ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು ಹೆಮ್ಮಾಡಿ – “ಜನತಾ ನವನೀತ -2024” ಅಭಿವಿನ್ಯಾಸ (Fresher’s Day)
ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಸವಾಲು ಮತ್ತು ಸೋಲನ್ನು ಎದುರಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಹೊಂದಿರುವುದು ಬಹಳ ಮುಖ್ಯವಾಗಿದ್ದು. ಅನ್ವೇಷಣೆಯಲ್ಲಿ ತೊಡಗಿಕೊಂಡು ಹೆಚ್ಚಾಗಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಇಟ್ಟುಕೊಳ್ಳಬೇಕು ಎಂದು ಶಿಕ್ಷಕರು ಮತ್ತು ರಾಷ್ಟ್ರೀಯ ಮಟ್ಟದ ವ್ಯಕ್ತಿತ್ವ ವಿಕಸನ ತರಬೇತುದಾರರಾದ ರಾಜೇಂದ್ರ ಭಟ್.ಕೆ ಹೇಳಿದರು.
ಅವರು ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಮತ್ತು ಜನತಾ ನ್ಯೂ ಇಂಗ್ಲೀಷ್ ಸ್ಕೂಲ್ ಕಿರಿಮಂಜೇಶ್ವರ ವತಿಯಿಂದ ಕುಂದಾಪುರ ಮೊಗವೀರ ಭವನದಲ್ಲಿ ಜನತಾ ನವನೀತ-2024 ಅಭಿವಿನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
2023-24ನೇ ಸಾಲಿನಲ್ಲಿ ಅಧಿಕ ಅಂಕಗಳಿಸಿದ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರ್ಯಾಂಕ್‍ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಾಲೇಜಿನ ಸಾಂಸ್ಕ್ರತಿಕ ತಂಡದ ವಿದ್ಯಾರ್ಥಿಗಳಿಂದ ಹಿಗ್ಗಿನ-ಬುಗ್ಗೆ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಪ್ರಿನ್ಸಿಪಾಲ್ ಗಣೇಶ ಮೊಗವೀರ ಮಾತನಾಡಿ ಶಿಕ್ಷಣ ಪಠ್ಯೇತರ ಚಟುವಟಿಕೆ ಜತೆಗೆ ಎಲ್ಲಾ ವಿಭಾಗದಲ್ಲಿಯೂ ತೊಡಗಿಕೊಂಡಿರುವ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರ್ಯಾಂಕ್‍ಗಳನ್ನು ಗಳಿಸಿರುವುದು ಹೆಮ್ಮೆ ವಿಷಯವಾಗಿದೆ ಎಂದರು.
ಜನತಾ ಪ್ರೌಢಶಾಲೆ ಹೆಮ್ಮಾಡಿ ಮುಖ್ಯ ಶಿಕ್ಷಕ ಮಂಜು ಕಾಳವಾರ, ಜನತಾ ಕಾಲೇಜಿನ ವೈಸ್ ಪ್ರಿನ್ಸಿಪಾಲ್ ರಮೇಶ ಪೂಜಾರಿ, ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಿರಿಮಂಜೇಶ್ವರ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ ಉಪಸ್ಥಿತರಿದ್ದರು.
ಪ್ರಿನ್ಸಿಪಾಲ್ ಗಣೇಶ ಮೊಗವೀರ ಸ್ವಾಗತಿಸಿದರು. ಉಪನ್ಯಾಸಕ ಉದಯ ನಾಯ್ಕ್ ನಿರೂಪಿಸಿದರು. ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.











