ಕುಂದಾಪುರ ಮಿರರ್ ಸುದ್ದಿ…

ಗಂಗೊಳ್ಳಿ : ಗಂಗೊಳ್ಳಿ ಗ್ರಾಮದ ಮ್ಯಾಂಗನೀಸ್ ವಾರ್ಫ್‍ನಲ್ಲಿ ನಿಲ್ಲಿಸಿದ್ದ ಸುಮಾರು 8 ಮೀನುಗಾರಿಕೆ ಬೋಟುಗಳು ಹಾಗೂ ಒಂದು ದೋಣಿಗಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾಗಿ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.
ಗಂಗೊಳ್ಳಿಯ ಮ್ಯಾಂಗನೀಸ್ ವಾರ್ಫ್ ಪ್ರದೇಶದಲ್ಲಿ ಲಂಗರು ಹಾಕಿದ್ದ ಮೀನುಗಾರಿಕಾ ಬೋಟಿನಲ್ಲಿ ಕಾಣಿಸಿಕೊಂಡ ಬೆಂಕಿ ನೋಡ ನೋಡುತ್ತಿದ್ದಂತೆಯೇ ಅಕ್ಕ ಪಕ್ಕದ ಬೋಟುಗಳಿಗೂ ಆವರಿಸಿಕೊಂಡಿತು. ಬಲವಾದ ಗಾಳಿ ಬೀಸುತ್ತಿದ್ದ ಕಾರಣ ಬೆಂಕಿಯ ಪ್ರತಾಪ ಇನ್ನಷ್ಟು ಹೆಚ್ಚಾಗತೊಡಗಿತು. ಬೆಂಕಿ ಕಾಣಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಸುಮಾರು 8 ಬೋಟಗಳಿಗೆ ಆವರಿಸಿಕೊಂಡಿತಲ್ಲದೆ, ಸ್ಥಳದಲ್ಲಿದ್ದ ಒಂದು ನಾಡದೋಣಿ ಹಾಗೂ ಪರ್ಸಿನ್ ಬೋಟಿನ 2 ಡಿಂಗಿ ಮತ್ತು ಎರಡು ನಾಡದೋಣಿಗಳ ಮೀನುಗಾರಿಕೆ ಬಲೆ ಬೆಂಕಿಗಾಹುತಿಯಾಯಿತು. ಬೆಂಕಿಯನ್ನು ನಂದಿಸಲು ಸ್ಥಳೀಯರು ಹರಸಾಹಸ ಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ. ಬೆಂಕಿಯ ಜ್ವಾಲೆ ಇನ್ನಷ್ಟು ತೀವ್ರಗೊಳ್ಳುತ್ತಿರುವುದರಿಂದ ಅಕ್ಕಪಕ್ಕದಲ್ಲಿರುವ ಮನೆ ಮಂದಿ ಆತಂಕಿತರಾದರು. ಆಕಾಶದೆತ್ತರಕ್ಕೆ ಕಪ್ಪು ಬಣ್ಣದ ಹೊಗೆ ಆವರಿಸಿಕೊಂಡಿದ್ದು, 8 ಬೋಟುಗಳು ಧಗಧಗನೆ ಉರಿದು ಹೋಗಲಾರಂಭಿಸಿತು.
ಇದೇ ಸಂದರ್ಭ ಸ್ಥಳಕ್ಕೆ ಆಗಮಿಸಿದ ಕುಂದಾಪುರ ಮತ್ತು ಬೈಂದೂರು ಮತ್ತು ಉಡುಪಿಯ ಮೂರು ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯ ನಡೆಸಿದರು. ನೂರಾರು ಮಂದಿ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗಳೊಂದಿಗೆ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡರು. ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ಆನಂದ ಹೆಗ್ಡೆ ಎಂಬುವರು ತಮ್ಮ ವಾಹನವನ್ನು ನೀರು ತುಂಬಿಸಿಕೊಂಡು ಬಂದು ಬೆಂಕಿ ನಂದಿಸುವಲ್ಲಿ ಸಹಕರಿಸಿದರೆ, ಜಾತಿ ಧರ್ಮ ಮರೆತು ಎಲ್ಲರೂ ಒಂದಾಗಿ ಬೆಂಕಿ ನಂದಿಸುವ ಕಾರ್ಯಕ್ಕೆ ಕೈಹಾಕಿದರು. ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಯಶಸ್ವಿಯಾದರು.
ಬೆಂಕಿಯ ಕೆನ್ನಾಲಿಗೆಗೆ ಏಳು ಪರ್ಸಿನ್ ಬೋಟುಗಳು, ಒಂದು 370 ಬೋಟು, ಒಂದು ನಾಡದೋಣಿ ಹಾಗೂ ಬೋಟಿನಲ್ಲಿದ್ದ ಇಂಜಿನ್, ಜನರೇಟರ್ ಸಹಿತ ಎಲ್ಲಾ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದರೆ, ಒಂದು ಪರ್ಸಿನ್ ಬೋಟು ಭಾಗಶ: ಹಾನಿಯಾಗಿದೆ. ದಡದಲ್ಲಿದ್ದ ಎರಡು ನಾಡದೋಣಿಗಳ ಹೊಸ ಮೀನುಗಾರಿಕೆ ಬಲೆ ಕೂಡ ಬೆಂಕಿಗಾಹುತಿಯಾಗಿದೆ. ಈ ದುರ್ಘಟನೆಯಲ್ಲಿ ಸುಮಾರು 6-7 ಕೋಟಿ ರೂ. ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದೆ.
ಅಗ್ನಿಶಾಮಕ ದಳದ ಮಂಗಳೂರು ಹಾಗೂ ಉಡುಪಿಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಕ್ಕೆ ಮಾರ್ಗದರ್ಶನ ನೀಡಿದರು. ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಸುಮಲತಾ, ಸಹಾಯಕ ನಿರ್ದೇಶಕಿ ಅಂಜನಾದೇವಿ, ಬಂದರು ಇಲಾಖೆ ಅಧಿಕಾರಿ, ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಕುಂದಾಪುರ ಡಿವೈಎಸ್‍ಪಿ ಬೆಳ್ಳಿಯಪ್ಪ, ಬೈಂದೂರು ಪೊಲೀಸ್ ವೃತ್ತನಿರೀಕ್ಷಕ ಸವಿತ್ರತೇಜ, ಕರಾವಳಿ ಕಾವಲು ಪೊಲೀಸ್ ಠಾಣೆಯ ಇನ್ಸಪೆಕ್ಟರ್ ನಂಜಪ್ಪ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕಕುಮಾರ್ ಶೆಟ್ಟಿ, ಕಾಂಗ್ರೆಸ್ ಬೈಂದೂರು ಬ್ಲಾಕ್ ಅಧ್ಯಕ್ಷ ಮದನ್ ಕುಮಾರ್, ಗೌರಿ ದೇವಾಡಿಗ, ಬಿ.ಎಸ್.ಸುರೇಶ ಶೆಟ್ಟಿ, ಶರತ್ ಕುಮಾರ್ ಶೆಟ್ಟಿ, ಸುರೇಂದ್ರ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.











