ಹಟ್ಟಿಯಂಗಡಿ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಗಿನ್ನಿಸ್ ವಿಶ್ವ ದಾಖಲೆಯ ಪ್ರಮಾಣ ಪತ್ರ ವಿತರಣೆ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಶಾಲೆ ಎಂದರೆ ಕೇವಲ ಅಕ್ಷರಾಭ್ಯಾಸ ಮಾತ್ರವಲ್ಲ. ಒಂದು ಕುಟುಂಬದ ರೀತಿ ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಾಸ ಮಾಡುವ ಕೆಲಸ ಶಿಕ್ಷಕರು ಮಾಡುತ್ತಾರೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳು ಶಾಲೆಯಲ್ಲಿ ಅನಾವರಣವಾಗುತ್ತದೆ. ನಮ್ಮ ಸಾಧನೆಗಳನ್ನು ಬೇರೆಯವರು ನೋಡಿ ಅದರಿಂದ ಅವರು ಪ್ರೇರಣೆ ಪಡೆಯಬೇಕು ಅಂತಹ ಸಾಧನೆಗಳು ನಮ್ಮಿಂದ ಆಗಬೇಕು. ಆ ಹಿನ್ನೆಲೆಯಲ್ಲಿ ಸಿದ್ಧಿವಿನಾಯಕ ವಿದ್ಯಾಸಂಸ್ಥೆ ಗಿನ್ನಿಸ್ ದಾಖಲೆ ಮಾಡಿದೆ. ಮುಂದೆ ಇನ್ನಷ್ಟು ದಾಖಲೆಗಳು ಮಾಡುವಂತಾಗಬೇಕು, ನಿರಂತರತೆ ಕಂಡುಕೊಳ್ಳಬೇಕು ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದರು.
ಅವರು ಹಟ್ಟಿಯಂಗಡಿ ಸಿದ್ಧಿವಿನಾಯಕ ವಸತಿ ಶಾಲೆಯ ರಜತ ಮಹೋತ್ಸವದ ಸಂದರ್ಭದಲ್ಲಿ ರೂಬಿಕ್ಸ್ ಕ್ಯೂಬ್ ಮೂಲಕ ಎರಡು ಗಿನ್ನಿಸ್ ವಿಶ್ವ ದಾಖಲೆಗಳನ್ನು ಕಳೆದ ಶೈಕ್ಷಣಿಕ ವರ್ಷದಲ್ಲಿ ಮಾಡಿದ್ದು ಗಿನ್ನಿಸ್ ವಲ್ರ್ಡ್ ರೆಕಾರ್ಡ್ ಪ್ರಮಾಣ ಪತ್ರ ಪ್ರದಾನ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಸದಾ ನಾವು ಯಶಸ್ಸನ್ನು ಹಿಂಬಾಲಿಸಬೇಕು, ಅದಕ್ಕೆ ನಿರಂತರ ಪ್ರಯತ್ನ ಮಾಡುತ್ತಿರಬೇಕು, ಸೋಲು ಬಂದಾಗ ಕುಗ್ಗದೆ ಸೋಲನ್ನು ಸಮಚಿತ್ತದಿಂದ ಅನುಭವಿಸಿದಾಗ ಗೆಲ್ಲುವ ಶಕ್ತಿ ಜಾಸ್ತಿ ಆಗುತ್ತದೆ. ಮುಂದೆ ಏನಾಗುತ್ತದೆ ಎನ್ನುವ ಕುತೂಹಲ ನಮ್ಮಲ್ಲಿ ಇರಬೇಕು. ಆಗ ಸಾಧನೆಗಳು ಸಾಧ್ಯವಾಗುತ್ತದೆ ಎಂದರು.
ಮೂಡಬಿದಿರೆಯ ಅಳ್ವಾಸ್ ಕಾಲೇಜಿನ ಡಾ.ಎನ್.ಪಿ.ನಾರಾಯಣ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ರಾಜೇಶ್ ಕಾರಂತ್, ತಲ್ಲೂರು ಗ್ರಾ.ಪಂ.ಅಧ್ಯಕ್ಷ ಗಿರೀಶ್ ಎಸ್ ನಾಯಕ್, ಎಸ್.ಎಸ್.ಎಸ್ ಪ್ರತಿಷ್ಠಾನ ಹಟ್ಟಿಯಂಗಡಿ ಇದರ ಟ್ರಸ್ಟಿ , ಹಾಗೂ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಹಟ್ಟಿಯಂಗಡಿಯ ಆಡಳಿತಾಧಿಕಾರಿ ವೀಣಾರಶ್ನಿ ಎಂ ಉಪಸ್ಥಿತರಿದ್ದರು.
ಎಸ್.ಎಸ್.ಎಸ್ ಪ್ರತಿಷ್ಠಾನ ಹಟ್ಟಿಯಂಗಡಿ ಇದರ ಕಾರ್ಯದರ್ಶಿ, ಹಾಗೂ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಶಿಕ್ಷಕಿ ಪೂರ್ಣಿಮಾ ಗಿನ್ನಿಸ್ ದಾಖಲೆ ಮಾಡಿದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ವಿದ್ಯಾರ್ಥಿ ದೀಕ್ಷಾ ಕೋರಿ ಕಾರ್ಯಕ್ರಮ ನಿರ್ವಹಿಸಿ, ವಿದ್ಯಾರ್ಥಿನಿ ಪ್ರಿಯಾ ಸ್ವಾಗತಿಸಿದರು. ವಿದ್ಯಾರ್ಥಿ ತನಿಷ್ಕಾ ವಂದಿಸಿದರು.