ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಮೀನುಗಾರಿಕಾ ಬೋಟುಗಳು ಅಗ್ನಿ ಆಕಸ್ಮಿಕದಿಂದ ಸುಟ್ಟು ಕರಕಲಾದ ಘಟನೆ ಖೇದಕರ. ಮುಂದಿನ ದಿನಗಳಲ್ಲಿ ಪ್ರತೀ ಮೀನುಗಾರಿಕಾ ಬೋಟುಗಳ ನಿಲುಗಡೆ ಸ್ಥಳಗಳಲ್ಲಿ ಅಗ್ನಿಶಾಮಕ ಹಾಗೂ ಪಂಪ್ ಸೆಟ್ ಸ್ಥಾಪನೆಗೆ ಮುಖ್ಯಮಂತ್ರಿಗಳೊಮದಿಗೆ ಚರ್ಚಿಸಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೈಂದೂರು ತಾಲೂಕಿನ ಗಂಗೊಳ್ಳಿಯ ಬಂದರಿನಲ್ಲಿ ಅಗ್ನಿ ದುರಂತ ನಡೆದ ಸ್ಥಳಕ್ಕೆ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಭೇಟಿ ನೀಡಿದರು. ಬಳಿಕ ಅಗ್ನಿ ಆಕಸ್ಮಿಕ ನಡೆದ ಸ್ಥಳವನ್ನು ವೀಕ್ಷಿಸಿದ ಸಚಿವರು, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಮೀನುಗಾರರೊಂದಿಗೆ ಚರ್ಚೆ ನಡೆಸಿದರು.
ಇದೊಂದು ಅಪರೂಪದ ದುರಂತ. ಇಲ್ಲಿ ಅಗ್ನಿ ಅವಘಡ ಹೇಗೆ ಸಂಭವಿಸಿದೆ ಎನ್ನುವುದೇ ನಿಗೂಢವಾಗಿದೆ. ಅಗ್ನಿ ದುರಂತದಿಂದ ಸುಮಾರು 13 ರಿಂದ 15 ಕೋಟಿ ರೂ ನಷ್ಟ ಅಂದಾಜಿಸಲಾಗಿದೆ. ಇನ್ನು 15 ದಿನಗಳಲ್ಲಿ ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಈ ಕುರಿತು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಮೀನುಗಾರಿಕೆ ಮತ್ತು ಬಂದರು ಸಚಿವರೊಂದಿಗೆ ಚರ್ಚಿಸಿ ಪರಿಹಾರ ಒದಗಿಸಲಾಗುವುದು ಎಂದರು. ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಉಡುಪಿ ಎಸ್ಪಿ ಡಾ.ಕೆ.ಅರುಣ್, ಮಾಜೀ ಶಾಸಕ ಕೆ. ಗೋಪಾಲ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.











