ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕಾಲೇಜಿನಲ್ಲಿ ವರ್ಗಾವಣೆ ಪ್ರಮಾಣ ಪತ್ರ ನೀಡದೇ ಬೈಂದರೆಂದು ಬೇಸರಗೊಂಡ ಬಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರೂರು ಗ್ರಾಮದ ಮೇಲ್ಪಂಕ್ತಿ ಎಂಬಲ್ಲಿ ಸೋಮವಾರ ನಡೆದಿದೆ. ಇಲ್ಲಿನ ನಿತಿನ್ ಆಚಾರಿ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ನಿತಿನ್ ಬೈಂದೂರು ಸರಕಾರಿ ಪ್ರೌಢಶಾಲೆ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದು ಪ್ರಸ್ತುತ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು ಸೋಮವಾರ ಕಾಲೇಜಿಗೆ ವರ್ಗಾವಣೆ ಪ್ರಮಾಣ ಪತ್ರ ಪಡೆಯಲು ಹೋದಾಗ ಶಿಕ್ಷಕರು ಬೈದ್ದಿದ್ದಾರೆ ಎನ್ನುವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರ ಆರೋಪ ಮಾಡಿದ್ದಾರೆ. ಈ ಬಗ್ಗೆ ನಿತಿನ್ ಡೆತ್ ನೋಟ್ ಬರೆದಿಟ್ಟಿದ್ದು ಪತ್ತೆಯಾಗಿದ್ದು, ಅದರಲ್ಲಿ ಕೆಳಗಿನಂತೆ ಬರೆಯಲಾಗಿದೆ.
“ಅಮ್ಮ ಅಪ್ಪ ನಾನು ನಿಮ್ಮ ಹತ್ತಿರ ತುಂಬಾ ವಿಷಯ ಮುಚ್ಚಿಟ್ಟಿದ್ದೆ. ನೀವು ನನಗೆ ಬೈತೀರಾ ಅಂತ. ನಾನು ಶಾಲೆಗೆ ಹೋದಾಗ ನಿನಗೆ ಟಿಸಿ ಕೊಡಕ್ಕೆ ಆಗಲ್ಲ. ನೀನು ಸಿಸಿಟಿವಿ ಮುರಿದಿದ್ದೀಯಾ ಮತ್ತು ಟಾಯ್ಲೆಟ್ ಗೇಟ್ ಕಿತ್ತು ಬೇರೆ ಕಡೆ ಹೊತ್ತಾಕಿದ್ದೀಯಾ. ಆದರೆ ನಿನ್ನ ಪೇರೆಂಟ್ಸ್ ನ ಕರ್ಕೊಂಡು ಬರಬೇಕು ಮತ್ತು ಅದರ ದಂಡ ಕಟ್ಟಬೇಕು ಎಂದು ಹೇಳಿದ್ರು ಆದರೆ ನಿಮ್ಮ ಕಷ್ಟ ನೋಡಕ್ಕಾಗದೆ ನಾನು ನಿಮ್ಮ ಹತ್ತಿರ ಹೇಳಲು ಹೋಗಲಿಲ್ಲ. ಅವರು ಶಾಲೆಯಲ್ಲಿ ತುಂಬಾ ಅವಮಾನ ಮಾಡಿದರು. ಅದು ನನ್ನ ಹತ್ತಿರ ಸಹಿಸಿಕೊಳ್ಳಲು ಆಗಲಿಲ್ಲ. ನಾನು ಹೇಳಿದೆ ಅದನ್ನು ನಾನು ಮಾಡಿಲ್ಲ ಅಂತ. ಆದರೆ ಅವರು ನೀನೇ ಮಾಡಿದಿಯಾ ಅಂತ ಹೇಳಿದರು. ನಾನು ಹೇಳಿ ಟಿಸಿ ಆದರೂ ಕೊಡಿ ನಾನು ಕಾಲೇಜು ಅಡ್ಮಿಶನ್ಗೆ ಹೋಗಬೇಕಂತ. ಆದರೆ ನಿಮ್ಮನ್ನು ಕರೆದುಕೊಂಡು ಬಂದು ರಿಪೇರಿ ಮಾಡಿಸಿಕೊಟ್ಟು ಟಿಸಿ ತಕ್ಕೊಂಡು ಹೋಗಬೇಕಂತ ಹೇಳಿದ್ದಾರೆ ನನಗೆ ಆದರೆ ನಾನು ಯಾರ ಹತ್ತಿರ..”
ಈ ಬಗ್ಗೆ ಪ್ರೌಢಶಾಲೆಯ ಮುಖ್ಯೋಪಾದ್ಯಾಯ ಸುರೇಶ್ ಭಟ್ ಅವರಲ್ಲಿ ದೂರವಾಣಿ ಮೂಲಕ ಮಾತನಾಡಿದಾಗ, ಕಾಲೇಜು ಪ್ರಾಂಶುಪಾಲರು ಈ ಬಗ್ಗೆ ಲಿಖಿತವಾಗಿ ನಾಲ್ಕು ವಿದ್ಯಾರ್ಥಿಗಳ ಹೆಸರು ನೀಡಿ, ವರ್ಗಾವಣೆ ಪ್ರಮಾಣ ಪತ್ರ ಪಡೆಯಲು ಬಂದಾಗ ತನ್ನನ್ನು ಸಂಪರ್ಕಿಸುವಂತೆ ಹೇಳಿದ್ದರು. ಅದರಂತೆ ಕಾಲೇಜು ಪ್ರನ್ಸಿಪಾಲರ ಬಳಿ ಕಳಿಸಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ನಿತಿನ್ ಆತ್ಮಹತ್ಯೆಗೆ ಸಂಬಂಧಿಸಿ ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











