ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಮೂಡ್ಲಕಟ್ಟೆ ಐ.ಎಂ.ಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಆಶ್ರಯದಲ್ಲಿ ಪ್ರಥಮ ಬಾರಿಗೆ ಹೊಸತನವನ್ನು ಪರಿಚಯಿಸುವ ಮತ್ತು ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ರಾಜ್ಯ ಮಟ್ಟದಲ್ಲಿ ವೇದಿಕೆ ಕಲ್ಪಿಸುವ ಉದ್ದೇಶದಿಂದ ‘ನವೋನ್ಮೇಶ್’-೨೦೨೪’ ರಾಜ್ಯ ಮಟ್ಟದ ಫೆಸ್ಟ್ ನ.೧೬ರಂದು ಕಾಲೇಜಿನ ವಠಾರದಲ್ಲಿ ಆಯೋಜಿಸಲಾಗಿದೆ ಎಂದು ಐಎಂಜೆ ವಿದ್ಯಾಸಂಸ್ಥೆಗಳ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ.ರಾಮಕೃಷ್ಣ ಹೆಗ್ಡೆ ಹೇಳಿದರು.
ಕುಂದಾಪುರ ಪ್ರೆಸ್ ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪಿಯು ಕಾಲೇಜುಗಳು ಪಾಲ್ಗೊಳ್ಳುತ್ತಿದ್ದಾರೆ. ಸ್ಪರ್ಧೆಯು ಐಟಿ, ವಾಣಿಜ್ಯ ಮತ್ತು ಸಾಂಸ್ಕೃತಿಕ ಎಂಬ ಮೂರು ವಿಭಾಗಗಳಲ್ಲಿ ನಡೆಯುತ್ತಿದ್ದು, ಐಟಿ ಮತ್ತು ವಾಣಿಜ್ಯ ರಸಪ್ರಶ್ನೆ, ಕೊಲಾಜ್, ವಿಡಿಯೋಗ್ರಾಫಿ, ಎರರ್ ಡೀಬಗಿಂಗ್, ಜಾಹೀರಾತು ತಯಾರಿಕೆ, ರಂಗೋಲಿ, ನಿಧಿ ಬೇಟೆ, ಏಕಪಾತ್ರಾಭಿನಯ, ನೃತ್ಯ, ಹಾಡುಗಾರಿಕೆ, ಮುಖ ಚಿತ್ರಕಲೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಸೇರಿದಂತೆ ಒಟ್ಟು ೧೩ ವಿವಿಧ ಸ್ಪರ್ಧೆಗಳನ್ನು ಒಳಗೊಂಡಿದೆ. ಪ್ರತಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ ತ್ತು ದ್ವಿತೀಯ ಬಹುಮಾನ ನೀಡಲಾಗುತ್ತಿದ್ದು, ಉತ್ತಮ ಪ್ರದರ್ಶನ ನೀಡಿದ ಕಾಲೇಜಿನ ತಂಡಕ್ಕೆ ನವೋನ್ಮೇಶನ್ ೨೦೨೪ ಶಾಶ್ವತ ಫಲಕದೊಂದಿಗೆ ೧೫,೫೫೫ ನಗದು ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ಶಾಶ್ವತ ಫಲಕ ನೀಡಲಾಗುವುದು ಎಂದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಪ್ರತಿಭಾ ಎಂ.ಪಟೇಲ್ ಮಾತನಾಡಿ, ಕಾರ್ಯಕ್ರಮವನ್ನು ಉದ್ಯಮಿ ಆನಂದ ಸಿ.ಕುಂದರ್ ಉದ್ಘಾಟಿಸಲಿದ್ದು ಉಡುಪಿ ನೇವಿಯಸ್ ಸೊಲ್ಯುಷನ್‌ನ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಸುಯೋಗ್ ಶೆಟ್ಟಿ ಮತ್ತು ಚಲನಚಿತ್ರ ನಟಿ ವಿದುಷಿ ಮಾನಸಿ ಸುಧೀರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಸಂಸ್ಥೆಯ ಅಧ್ಯಕ್ಷ ಸಿದ್ಧಾರ್ಥ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಉಡುಪಿ ಜಿಲ್ಲೆಯ ಎಡಿಷನಲ್ ಎಸ್ಪಿ ಪರಮೇಶ್ವರ ಎ.ಹೆಗಡೆ, ಎಚ್‌ಡಿಎಫ್‌ಸಿ ಶಾಖಾ ವ್ಯವಸ್ಥಾಪಕ ವಿಷುಮೂರ್ತಿ ಸಿ. ಮತ್ತು ರೋಬೋಸಾಫ್ಟ್ ಎಚ್‌ಆರ್ ಲೀಡ್ ಶ್ರುತಿ ರಶೆಲ್ ಡಿಸೋಜ ಪಾಲ್ಗೊಳ್ಳಲಿದ್ದಾರೆ ಎಂದರು.
ಫೆಸ್ಟ್ ಸಂಯೋಜಕಿ ಅರ್ಚನಾ ಗದ್ದೆ ಮಾತನಾಡಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಿಂದ ಪಿಯು ಕಾಲೇಜುಗಳ ಸುಮಾರು ೮೦೦ ಮಿಕ್ಕಿ ವಿದ್ಯಾರ್ಥಿಗಳು ನೊಂದಣಿ ಮಾಡಿಸಿಕೊಂಡಿದ್ದಾರೆ. ಫೆಸ್ಟ್ನಲ್ಲಿ ಭಾಗವಹಿಸುವವರು ನೊಂದಣಿಗೆ ಅವಕಾಶವಿದ್ದು, ಹೊರ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು ೧೫೦೦ ಮಿಕ್ಕಿ ವಿದ್ಯಾರ್ಥಿಗಳ ನೊಂದಣಿ ನಿರೀಕ್ಷಿಸಲಾಗಿದೆ. ಪ್ರತಿ ವಿದ್ಯಾರ್ಥಿಗಳಿಂದ ೫೦ ರೂ. ನೊಂದಣಿ ಶುಲ್ಕ ಸಂಗ್ರಹಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ನೊಂದಣಿಗಾಗಿ ೯೩೮೦೭೭೩೪೩೫ ಅಥವಾ ೯೪೮೦೨೮೪೯೫೬ ಸಂಪರ್ಕಿಸಬಹುದು ಎಂದರು.
ಕಾಲೇಜಿನ ಉಪಪ್ರಾಂಶುಪಾಲ ಪ್ರೊ.ಜಯಶೀಲ ಕುಮಾರ್ ಉಪಸ್ಥಿತರಿದ್ದರು.