೊಡೆ ರಚಿಸಿ ಯೋಜನೆ ಸಮರ್ಪಕವಾಗಿಸಿ ಇಲ್ಲ ಯೋಜನೆ ಕೈಬಿಡಿ ಎಂದು ಸಭೆ ಆಗ್ರಹಿಸಿತು.
ಮೇಲಾಧಿಕಾರಿಗಳ ಗಮನಕ್ಕೆ
ಈ ಯೋಜನೆ ಹಿಂದಿನ ಇರ್ವರು ಶಾಸಕರ ಯೋಜನೆಯಾಗಿದ್ದು ನಾವು ಇದರಲ್ಲಿ ಏನು ಮಾಡಲು ಸಾಧ್ಯ ಅನುಷ್ಠಾನ ಹಾಗೂ ಇಲ್ಲಿನ ನೈಜ ಸಮಸ್ಯೆಯ ಬಗ್ಗೆ ನಿರ್ಣಯಿಸಿ ಮೇಲಾಧಿಕಾರಿಗಳ ಗಮನಕ್ಕೆ ತನ್ನಿ ನಾನು ಸಹ ಈ ಬಗ್ಗೆ ವರದಿ ನೀಡುತ್ತೇನೆ ಎಂದು ಅಧಿಕಾರಿ ಉತ್ತರಿಸಿದರು.
ಗೃಹಲಕ್ಷ್ಮೀ ಯೋಜನೆ ಗೊಂದಲ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಲಕ್ಷ್ಮೀ ವಿವಿಧ ಯೋಜನೆಯ ಬಗ್ಗೆ ಉಲ್ಲೇಖಿಸುವ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆ ಹಣ ಸಮರ್ಪಕವಾಗಿ ಖಾತೆ ಬರಲಿಲ್ಲ ಈ ಬಗ್ಗೆ ಸಮಗ್ರ ಮಾಹಿತಿ ನೀಡಿ ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಮೇಲ್ವಿಚಾರಕಿ ಸರಕಾರದ ಯೋಜನೆಯಲ್ಲಿ ಸಮಸ್ಯೆಯಲ್ಲ ಬದಲಾಗಿ ನಿಮ್ಮ ಖಾತೆಯಲ್ಲಿ ಲೋಪ ಹಾಗೂ ಆಧಾರ ಸಮಸ್ಯೆ ಇದ್ದರೆ ಖಾತೆಗೆ ಹಣ ವಿಳಂಬವಾಗಿದೆ ಸಮಸ್ಯೆಗಳಿದ್ದರೆ ಅಂಗನವಾಡಿ ಕಾರ್ಯಕರ್ತರಲ್ಲಿ ಮಾಹಿತಿ ನೀಡಿ ಬಗೆಹರಿಸಿಕೊಳ್ಳಿ ಎಂದು ಉತ್ತರಿಸಿದರು.
ಪಂಚಾಯತ್ ವ್ಯಾಪ್ತಿಯಲ್ಲಿ ಲೈಸೆನ್ಸ್ ಪಡೆದು ಕಾಮಗಾರಿ ನಿರ್ವಹಿಸಿ
ಪಂಚಾಯತ್ ವ್ಯಾಪ್ತಿಯ ರಸ್ತೆಯಲ್ಲಿ ಸರಕಾರದ ಕಾನೂನು ಗಾಳಿಗೆತೂರಿ ಕಲ್ಲು ಇರಿಸುವುದಲ್ಲದೆ ಕಂಪೌಂಡ್ ನಿರ್ಮಿಸಲಾಗುತ್ತಿದೆ ಇದರಿಂದ ವಾಹನ ಸವಾರರಿಗೆ ಸಮಸ್ಯೆ ಏರ್ಪಡುತ್ತಿದೆ ಈ ಬಗ್ಗೆ ಪಂಚಾಯತ್ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಇನ್ನುಳಿದಂತೆ ವಿವಿಧ ಇಲಾಖಾಧಿಕಾರಿಗಳು ಗ್ರಾಮಸ್ಥರಿಗೆ ತಮ್ಮ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಪಂಚಾಯತ್ ಅಧ್ಯಕ್ಷೆ ಸುಶೀಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಪಂಚಾಯತ್ ಉಪಾಧ್ಯಕ್ಷ ವೈ.ಬಿ ರಾಘವೇಂದ್ರ, ಅಭಿವೃದ್ಧಿ ಅಧಿಕಾರಿ ಲೋಲಾಕ್ಷಿ, ಪಂಚಾಯತ್ ಪ್ರತಿನಿಧಿಗಳು ಉಪಸ್ಥಿತರಿದ್ದರು. ವರದಿಯನ್ನು ಪಂಚಾಯತ್ ಕಾರ್ಯದರ್ಶಿ ವಿಜಯ ಹಾಗೂ ಸಿಬ್ಬಂದಿ ಸಂತೋಷ್ ಮಂಡಿಸಿದರು. ಸಭೆಯನ್ನು ಪಂಚಾಯತ್ ಸಿಬ್ಬಂದಿ ಸಂತೋಷ್ ನಿರೂಪಿಸಿದರು.











