ಶಿವಮೊಗ್ಗ ಲೋಕಸಭಾ ಚುನಾವಣೆ ಮಧ್ಯಾಹ್ನದವರೆಗೆ ಬಿರುಸಿನ ಮತದಾನ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕಟ್ಟೆಚ್ಚರ ವಿವಿಧ ಪಕ್ಷಗಳ ಮುಖಂಡರಿಂದ ಮತದಾನ – ಮತಗಟ್ಟೆಯಲ್ಲಿ ಮತ ಚಲಾಯಿಸಿದ 95ರ ವೃದ್ಧೆ – ಹಲವು ಮತಗಟ್ಟೆಯಲ್ಲಿ ನವದುರ್ಗೆಯರಿಂದ ಮತದಾನಕ್ಕೆ ಚಾಲನೆ

0
320

Click Here

Click Here

ಕುಂದಾಪುರ ಮಿರರ್ ಸುದ್ದಿ…

ಬೈಂದೂರು: ದೇಶದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಇಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನ ಮೇ7ರಂದು ಬೆಳಿಗ್ಗೆಯಿಂದಲೇ ನಡೆಯುತ್ತಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ವ್ಯಾಪ್ತಿಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರವೂ ಸೇರಿರುವುದರಿಂದ ಬೈಂದೂರು ಕ್ಷೇತ್ರದಾದ್ಯಂತ ಮತದಾನ ಪ್ರಕ್ರಿಯೆ ಆರಂಭಗೊಂಡಿತು.

ಬಿಜೆಪಿಯ ಸಂಕಲ್ಪದಂತೆ ವಿವಿಧ ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಸ್ವಘೋಷಿತ ನವದುರ್ಗೆಯರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುವ ಮೂಲಕ ಮತದಾನಕ್ಕೆ ಚಾಲನೆ ನೀಡಿದರು. ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 95ರಲ್ಲಿ ನವದುರ್ಗೆಯರಿಂದ ಮತದಾನ ನಡೆಯಿತು.

ಶಿಕಾರಿಪುರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರು ತನ್ನ ತಂದೆ, ಮಾಜೀ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಹೋದರ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಕುಟುಂಬಿಕರ ಜೊತೆ ಮತ ಚಲಾಯಿಸಿದರು. ಈ ಸಂದರ್ಭ ಮಾತನಾಡಿದ ಅವರು, ದೇಶಕ್ಕೆ ಮತ್ತೊಮ್ಮೆ ಮೋದಿ ಪ್ರದಾನಿಯಾಗುವ ನಿಟ್ಟಿನಲ್ಲಿ ಮತದಾರರು ಬಿಜೆಪಿ ಕೈ ಹಿಡಿಯಲಿದ್ದಾರೆ ಎಂದರು. ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ 26 ಸೀಟು ಗೆಲ್ಲುವ ಭರವಸೆ ವ್ಯಕ್ತಪಡಿಸಿದರು. ವಿಜಯೇಂದ್ರ ಮಾತನಾಡಿ, ಕಾಂಗ್ರೆಸ್ ನ‌ ಸುಳ್ಳು ಭರವಸೆಗಳಿಗೆ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

Click Here

ಶಿವಮೊಗ್ಗ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಶಿವಮೊಗ್ಗ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕುಟುಂಬದವರ ಜೊತೆ ಆಗಮಿಸಿ ಮತದಾನ ಮಾಡಿದರು.

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ತಮ್ಮ ಊರಾದ ಕಂಚಿಕಾನ್ ಶಾಲೆಯಲ್ಲಿ ಮತದಾನ ಮಾಡಿದರು. ಬಳಿಕ ಮಾತನಾಡಿದ ಅವರು, ಪ್ರಚಾರ ಸಂದರ್ಭದಲ್ಲಿ ಬಿಜೆಪಿ ನೀಡಿದ ಭರವಸೆಗಳಿಗೆ ಮತದಾರರು ಸ್ಪಂದಿಸಿದ್ದಾರೆ. ಪ್ರಥಮ ಮತ ಚಲಾಯಿಸಲು ತಾಯಂದಿರು ಮುಂದೆ ಬಂದಿದ್ದಾರೆ. ಒಂದು ಲಕ್ಷ ಲೀಡ್ ಬಂದರೆ ಮೋದಿಯವರನ್ನು ಕೊಲ್ಲೂರಿಗೆ ಕರೆಸುವುದಕ್ಕೆ ಈಗಲೂ ಬದ್ಧವಾಗಿದ್ದೇವೆ ಎಂದರು.

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರು ತಾಯಿ ಸುನಂದಾ ಹಾಗೂ ಮಗಳು ಮಹಿಮಾ ಕೊಡ್ಗಿ ಜೊತೆಗೂಡಿ ಬಂದು ಅಮಾಸೆಬೈಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು.

ಕೆರಾಡಿ ಗ್ರಾಮದ ಬೆಳ್ಳಾಲದ ಮೂಡುಮುಂದ ಮತಗಟ್ಟೆಯಲ್ಲಿ ಮಾಜೀ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಮತ ಚಲಾಯಿಸಿದರು. ಈ ಸಂದರ್ಭ ಮಾತನಾಡಿದ ಅವರು, ಈ ಬಾರಿ ಮತದಾರರು ಪರಿವರ್ತನೆಯ ಬಗ್ಗೆ ಚಿಂತಿಸಿದ್ದಾರೆ. ಸುಳ್ಳುಗಳಿಂದ ಜನರನ್ನು ವಂಚಿಸುತ್ತಿರುವುದನ್ನು ಜನ ಅರ್ಥ ಮಾಡಿಕೊಂಡಿದ್ದಾರೆ. ಹಾಗಾಗಿ ಮತದಾರರು ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂದರು.

ಬೈಂದೂರು ವಿಧಾನಸಭಾ ಕ್ಷೇತ್ರದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಒಂದಾದ ಹಳ್ಳಿಹೊಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಳುಗೋಡು ಮತಗಟ್ಟೆ ಸಂಖ್ಯೆ 139ರಲ್ಲಿ 96 ವರ್ಷ ಪ್ರಾಯದ ವಯೋವೃದ್ಧೆ ಮತದಾನ ಮಾಡಿದರು. ಹಿರಿಯರಿಗೆ ಮನೆಯಲ್ಲಿಯೇ ಮತದಾನ ಮಾಡುವ ಅವಕಾಶವಿದ್ದರೂ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿ, ಮೊದಲಿನಿಂದಲೂ ಮತಗಟ್ಟೆಯಲ್ಲಿಯೇ ಬಂದು ಮತ ಚಲಾಯಿಸಿದ್ದು, ಅದು ಖುಷಿ ಎನ್ನುತ್ತಾರೆ ಅವರ ಮನೆಯವರು.

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 246 ಮತಗಟ್ಟೆಗಳಿದ್ದು ಅದರಲ್ಲಿ 70 ಸೂಕ್ಷ್ಮ ಮತಗಟ್ಟೆ ಇದೆ. ಅದರಲ್ಲಿ 19 ಮತಗಟ್ಟೆ ನಕ್ಸಲ್ ಪೀಡಿತ ಮತಗಟ್ಟೆ ಇದ್ದು, ನಕ್ಸಲ್ ಪೀಡಿತ ಮತಗಟ್ಟೆಗಳಲ್ಲಿ ಕೇಂದ್ರ ಸಶಕ್ತ ಮೀಸಲು ಪಡೆ ನಿಯೋಜಿಸಲಾಗಿದ್ದು. ಶಾಂತಿಯುತ ಮತದಾನ ನಡೆದಿದೆ. ಮತಗಟ್ಟೆಗಳಲ್ಲಿ ಕುಡಿಯುವ ನೀರು, ವೈದ್ಯಕೀಯ ಸೌಲಭ್ಯವನ್ನು ಒದಗಿಸಲಾಗಿದ್ದು, ಬಿಸಿಲಿನ ಬೇಗೆಗೆ ಒಆರ್ಎಸ್ (ORS) ಎನರ್ಜಿ ಪಾನೀಯದ ವ್ಯವಸ್ಥೆ ಮಾಡಲಾಗಿದೆ. ಮತದಾರರು ನಿರ್ಭತಿಯಿಂದ ಹುಮ್ಮಸ್ಸಿನಿಂದ ಮತ ಚಲಾಯಿಸಿದರು. ಒಟ್ಟಾರೆಯಾಗಿ ಬೆಳಿಗ್ಗೆಯಿಂದಲೇ ಮತದಾನ ಆರಂಭವಾಗಿದ್ದು, ಬೆಳಿಗ್ಗೆ ನೀರಸ ಮತದಾನ ನಡೆಯುತ್ತಿದೆ ಎನ್ನಲಾಗಿದೆ.

Click Here

LEAVE A REPLY

Please enter your comment!
Please enter your name here