ಕುಂದಾಪುರ ಮಿರರ್ ಸುದ್ದಿ…
ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಇದರ ಆಡಳಿತ ಮಂಡಳಿಯ ವತಿಯಿಂದ ಇತ್ತೀಚಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭ ಶನಿವಾರ ಶ್ರೀ ದೇವಳದ ಜ್ಞಾನಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರಾದ ವೇ.ಮೂ ಮಧುಸೂದನ ಬಾಯರಿ,ಸಾಲಿಗ್ರಾಮದ ಪ್ರಸಿದ್ಧ ವೈದ್ಯ ಡಾ.ಸುಧಾಕರ್ ಹಂದೆ, ಸಾಹಿತಿ ಪಾರ್ವತಿ ಐತಾಳ್ ಇವರುಗಳನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಸಿ ಮಾತನಾಡಿದ ವೇ.ಮೂ.ಮಧುಸೂದನ ಬಾಯರಿ ವಿದ್ಯೆ ಎಂಬುವುದು ಸಾಗರವಿದ್ದಂತೆ ನಾನು ಇನ್ನೂ ಅದರಲ್ಲಿ ವಿದ್ಯಾರ್ಥಿ ಅಷ್ಟೆ, ಪ್ರಚಲಿತ ವಿದ್ಯಮಾನದಲ್ಲಿ ಕಲಿಯುವುದು ಸಾಕಷ್ಟಿವೆ.ಪರಿಶ್ರಮದ ಮೂಲಕ ಯಶಸ್ಸು ಗಳಿಸಲು ಸಾಧ್ಯ ಈ ನಿಟ್ಟಿನಲ್ಲಿ ಪ್ರಶಸ್ತಿ ಸನ್ಮಾನಗಳು ಇನ್ನಷ್ಟು ಕೆಲಸ ನಿರ್ವಹಿಸಲು ಪ್ರೇರಕ ಶಕ್ತಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆಯನ್ನು ದೇವಳದ ಅಧ್ಯಕ್ಷ ಡಾ.ಕೆ.ಎಸ್ ಕಾರಂತ್ ವಹಿಸಿದ್ದರು. ಬ್ರಾಹ್ಮಣಪರಿಷತ್ ರಾಜ್ಯ ನಿರ್ದೇಶಕ ಶಿವರಾಮ ಉಡುಪ ಅಭಿನಂದನಾ ಮಾತಗಳನ್ನಾಡಿದರು.
ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಲತಾ ಎಸ್ ಹೆಗ್ಡೆ, ದೇವಳದ ಆಡಳಿತ ಮಂಡಳಿಯ ಸದಸ್ಯ ಸದಾಶಿವ ಐತಾಳ್, ಪರುಶರಾಮ್ ಭಟ್ ಉಪಸ್ಥಿತರಿದ್ದರು.
ದೇವಳದ ಆಡಳಿತ ಮಂಡಳಿಯ ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ ಸ್ವಾಗತಿಸಿದರು. ಕಾರ್ಯಕ್ರಮವನ್ಮು ಸಾಲಿಗ್ರಾಮ ವಲಯ ಬ್ರಾಹ್ಮಣ ಮಹಾಸಭಾ ಕಾರ್ಯದರ್ಶಿ ಕೆ.ರಾಜಾರಾಮ್ ಐತಾಳ್ ನಿರೂಪಿಸಿದರು.











