ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕೋಟೇಶ್ವರ ಗ್ರಾಮ ಪಂಚಾಯತ್ ನ ಅಂಕದಕಟ್ಟೆ (3 ನೇ) ವಾರ್ಡ್ ನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ, ವಿದ್ಯಾರ್ಥಿ ವೇತನ ವಿತರಣೆ ನಡೆಯಿತು.
ಕೋಟೇಶ್ವರ ಪಂಚಾಯತ್ ಸದಸ್ಯ ಲೋಕೇಶ್ ಅಂಕದಕಟ್ಟೆ ಅವರ ನೇತೃತ್ವದಲ್ಲಿ ದಾನಿಗಳಾದ ಸಿ. ಎ. ಸತೀಶ್ ದೇವಾಡಿಗ, ವತ್ಸಲಾ ದಯಾನಂದ ಶೆಟ್ಟಿ, ಸುರೇಶ್ ಶೆಟ್ಟಿ ಯುವ ಗಾರ್ಡೇನಿಯ ಅವರ ತುಂಬು ಹೃದಯದ ಸಹಕಾರದೊಂದಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 75 ಶೇಕಡಕ್ಕಿಂತ ಅಧಿಕ ಅಂಕವನ್ನು ಪಡೆದ ಅಂಕದಕಟ್ಟೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಶ್ರಾವ್ಯ ದೇವಾಡಿಗ, ಕಿಶನ್ ದೇವಾಡಿಗ, ತರುಣ್ ಶೇರುಗಾರ್, ಸ್ಪಂದನ ದೇವಾಡಿಗ, ಪಾವನಿ ಶೇರಿಗಾರ್ ಇವರಿಗೆ ಸನ್ಮಾನಿಸಿ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರ ತಾಲ್ಲೂಕು ಆಸ್ಪತ್ರೆಯ ವೈದ್ಯಾಧಿಕಾರಿಯಾದ ಡಾ. ನಾಗೇಶ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಉನ್ನತ ಶಿಕ್ಷಣದ ಬಗ್ಗೆ ಮಾಹಿತಿ ನೀಡಿ, ಶಿಕ್ಷಣದ ಜೊತೆಜೊತೆಗೆ ಸಮಾಜಕ್ಕಾಗಿ ದುಡಿಯುವ ವ್ಯಕ್ತಿಗಳಾಗಿ ರೂಪುಗೊಳ್ಳಬೇಕೆಂಬ ಸ್ಪೂರ್ತಿದಾಯಕ ಮಾತುಗಳನ್ನಾಡಿ, ದಾನಿಗಳಾದ ವತ್ಸಲಾ ದಯಾನಂದ ಶೆಟ್ಟಿ, ಕೋಟೇಶ್ವರ ಪಂಚಾಯತ್ ಅಧ್ಯಕ್ಷೆ ರಾಗಿಣಿ ದೇವಾಡಿಗ, ವಾರ್ಡ್ ಸದಸ್ಯ ಲೋಕೇಶ್ ಅಂಕದಕಟ್ಟೆ ಅವರೊಂದಿಗೆ ಮಕ್ಕಳನ್ನು ಸನ್ಮಾನಿಸಿ ವಿದ್ಯಾರ್ಥಿ ವೇತನ ವಿತರಿಸಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಪೋಷಕರು, ಶಿಕ್ಷಣ ಪ್ರೇಮಿಗಳು, ಊರ ನಾಗರಿಕರು ಉಪಸ್ಥಿತರಿದ್ದರು.











