ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟ ಸಹಕಾರಿ ವ್ಯವಸಾಯಕ ಸಂಘ ಕೋಟ ಇದರ 64ನೇ ವಾರ್ಷಿಕ ಸಭೆಯು ವರ್ಚುವಲ್ ಮೀಟಿಂಗ್ ಮೂಲಕ ಇತ್ತೀಚಿಗೆ ಸಂಘದ ಪ್ರಧಾನ ಕಛೇರಿಯಲ್ಲಿ ಸಂಘದ ಅಧ್ಯಕ್ಷ ಜಿ. ತಿಮ್ಮ ಪೂಜಾರಿ ಅಧ್ಯಕ್ಷತೆಯಲ್ಲಿ ಜರಗಿತು.
ಸಂಘದ ನಿರ್ದೇಶಕ ಟಿ. ಮಂಜುನಾಥ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಗೆ ಆಗಮಿಸಿದ ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ವಿವೇಕ ಪದವಿಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಶ್ರೀನಿವಾಸ ಸೋಮಯಾಜಿ ಹಾಗೂ ನಿವೃತ್ತ ಸೈನಿಕ ಮತ್ತು ಆಶಿತಾ ಎಂಟರ್‍ಪ್ರೈಸಸ್, ಸಾಸ್ತಾನ ಮಾಲಕ ಆನಂದ ಮರಕಾಲ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸಭೆಯಲ್ಲಿ ಹಿರಿಯ ಸದಸ್ಯರುಗಳನ್ನು ಸನ್ಮಾನಿಸಲಾಯಿತು.
2020-21ನೇ ಸಾಲಿನ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ನರೇಂದ್ರ ಕುಮಾರ್ ಕೋಟ, ಬಿ. ಪ್ರವೀಣ ಹೆಗ್ಡೆ ಮತ್ತು ಪಿ. ವಿ. ಆನಂದ ಇವರನ್ನು ಅಭಿನಂದಿಸಲಾಯಿತು.
ಸಂಘದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ. ಶೋಭಾ ಮತ್ತು ವ್ಯವಸ್ಥಾಪಕ ವೈಕುಂಠ ಶೆಟ್ಟಿ ಸನ್ಮಾನಿಸಲಾಯಿತು. ಸಂಘದ ಕಾರ್ಯವ್ಯಾಪ್ತಿಯ ಶಾಲೆಗಳ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಅಧಿಕ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಹ ಧನ ನೀಡಿ ಪುರಸ್ಕರಿಸಲಾಯ್ತು.
ಇದೇ ಸಂದರ್ಭ ಸಂಘದಲ್ಲಿ ಅತ್ಯುತ್ತಮ ವ್ಯವಹಾರ ನಡೆಸಿದ ಶಾಖೆಗಳನ್ನು ಘೋಷಿಸಲಾಯಿತು. ಅಂಗವಿಕಲ ದತ್ತಿನಿಧಿ ಮತ್ತು ಸದಸ್ಯರ ಕಲ್ಯಾಣ ನಿಧಿಯಿಂದ ಅರ್ಹ ಫಲಾನುಭವಿಗಳಿಗೆ ಸಹಾಯಧನ ವಿತರಿಸಲಾಯ್ತು. ಕೃಷಿ ಆವರ್ತನಾ ನಿಧಿಯಿಂದ ಉನ್ನತ ಕೃಷಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಗೌರವ ಧನ ವಿತರಿಸಲಾಯ್ತು. ಇದೇ ಸಂದರ್ಭ ಆಸರೆ ಯುವಕ ಮಂಡಲ, ಚಿತ್ರಪಾಡಿ ಇವರು ಸಂಘವನ್ನು ಗೌರವಿಸಿದರು.
ಸಂಘದ ಅಧ್ಯಕ್ಷರು 2020-21ನೇ ಸಾಲಿನ ವರದಿಯನ್ನು ವಾಚಿಸಿ, ಸಂಘವು 13 ಶಾಖೆಗಳನ್ನು ಹೊಂದಿ ಉತ್ತಮ ಪ್ರಗತಿ ಸಾಧಿಸಿ, ರೂ.144.69 ಕೋಟಿ ಠೇವಣಿ, ರೂ.99.43 ಕೋಟಿ ಸಾಲ ಹೊರಬಾಕಿಯಿದ್ದು, ರೂ.159ಕೋಟಿಗೂ ಮಿಕ್ಕಿ ದುಡಿಯುವ ಬಂಡವಾಳವನ್ನು ಸಂಗ್ರಹಿಸಿದೆ. ವರದಿ ಸಾಲಿನಲ್ಲಿ ರೂ.483 ಕೋಟಿಗೂ ಮಿಕ್ಕಿ ವ್ಯವಹಾರ ಮಾಡಿ ರೂ.2.57ಕೋಟಿಗೂ ಮಿಕ್ಕಿ ನಿವ್ವಳ ಲಾಭ ಗಳಿಸಿ ಸಂಘದ ಸದಸ್ಯರಿಗೆ ಶೇ.15ರ ಡಿವಿಡೆಂಡ್ ಘೋಷಿಸಿರುವುದಾಗಿ ಸಭೆಗೆ ತಿಳಿಸಿದರು.
ಸಂಘದ ಉಪಾಧ್ಯಕ್ಷ ಜಿ. ರಾಜೀವ ದೇವಾಡಿಗ, ನಿರ್ದೇಶಕರುಗಳಾದ ಕೆ. ಉದಯ ಕುಮಾರ್ ಶೆಟ್ಟಿ, ಟಿ. ಮಂಜುನಾಥ, ಡಾ. ಕೆ. ಕೃಷ್ಣ ಕಾಂಚನ್, ರವೀಂದ್ರ ಕಾಮತ್, ಮಹೇಶ ಶೆಟ್ಟಿ, ರಾಜೇಶ್ ಉಪಾಧ್ಯ, ಗೀತಾ ಶಂಭು ಪೂಜಾರಿ, ನಾಗರಾಜ ಹಂದೆ, ಪ್ರೇಮಾ ಎಸ್. ಪೂಜಾರಿ, ರಂಜಿತ್ ಕುಮಾರ್, ಕುಮಾರಿ ರಶ್ಮಿತಾ, ಬಿ. ವಸಂತ ಶೆಟ್ಟಿ, ಕೆ. ಶ್ರೀಕಾಂತ ಶೆಣೈ ಮತ್ತು ಗುಲಾಬಿ ಡಿ. ಬಂಗೇರ ಇವರು ಉಪಸ್ಥಿತರಿದ್ದರು.
ಸಭೆಯ ಕೊನೆಯಲ್ಲಿ ಸಂಘದ ಸದಸ್ಯರಿಗೂ ಮತ್ತು ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಪ್ರಭಾರ) ಶರತ ಕುಮಾರ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಕುಮಾರಿ ಪ್ರತೀಕ್ಷಾ ಪ್ರಾರ್ಥಿಸಿದರು. ಸಂಘದ ಸಿಬ್ಬಂದಿ ಶಾಲಿನಿ ಹಂದೆ ಕಾರ್ಯಕ್ರಮ ನಿರೂಪಿಸಿದರು.











