ಕುಂದಾಪುರ ಮಿರರ್ ಸುದ್ದಿ…
ಕೋಟ: ಕೌಟುಂಬಿಕ ಕಾರಣದಿಂದ ತಾಯಿಯಿಂದ ದೂರವಾಗಿ ಎಂಟು ವರ್ಷ ಕಾಲ ಭಾರತದಲ್ಲಿ ವಾಸವಾಗಿದ್ದ ಮಕ್ಕಳಿಬ್ಬರು ಕೋಟದ ಜೀವನ್ ಮಿತ್ರ ಸೇವಾ ಟ್ರಸ್ಟ್ ನೆರವಿನಿಂದ ಮರಳಿ ತಾಯಿ ಮಡಿಲು ಸೇರಿ ಫಿಜಿ ದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಫಿಜಿ ದೇಶದ ಪ್ರಜೆ ಕ್ರಿಶ್ಚಿನಾ ಎನ್ನುವವರು ಉಡುಪಿಯ ಕಾರ್ಕಳ ಮೂಲದ, ಫಿಜಿಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದ ಯುವಕನ್ನು ಮದುವೆಯಾಗಿದ್ದು ಇವರಿಗೆ ಪುತ್ರ ಹಾಗೂ ಪುತ್ರಿ ಇದ್ದರು. ಕೌಟುಂಬಿಕ ಸಮಸ್ಯೆಯಿಂದ ಇಬ್ಬರು ಹಲವು ವರ್ಷದ ಹಿಂದೆ ವಿಚ್ಚೇದನ ಪಡೆದಿದ್ದರು. ವಿಚ್ಚೇದನದ ಅನಂತರ ಎಂಟು ವರ್ಷದ ಹಿಂದೆ ಮಕ್ಕಳಾದ ಟ್ರೆಸ್ಸಿಮತ್ತು ಜೆಬ್ಬಾನ್ ಅವರನ್ನು ತಂದೆ ಫಿಜಿಯಿಂದ ಕಾರ್ಕಳಕ್ಕೆ ಕರೆತಂದು ಸಂಬಂಧಿಕರ ಮನೆಯಲ್ಲಿ ಬಿಟ್ಟು ಹೋಗಿದ್ದರು.
ಇತ್ತೀಚೆಗೆ ಈ ಇಬ್ಬರು ಮಕ್ಕಳು ಸಾಮಾಜಿಕ ಜಾಲತಾಣದ ಮೂಲಕ ತಾಯಿಯನ್ನು ಸಂಪರ್ಕಿಸಿ ತಾವು ಫಿಜಿ ದೇಶಕ್ಕೆ ಬರುವುದಾಗಿ ಕೋರಿದ್ದರು. ಆದರೆ ವೀಸಾ ಅವಧಿ ಮುಗಿದು ಹಲವು ವರ್ಷ ಕಳೆದಿದ್ದರಿಂದ ಹಿಂದಿರುಗಲು ಕಾನೂನು ಪ್ರಕ್ರಿಯೆ ಕಠಿನವಿತ್ತು, ಅದರಂತೆ ಕ್ರಿಶ್ಚಿನಾ ಅವರು ಫಿಜಿಯಲ್ಲಿ ವಾಸವಿದ್ದ ಕೋಟ ಮೂಲದ ರಾಮ ಮೊಗವೀರ ಅವರಲ್ಲಿ ಮಕ್ಕಳನ್ನು ವಾಪಸು ಕರೆಸಲು ಸಹಕಾರ ನೀಡುವಂತೆ ಕೋರಿದ್ದರು.
ಮಕ್ಕಳು ಮರಳಿ ತಾಯಿ ಮಡಿಲಿಗೆ
ಜೀವನ್ ಮಿತ್ರ ಸಂಘಟನೆಯವರು ಮಕ್ಕಳನ್ನು ಪತ್ತೆಹಚ್ಚಿ ಕಾನೂನಾತ್ಮಕ ಪ್ರಕ್ರಿಯೆ ನೆರವೇರಿಸಿದ್ದರು. ಕ್ರಿಶ್ಚಿನಾ ಅವರು ನ.15 ರಂದು ಕೋಟಕ್ಕೆ ಆಗಮಿಸಿ ತಮ್ಮ ಮಕ್ಕಳೊಂದಿಗೆ ಫಿಜಿ ದೇಶಕ್ಕೆ ಹಿಂದಿರುಗಿದ್ದಾರೆ. ಸಂಘಟನೆಯ ಮುಖ್ಯಸ್ಥರಾದ ನಾಗೇಂದ್ರ ಪುತ್ರನ್, ನಾಗರಾಜ್ ಪುತ್ರನ್ ಈ ಕಾರ್ಯದಲ್ಲಿ ಶ್ರಮಿಸಿದ್ದು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆಯವರು ಮತ್ತು ಜಿಲ್ಲಾ ಪೆÇಲೀಸರು, ವಿದೇಶಾಂಗ ವ್ಯವಹಾರ ಕಚೇರಿಯ ಮುಖ್ಯಸ್ಥರು ಕಾನೂನು ಪ್ರಕ್ರಿಯೆ ನಿರ್ವಹಿಸಲು ಸಹಕರಿಸಿದ್ದಾರೆ ಎಂದು ಜೀವನ್‍ಮಿತ್ರ ಸಂಘಟನೆಯ ಮುಖ್ಯಸ್ಥರು ತಿಳಿಸಿದ್ದಾರೆ.











