ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಉಪ್ಪಿನಕುದ್ರು ಶ್ರೀ ಗಣೇಶ ಗೊಂಬೆಯಾಟ ಮಂಡಳಿಯ ‘ಹಳ್ಳಿಯೆಡೆಗೆ ಗೊಂಬೆ ನಡಿಗೆ’ ಕಾರ್ಯಕ್ರಮದ ಅಂಗವಾಗಿ ವಂಡ್ಸೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಕ್ಷಗಾನ ಗೊಂಬೆಯಾಟ ‘ಚೂಡಾಮಣಿ-ಲಂಕಾದಹನ’ ಪ್ರದರ್ಶನಗೊಂಡಿತು.

ಉಪ್ಪಿನಕುದ್ರು ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ ಅಧ್ಯಕ್ಷರಾದ ಭಾಸ್ಕರ ಕೊಗ್ಗ ಕಾಮತ್ ಗೊಂಬೆಯಾಟದ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷ್ಷಿಕೆ ನೀಡಿ, ಉಪ್ಪಿನಕುದ್ರು ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್‍ನ ಬೆಳ್ಳಿಹಬ್ಬದ ಸಂಭ್ರಮ ಹಾಗೂ ಸೂತ್ರಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ಜನ್ಮ ಶತಮಾನೋತ್ಸವ ಪ್ರಯುಕ್ತ ಗೊಂಬೆಯಾಟ ಮಂಡಳಿಯ ಜಂಟಿ ಆಶ್ರಯದಲ್ಲಿ ಇನ್ಫೋಸಿಸ್ ಫೌಂಡೇಷನ್ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ‘ಹಳ್ಳಿಯೆಡೆಗೆ ಗೊಂಬೆ ನಡಿಗೆ’ 25 ಹಳ್ಳಿಗಳಲ್ಲಿ ಕಾರ್ಯಕ್ರಮ ನೀಡಲು ನಿಶ್ಚಯಿಸಿದ್ದು, ಇದು 12ನೇ ಕಾರ್ಯಕ್ರಮ. ಜ್ಞಾನದೇಗುಲದಲ್ಲಿ ವಿದ್ಯಾರ್ಥಿಗಳ ಮುಂದೆ ಗೊಂಬೆಯಾಟ ಪ್ರದರ್ಶನ ನೀಡಲು ಅತ್ಯಂತ ಖುಷಿ ಕೊಡುತ್ತಿದೆ. ಗೊಂಬೆಗಳ ಬಗ್ಗೆ ಮಕ್ಕಳಲ್ಲಿ ಆಕರ್ಷಣೆ ಮತ್ತು ಕುತೂಹಲ ಜೊತೆಗೆ ಅಳವಡಿಸಿಕೊಂಡ ಕಥಾವಸ್ತು ಮಕ್ಕಳ ಮನಸ್ಸಿನಲ್ಲಿ ಸದಾ ಉಳಿಯುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಶೇಖರ ಶೆಟ್ಟಿ, ವಂಡ್ಸೆ ಗ್ರಾಮ ಪಂಚಾಯತಿ ಸದಸ್ಯ ಗೋವರ್ದನ್ ಜೋಗಿ, ಶಾಲಾ ಮುಖ್ಯೋಪಾಧ್ಯಾಯ ಚಂದ್ರ ನಾಯ್ಕ್ ಹೆಚ್., ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮಂಜುನಾಥ ಎ.ಜಿ., ಅಧ್ಯಾಪಕ ವೃಂದದವರು, ಶಾಲಾಭಿವೃದ್ದಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಭಾಸ್ಕರ ಕೊಗ್ಗ ಕಾಮತ್ ಅವರನ್ನು ಸನ್ಮಾನಿಸಲಾಯಿತು. ಗೊಂಬೆಯಾಟ ಮಂಡಳಿಯ ಎಲ್ಲಾ ಕಲಾವಿದರನ್ನು ಗೌರವಿಸಲಾಯಿತು. ಗೊಂಬೆಯಾಟ ಮಂಡಳಿಯ ಪರವಾಗಿ ಕಾರ್ಯಕ್ರಮ ಆಯೋಜಕರನ್ನು ಗೌರವಿಸಲಾಯಿತು. ವಂಡ್ಸೆ ಶಾಲೆಯಲ್ಲಿ ಗೊಂಬೆಯಾಟ ಆಯೋಜಿಸುವಲ್ಲಿ ಸಹಕರಿಸಿದ ಭಾಗವತ ಉಮೇಶ ಸುವರ್ಣ, ಶಿಕ್ಷಕಿ ರೇವತಿ ಉಮೇಶ ಸುವರ್ಣ ಅವರÀನ್ನು ಗೌರವಿಸಲಾಯಿತು.
ಗೊಂಬೆಯಾಟ ಪ್ರದರ್ಶನ ಬಳಿಕ ಗೊಂಬೆಗಳ ಕುಣಿಸುವಿಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಭಾಸ್ಕರ ಕೊಗ್ಗ ಕಾಮತ್ ಅವರು ಪ್ರಾತ್ಯಕ್ಷಿಕೆ ನೀಡಿದರು. ಪುರಾಣ ಪಾತ್ರಗಳ ಗೊಂಬೆಯಲ್ಲದೆ, ಬರೆಯುವ ಆಧುನಿಕ ಗೊಂಬೆ, ಜೇಡ, ಆಮೆ, ಹುಳ, ಕೋತಿ, ಯೋಗ ಮಾಡುವ ಗೊಂಬೆ, ಕೋಲಾಟ ಆಡುವ ಗೊಂಬೆ ಸಮೂಹ ಹೀಗೆ ವೈವಿಧ್ಯಮಯ ಗೊಂಬೆಗಳ ಪ್ರದರ್ಶಿಸಿ ಮಾಹಿತಿ ನೀಡಿದರು.











