ಮೀನುಗಾರಿಕ ಮನೆ ಕೊಡದಿದ್ದರೆ ಧರಣಿ ಸಿದ್ಧ ಎಂದ ಶಾಸಕ ಗಂಟಿಹೊಳೆ
ಬಿತ್ತನೆ ಬೀಜ ಕೊರತೆ ಆಗಬಾರದು ಶಾಸಕ ಕೊಡ್ಗಿ
ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಮೀನುಗಾರಿಕಾ ಇಲಾಖೆಯಲ್ಲಿ ಬೈಂದೂರು ಕ್ಷೇತ್ರಕ್ಕೆ ಮನೆ ನೀಡಿಕೆ ಆಗಿಲ್ಲ. ಈ ಬಾರಿಯೂ ಮನೆ ನೀಡದಿದ್ದರೆ ನಾನು ಬಿಡುವುದಿಲ್ಲ. ಅಕ್ಟೋಬರ್ 1ರಂದು ನಿಮ್ಮ ಇಲಾಖೆ ಮುಂದೆ ಧರಣಿ ಕುಳಿತುಕೊಳ್ಳುತ್ತೇನೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಮೀನುಗಾರಿಕೆ ಇಲಾಕೆ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರೆ, ಕ್ರಷಿ ಇಲಾಖೆ ಅಧಿಕಾರಿಗಳು ತಾಲೂಕಿಗೆ ಬೇಡಿಕೆ ಇರುವಷ್ಟು ಬಿತ್ತನೆ ಬೀಜದ ಬೇಡಿಕೆ ಸಲ್ಲಿಸಬೇಕು. ಈ ಕೆಲಸವನ್ನೇ ಅಧಿಕಾರಿಗಳೇ ಮಾಡಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಶಾಸಕ ಕಿರಣ ಕೊಡ್ಗಿ ಖಡಕ್ ಆಗಿ ಸೂಚನೆ ನೀಡಿದರು.
ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕುಂದಾಪುರ ತಾಲೂಕು ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ಗಂಭೀರವಾದ ಚರ್ಚೆ ನಡೆಯಿತು.
ಕೆಡಿಪಿ ಸದಸ್ಯ ರಮೇಶ ಶೆಟ್ಟಿ ಮಾತನಾಡಿ ಆಯುಷ್ಮಾನ್ ಆರೋಗ್ಯ ವಿಮೆಯ ಮಾಹಿತಿ ಕೊರತೆಯಿಂದ ಸಮಸ್ಯೆಯಾಗುತ್ತಿದೆ. ಮಣಿಪಾಲದಲ್ಲಿ ಬೆಡ್ ಸಿಗುವುದಿಲ್ಲ. ಬಡವರಿಗೆ ಸಮಸ್ಯೆಯಾದ ಪ್ರಕರಣಗಳು ಸಾಕಷ್ಟಿದೆ ಎಂದರು. ಇದಕ್ಕೆ ಉತ್ತರಿಸಿದ ಶಾಸಕ ಕಿರಣ್ ಕೊಡ್ಗಿ ಸರಕಾರಿ ಆಸ್ಪತ್ರೆಯ ರೆಫರಲ್ ಲೆಟರ್ ಇದ್ದು, ಶಸ್ತ್ರಚಿಕಿತ್ಸೆಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ, ತುರ್ತು ಕೆಲವೇ ಕೆಲವು ಕೋಡ್‍ಗಳನ್ನು ಮಾತ್ರ ನೀಡಿದ್ದಾರೆ ಆಯುಷ್ಮಾನ್ ಸಮಸ್ಯೆ, ಇತ್ಯಾದಿ ವಿಚಾರಗಳನ್ನು ಸರ್ಕಾರ ಮಟ್ಟದಲ್ಲಿ ಪ್ರಯತ್ನ ಮಾಡಿದ್ದೇವೆ ಎಂದರು. ಕುಂದಾಪುರ ಭೂ ಬ್ಯಾಂಕ್ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ ತಿದ್ದುಪಡಿ ಮಾಡಬೇಕಾದ ಅವಶ್ಯಕತೆ ಇದೆ ಎಂದರು. ಶಾಸಕ ಕಿರಣ್ ಕೊಡ್ಗಿ ಮಾತನಾಡಿ, ಎಲ್ಲರೂ ಮಣಿಪಾಲ ಆಸ್ಪತ್ರೆಗೆ ಹೋಗುವ ಬದಲು ಮಂಗಳೂರಿಗೆ ಹೋದರೆ ಅಲ್ಲಿ ಹಲವು ಮೆಡಿಕಲ್ ಕಾಲೇಜು ಆಸ್ಪತ್ರೆಗಳಿವೆ. ಇಷ್ಟು ರೋಗಿಗಳ ಒತ್ತಡ ಅಲ್ಲಿ ಇಲ್ಲ. ಅಲ್ಲಿ ಆಯುಷ್ಮಾನ್ ಸೌಲಭ್ಯ ದೊರೆಯುತ್ತದೆ. ಹಾಗಾಗಿ ಮಂಗಳೂರಿಲ್ಲಿಯೂ ಒಳ್ಳೆಯ ಆಸ್ಪತ್ರೆಗಳಿವೆ ಸಾಧ್ಯವಾದಷ್ಟು ಜನ ಅಲ್ಲಿಗೆ ಹೋದರೆ ಅನುಕೂಲ ಎಂದರು.
ರಮೇಶ ಶೆಟ್ಟಿ ವಕ್ವಾಡಿ ಮಾತನಾಡಿ ಯಶಸ್ವಿನಿ ವಿಮಾ ಯೋಜನೆ ನೊಂದಾವಣಿ ಮಾಡಿದ್ದಾರೆ. ಆದರ ಸೌಲಭ್ಯವೂ ಫಲಾನುಭವಿಗಳಿಗೆ ಸಿಗುತ್ತಿಲ್ಲ ಎಂದರು. ಶಾಸಕ ಕಿರಣ್ ಕೊಡ್ಗಿ ಇದಕ್ಕೆ ಉತ್ತರಿಸಿ ಯಶಸ್ವಿನಿ ಯೋಜನೆ ಸಹಕಾರಿ ಸಂಘಗಳ ಮೂಲಕ ನೊಂದಣಿಯಾಗುತ್ತದೆ. ಪ್ಯಾಕೆಜ್ ಆಧಾರದಲ್ಲಿ ವಿಮಾ ಹಣ ಬರುತ್ತದೆ. ಮಣಿಪಾಲ ಆಸ್ಪತ್ರೆಯಲ್ಲಿ ಯಶಸ್ವಿನಿ ಇಲ್ಲದಿರುವುದರಿಂದ ಈ ಭಾಗದ ಜನರಿಗೆ ಅಷ್ಟೊಂದು ಅನುಕೂಲವಾಗಿಲ್ಲ ಎಂದರು.
ರಮೇಶ ಶೆಟ್ಟಿ ವಕ್ವಾಡಿ ಮುಂದುವರಿದು ಆರೋಗ್ಯ ಉಪಕೇಂದ್ರಗಳ ಆರ್.ಟಿ.ಸಿ ಆಗಿಲ್ಲ, ಆವರಣ ಗೋಡೆ ನಿರ್ಮಾಣವಾಗಿಲ್ಲ. ವಿಶೇಷವಾದ ಅನುದಾನ ನೀಡಬೇಕು ಎಂದರು. ಟಿಎಪಿಸಿಎಂಸಿ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಮಾತನಾಡಿ ಮರಣೋತ್ತರ ಪರೀಕ್ಷೆಯಲ್ಲಿಯೂ ಸಮಸ್ಯೆಯಾಗುತ್ತಿದ್ದು , ಇಲಾಖೆಯಲ್ಲಿ ಸಮನ್ವಯತೆಯ ಕೊರತೆ ಕಾಡುತ್ತಿದೆ ಎಂದರು. ಇದಕ್ಕೆ ಉತ್ತರಿಸಿದ ವೈದ್ಯಾಧಿಕಾರಿಗಳು ಗ್ರೂಪ್ ಡಿ ಹುದ್ದೆ ಖಾಲಿ ಇದೆ. ಹಾಗಾಗಿ ಸಮಸ್ಯೆಯಾಗುತ್ತಿದೆ. ಗುತ್ತಿಗೆ ಆಧಾರದಲ್ಲಿ ತಗೆದುಕೊಂಡ ಗ್ರೂಫ್ ಡಿ’ ಅವರಿಗೆ ತರಬೇತಿ ಇರುವುದಿಲ್ಲ ಎಂದರು. ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ ಮೋರ್ಚರಿಯಲ್ಲಿ ಶವ ಇಡಲು ತಾಂತ್ರಿಕ ಸಮಸ್ಯೆಗಳಾಗುತ್ತಿರುವುದನ್ನು ವಿವರಿಸಿದರು. ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ ಇಲಾಖೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಂಡು ಜನರಿಗೆ ಉತ್ತಮ ಸೇವೆ ನೀಡಲು ವೈದ್ಯಾದಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು. ಮೂಲಸೌಕರ್ಯಗಳ ಬಗ್ಗೆಯೂ ಗಮನ ನೀಡಬೇಕು ಎಂದರು.
ರಮೇಶ ಶೆಟ್ಟಿ ಮಾತನಾಡಿ ಕೆಲವು ಸರ್ಕಾರಿ ಆಸ್ಪತ್ರೆಯ ವೈದ್ಯರು ಖಾಸಗಿಯಾಗಿ ಕ್ಲಿನಿಕ್ ಇಟ್ಟುಕೊಂಡಿರುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಆಸಡ್ಡೆ ಮಾಡುತ್ತಾರೆ. ಕ್ಲಿನಿಕ್‍ಗೆ ಬರುವಂತೆ ಸೂಚಿಸುತ್ತಾರೆ ಈ ಬಗ್ಗೆ ಗಮನ ಹರಿಸಬೇಕು ಎಂದರು. ಜ್ಯೋತಿ ಎಂ ನಾಯಕ ಮಾತನಾಡಿ ಎನ್.ಆರ್.ಸಿ ಸ್ಥಳಾಂತರವಾಗುತ್ತಿದೆ ಎನ್ನುವ ಸುದ್ಧಿ ಇದೆ. ಯಾವುದೆ ಕಾರಣಕ್ಕೆ ಇದು ಕುಂದಾಪುರದಿಂದ ಸ್ಥಳಾಂತರ ಆಗಬಾರದು ಎಂದರು. ಜ್ಯೋತಿ ಪುತ್ರನ್ ಧ್ವನಿಗೂಡಿಸಿ ಎನ್.ಆರ್,ಸಿಯನ್ನು ಕುಂದಾಪುರದಲ್ಲಿ ಉಳಿಸಿಕೊಳ್ಳಬೇಕು ಎಂದರು. ಶಾಸಕ ಗುರುರಾಜ ಗಂಟಿಹೊಳೆ ಕೂಡಾ ಇದನ್ನು ಬೇರೆಡೆಗೆ ಹೋಗಲು ಯಾವುದೇ ಕಾರಣಕ್ಕೂ ಬಿಡಬಾರದು ಎಂದರು.
ಬಿತ್ತನೆ ಬೀಜ ಕೊರತೆ ಬಗ್ಗೆ ಮಾತನಾಡಿದ ಶರತ್ ಕುಮಾರ್ ಶೆಟ್ಟಿ ಈ ಬಾರಿ ಮುಂಗಾರು ಹಂಗಾಮಿಗೆ ಎಂಓ4 ಬಿತ್ತನೆ ಬೀಜ ಕೊರತೆಯಾಗಿತ್ತು. ಬೇಡಿಕೆ ಇರುವಷ್ಟು ಬೀಜ ದಾಸ್ತಾನು ಇಡಲಿಲ್ಲ ಏಕೆ ಎಂದು ಪ್ರಶ್ನೆ ಮಾಡಿದರು.
ಕಿರಣ್ ಕೊಡ್ಗಿ ಕೃಷಿ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡು ತಾಲೂಕಿಗೆ ಅಗತ್ಯ ಇರುವಷ್ಟು ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಬೇಕು. ಆ ಕೆಲಸವನ್ನು ನೀವು ಮಾಡಬೇಕು. ನೀವು ಬೇಡಿಕೆ ಸಲ್ಲಿಸದೇ ಇದ್ದರೆ ಹೇಗೆ? ಇಲ್ಲಿ ರೈತರು ಹೆಚ್ಚಾಗಿ ಬಳಸುವ ತಳಿಯ ಬದಲಿಗೆ ಬೇರೆ ಕೊಟ್ಟರೆ ಆಗುತ್ತದಾ ? ಎಂದು ಪ್ರಶ್ನಿಸಿದರು. ಹರಿಪ್ರಸಾದ್ ಶೆಟ್ಟಿ ಮಾತನಾಡಿ ಅಕ್ಕಿ ಮಿಲ್ಲಿನಲ್ಲಿ ಅಕ್ಕಿ ಮಾಡಲು ಬಂದ ಎಂಒ4 ಭತ್ತವನ್ನು ಬೀಜಕ್ಕೆ ತರಲು ಮುಂದಾದ ಉದಾಹರಣೆಯೂ ಇದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ವಾರ್ಡನ್ ಗಳು ಸರಿಯಾಗಿ ಕೆಲಸ ಮಾಡುವುದಿಲ್ಲವೇ? ಹಾಸ್ಟೆಲ್ ನಿಂದ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಮಧ್ಯಾಹ್ನ ನಂತರ ಹೆಚ್ಚಾಗಿ ಗೈರಾಗುತ್ತಾರೆ ಎಂದು ಶಿಕ್ಷಣ ಸಂಸ್ಥೆಗಳು ಹೇಳುತ್ತಿವೆ, ವಾರ್ಡನ್‍ಗಳು ನಿಗಾ ವಹಿಸಬೇಕು, ಶಿಕ್ಷಣ ಅಧಿಕಾರಿಗಳು ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಹಾಜರಾತಿ ಗಮನಿಸಬೇಕು ಎಂದರು.
ಶರತ್ ಕುಮಾರ್ ಶೆಟ್ಟಿ ಮಾತನಾಡಿ ಹೆಮ್ಮಾಡಿ ಕೊಲ್ಲೂರು ರಸ್ತೆಯಲ್ಲಿ ಹೆಮ್ಮಾಡಿ ಮಂಡಲ ಪಂಚಾಯತ್ ಇರುವ ಕಾಲದಲ್ಲಿ ಗಾಳಿ ಸಸಿಗಳನ್ನು ನೆಟ್ಟಿದ್ದು ಅದು ಈಗ ಅಪಾಯಕಾರಿಯಾಗಿ ರಸ್ತೆಗೆ ಬೀಳುತ್ತಿವೆ. ಇದನ್ನು ಕಡಿದು ಹೊಸ ಗಿಡ ನೆಡುವಂತೆ ಮೂರು ವರ್ಷದ ಹಿಂದೆಯೇ ಮನವಿ ಮಾಡಿದ್ದೇವೆ. ಈಗಾಗಲೇ ಈ ಮಾರ್ಗ ಉದ್ದಕ್ಕೂ ಮರಗಳು ರಸ್ತೆಗೆ ಬಿದ್ದು ವಿದ್ಯುತ್ ಸಮಸ್ಯೆ ಸೇರಿದಂತೆ ಸಾಕಷ್ಟು ಹಾನಿಯಾಗುತ್ತಿದೆ ಎಂದರು.
ಸರಕಾರಿ ಶಾಲಾ ಕಟ್ಟಡಗಳು ಶಿಥಿಲಗೊಂಡು ಬೀಳುವ ಹಂತ ತಲುಪಿವೆ. ಇದನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಕಟ್ಟಡ ಬಿದ್ದು ಏನಾದರೂ ಸಮಸ್ಯೆಯಾದರೆ ಅಧಿಕಾರಿಗಳನ್ನೇ ಹೊಣೆ ಮಾಡಬೇಕಾಗುತ್ತದೆ. ಮಕ್ಕಳ ವಿಷಯವನ್ನು ನಿರ್ಲಕ್ಷ್ಯ ಮಾಡಬೇಡಿ ಎಂದು ಶಾಸಕ ಕಿರಣ್ ಕೊಡ್ಗಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಶಿಥಿಲಗೊಂಡ ಕಟ್ಟಡಗಳ ದುರಸ್ತಿ, ಹೊಸ ಕಟ್ಟಡ ನಿರ್ಮಾಣ, ದುರಸ್ತಿಗೆ ಅಸಾಧ್ಯವಾದ ಕಟ್ಟಡಗಳ ತೆರವಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ವಕ್ವಾಡಿಯಲ್ಲಿ ಇತ್ತೀಚೆಗೆ ನಡೆದ ಮಾರಣಾಂತಿಕ ಹಲ್ಲೆಯಲ್ಲಿ ಪ್ರಮುಖ ಆರೋಪಿಗಳ ಬಂಧನಕ್ಕೆ ವಿಳಂಭವಾಗುತ್ತಿದ್ದು ಕೂಡಲೇ ಆರೋಪಿಯನ್ನು ಬಂಧಿಸಬೇಕು, ವಕ್ವಾಡಿಯಲ್ಲಿ ಅನುಮಾನಸ್ಪದವಾಗಿ ತಿರುಗಾಡುವ ವ್ಯಕ್ತಿಗಳನ್ನು ವಿಚಾರಣೆ ಮಾಡಬೇಕು, ಹಾಗೂ ಪೊಲೀಸ್ ಗಸ್ತು ಹೆಚ್ಚಿಸಬೇಕು ಎಂದು ರಮೇಶ ವಕ್ವಾಡಿ ಹೇಳಿದರು.
ಕಂಡ್ಲೂರು ಸೇತುವೆ ಶಿಥಿಲಗೊಳ್ಳುತ್ತಿದ್ದು ಕೂಡಲೇ ಅಧಿಕಾರಿಗಳು ಗಮನ ಹರಿಸಬೇಕು ಎಂದು ಜ್ಯೋತಿ ಎಂ ಒತ್ತಾಯಿಸಿದ್ದರು. ಇದಕ್ಕೆ ಜ್ಯೋತಿ ಪುತ್ರನ್ ಧ್ವನಿ ಗೂಡಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶೋಭಾ ಲಕ್ಷ್ಮೀ, ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಶಶಿಧರ್, ಬೈಂದೂರು ತಹಶೀಲ್ದಾರ್ ಉಪಸ್ಥಿತರಿದ್ದರು.











