ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ದೇಶದ ಎಲ್ಲಾ ವ್ಯವಸ್ಥೆಗಳನ್ನು ವ್ಯವಸ್ಥಿತವಾಗಿ ಮುನ್ನೆಡೆಸುವ ಕಾರ್ಯನಿರ್ವಹಿಸುವ ಕೆಲಸ ಮಾಧ್ಯಮಗಳು ಮಾಡುತ್ತಿವೆ. ಮಾಧ್ಯಮಕ್ಷೇತ್ರದಲ್ಲಿ ಒಂದು ಹೊಸಹೊಸ ಬದಲಾವಣೆಗಳು ಆಗಿವೆ. ಜನರ ಧ್ವನಿಯಾಗಿ ಮಾದ್ಯಮಗಳು ಕಾರ್ಯನಿರ್ವಹಿಸುತ್ತಿವೆ ಎಂದು ಉದ್ಯಮಿ ಡಾ.ಎಚ್.ಎಸ್ ಶೆಟ್ಟಿ ಅಭಿಪ್ರಾಯಪಟ್ಟರು.
ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಕೋಟೇಶ್ವರದ ಸಹನಾ ಕನ್ವೆನ್ಷನ್ ಸೆಂಟರ್‍ನ ಸುಮುಖಾ ಮಿನಿ ಹಾಲ್‍ನಲ್ಲಿ ನಡೆದ ಬೆಳಗಾವಿ ವಿಶ್ವವಿದ್ಯಾನಿಲಯದ ಡಾಕ್ಟರ್ ಆಫ್ ಸೈನ್ಸ್ ಗೌರವ ಡಾಕ್ಟರೇಟ್ ಗೌರವ ಪಡೆದಿರುವ ಹಾಲಾಡಿ ಕುದ್ರುಮನೆ ಶ್ರೀನಿವಾಸ ಶೆಟ್ಟಿಯವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪತ್ರಿಕಾ ಮಾಧ್ಯಮ ಕ್ಷೇತ್ರದಕ್ಕೆ ಹೊಸ ತಾಂತ್ರಿಕತೆ, ಡಿಜಿಟಲ್ ಮಾಧ್ಯಮಗಳ ಪ್ರವೇಶವಾಗಿದೆ. ಹೊಸ ಹೊಸ ಸವಾಲುಗಳನ್ನು ಸ್ವೀಕರಿಸಿ ಅದನ್ನು ಅಳವಡಿಸಿಕೊಂಡು ಮುನ್ನೆಡೆಯುವ ಸಂದಿಗ್ದತೆಯೂ ಪ್ರಸ್ತುತ ಇದೆ. ಓದುವ ಆಸಕ್ತಿ ಯುವಜನಾಂಗದಲ್ಲಿ ಬೆಳೆಯಬೇಕು ಎಂದರು.
ದೇಶದಲ್ಲಿ ಇಂದು ಮಾಧ್ಯಮಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ನಂತರ ನಡೆದ ಸಂವಾದದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಈ ಭಾಗದಲ್ಲಿ ಉದ್ಯಮ ಆರಂಭಿಸಲು ಪರಿಸ್ಥಿತಿ ಪ್ರತಿಕೂಲವಾಗಿದೆ. ಉದ್ಯಮಗಳನ್ನು ಆರಂಭಿಸಲು ಸರಿಯಾದ ಪೂರಕವಾದ ವಾತಾವರಣಗಳು ಇರಬೇಕಾಗುತ್ತದೆ. ನನಗೂ ಕೂಡಾ ಹುಟ್ಟೂರಿನ ಜನರಿಗೆ ಉದ್ಯೋಗವಕಾಶಗಳನ್ನು ಕಲ್ಪಿಸುವ ಚಿಂತನೆ ಇದೆ ಎಂದರು.
ನಾನು ರಾಜಕೀಯಕ್ಕೆ ಬರುವುದಿಲ್ಲ. ರಾಜಕೀಯ ಅಪೇಕ್ಷೆಯಿಂದ ನಾನು ಸೇವೆ ಮಾಡುತ್ತಿಲ್ಲ. ರಾಜಕೀಯ ಇಲ್ಲದೇ ಜನಸೇವೆ ಮಾಡಲು ಸಾಧ್ಯವಿದೆ. ರಾಜಕೀಯ ಅನಿವಾರ್ಯವೂ ಅಲ್ಲ ಎಂದು ಅವರು ಪ್ರಶೆಯೊಂದಕ್ಕೆ ಉತ್ತರಿಸಿದರು.
ಕೋವಿಡ್ ಬಳಿಕ ಸಣ್ಣ ವ್ಯವಹಾರಗಳಿಗೆ ತೊಂದರೆಯಾಗಿದೆ. ದೊಡ್ಡ ಉದ್ಯಮಗಳಿಗೆ ಅಂತಹ ಸಮಸ್ಯೆಯಾಗಲಿಲ್ಲ. ಈಗ ಎಲ್ಲವೂ ಸರಿಯಾಗಿದೆ ಎಂದರು.
ಶಿಕ್ಷಣ ವ್ಯವಸ್ಥೆ ಬಲಿಷ್ಠವಾಗಬೇಕು. ಸರ್ಕಾರಿ ಶಾಲೆಗಳು ಬಲಹೊಂದಬೇಕು. ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ದೊರಕುವಂತಾಗಬೇಕು. ನಾನು ಬಡತನವನ್ನು ಸ್ವತಃ ಅನುಭವಿಸಿದವ. ಭಂಡಾರ್ಕಾಸ್ ಕಾಲೇಜಿನಲ್ಲಿ ನಾನು ಓದಿದವ. ಮುಂದೆ ದಾರಿಗಳು ನನ್ನ ಮುಂದೆ ಇದ್ದವು. ಪತ್ರಿಕೆಯೊಂದಲ್ಲಿ ಕೆಲಸ ಸಿಕ್ಕಿತು. ನನ್ನ ಮುಂದೊಂದು ಗುರಿ ಇತ್ತು. ಅದಕ್ಕಾಗಿ ಕೆಲಸ ಬಿಟ್ಟು ಗುರಿಯತ್ತ ಮುನ್ನೆಡೆದೆ. ನಿರಂತರ ಪರಿಶ್ರಮದ ಮೂಲಕ ಯಶಸ್ಸು ಸಾಧಿಸಿದೆ ಎಂದರು.
ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಡಾ.ಎಚ್.ಎಸ್.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಲೋಕೇಶ್ ಆಚಾರ್ಯ ತೆಕ್ಕಟ್ಟೆ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಗಣೇಶ ಬೀಜಾಡಿ ಸ್ವಾಗತಿಸಿದರು. ರಾಘವೇಂದ್ರ ಪೈ ಸನ್ಮಾನ ಪತ್ರ ವಾಚಿಸಿದರು. ಸತೀಶ್ ಆಚಾರ್ ಉಳ್ಳೂರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಶ್ರೀಕರ ವಂದಿಸಿದರು. ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು











