ಕುಂದಾಪುರ ಮಿರರ್ ಸುದ್ದಿ…
ಕೋಟ: ಸಾಲಿಗ್ರಾಮದಲ್ಲಿರುವ ಡಾ.ಕೋಟ ಶಿವರಾಮ ಕಾರಂತ ಅಧ್ಯಯನ ಮತ್ತು ಸಂಶೋಧನ ಕೇಂದ್ರಕ್ಕೆ ಶಿವರಾಮ ಕಾರಂತರ ಸುಪುತ್ರ, ಖ್ಯಾತ ಪರಿಸರವಾದಿ, ಅಂತರರಾಷ್ಟ್ರೀಯ ಖ್ಯಾತಿಯ ಪ್ರಾಣಿ ತಜ್ಞ ಡಾ. ಉಲ್ಲಾಸ್ ಕಾರಂತರು ತಮ್ಮ ಪತ್ನಿ ಡಾ. ಪ್ರತಿಭಾ ಕಾರಂತರೊಂದಿಗೆ ಮಂಗಳವಾರ ಭೇಟಿ ನೀಡಿದರು.
ಅಧ್ಯಯನ ಕೇಂದ್ರದಲ್ಲಿ ತಮ್ಮ ತಂದೆ ಶಿವರಾಮ ಕಾರಂತರ ಗ್ರಂಥಗಳು, ಭಾವಚಿತ್ರಗಳು, ಅವರು ಜೀವಂತವಾಗಿದ್ದಾಗ ಉಪಯೋಗಿಸುತ್ತಿದ್ದ ವಸ್ತುಗಳು, ಮುಂತಾದವುಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಕೆಲವೊಂದು ಚಿತ್ರಗಳು, ವಸ್ತುಗಳ ಬಗ್ಗೆ ವಿವರಣೆ ನೀಡಿದರು. ಇನ್ನಷ್ಟು ಈ ಕೇಂದ್ರವನ್ನು ಬಲಗೊಳಿಸಲು ಉಪಯುಕ್ತ ಸಲಹೆ, ಸೂಚನೆಗಳನ್ನೂ ನೀಡಿದರು. ತಂದೆಯೊಂದಿಗಿನ ತನ್ನ ಕೆಲವು ಅನುಭವಗಳನ್ನೂ ಹಂಚಿಕೊಂಡರು.
ಈ ಸಂದರ್ಭದಲ್ಲಿ ಕಾರಂತ ಅಧ್ಯಯನ ಕೇಂದ್ರದ ಹಿರಿಯ ಟ್ರಸ್ಟಿ ಗುಜ್ಜಾಡಿ ಪ್ರಭಾಕರ ನಾಯಕ್ ರವರು ಹಲವಾರು ಉಪಯುಕ್ತ ಮಾಹಿತಿಗಳನ್ನು ಉಲ್ಲಾಸ್ ಕಾರಂತರಿಗೆ ನೀಡಿದರು.
ಟ್ರಸ್ಟಿನ ಅಧ್ಯಕ್ಷ ಗುರುರಾಜ ರಾವ್, ಉಪಾಧ್ಯಕ್ಷರಾದ ಡಾ. ಎನ್. ವಿ. ಕಾಮತ್, ಇತರ ಟ್ರಸ್ಟಿಗಳಾದ ನಾರಾಯಣ್ ಆಚಾರ್, ಸಂದೀಪ್ ಶೆಟ್ಟಿ, ಮಾಜಿ ಟ್ರಸ್ಟಿ ಕೋಡಿ ಚಂದ್ರಶೇಖರ ನಾವಡ, ಸಿಬ್ಬಂದಿ ಸಂಗೀತ ಉಪಸ್ಥಿತರಿದ್ದರು.











