ಕುಂದಾಪುರ ಮಿರರ್ ಸುದ್ದಿ…
ಕೋಟ: ಸಂಪೂರ್ಣ ಸಿದ್ಧತೆಯಿಂದ ಕ್ರಮಬದ್ಧ ಅಧ್ಯಯನ ನಡೆಸಿದಲ್ಲಿ, ಯಾವ ಆತಂಕವೂ ಇಲ್ಲದೆ ಮುಕ್ತ ಮನಸ್ಸಿನಿಂದ ಬರಲಿರುವ ಪರೀಕ್ಷೆಗಳನ್ನು ಎದುರಿಸಬಹುದು, ಉತ್ತಮ ಅಂಕಗಳನ್ನುಗಳಿಸಬಹುದು ಎಂದು ಮಣೂರು ಪಡುಕರೆಯ ಗೀತಾನಂದ ಫೌಂಡೇಶನ್‍ನ ಪ್ರವರ್ತಕರಾದ ಆನಂದ ಸಿ ಕುಂದರ್ ಕಿವಿಮಾತು ಹೇಳಿದರು.
ಸರಕಾರಿ ಪದವಿಪೂರ್ವ ಕಾಲೇಜು ಮಣೂರು ಪಡುಕರೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಅವರು ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಪಿಯುಸಿ ನಂತರ ಮುಂದೇನು ಎಂಬ ವಿಷಯದ ಕುರಿತು ಮಣೂರು ಪಡುಕರೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ನಾಯಕ್ ಮಾತನಾಡಿದರು.
ಕಾಲೇಜು ಪ್ರಾಂಶುಪಾಲರು ಮತ್ತು ಉಪನ್ಯಾಸಕ ವೃಂದದವರು ಆನಂದ ಸಿ ಕುಂದರ್ ಅವರನ್ನು ಸನ್ಮಾನಿಸಿದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಆನಂದ ಸಿ ಕುಂದರ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು ಹಾಗೂ ಕಾಲೇಜಿಗೆ ಮೈಕ್ ಸೆಟ್‍ನ್ನು ಕೊಡುಗೆಯಾಗಿ ನೀಡಿದರು.
ನಿವೃತ್ತ ಪ್ರಾಂಶುಪಾಲ ನಾಗೇಶ್ ಶಾನುಭಾಗ್, ಕಾಲೇಜು ಶೈಕ್ಷಣಿಕ ಸಮಿತಿಯ ಸದಸ್ಯರಾದ ಜಯರಾಮ ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಮಂಜುನಾಥ ಹೊಳ್ಳ, ಎಸ್‍ಡಿಎಂಸಿ ಅಧ್ಯಕ್ಷರಾದ ರಾಘವೇಂದ್ರ ಕಾಂಚನ್ ಮತ್ತು ನಾಗರಾಜ್ ಹಾಗೂ ಕಾಲೇಜು ಉಪನ್ಯಾಸಕರು ಶುಭ ಹಾರೈಸಿದರು.
ಗೀತಾನಂದ ಫೌಂಡೇಶನ್‍ನ ಸಂಯೋಜಕರಾದ ರವಿಕಿರಣ್ ಮತ್ತು ದೀಕ್ಷಿತಾ ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ಡೆನಿಸ್ ಬಾಂಜಿ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಫಾತಿಮಾತುಲ್ ಮಿಸ್ರಿಯಾ ಮತ್ತು ಶ್ರೀಶ ಕಾರ್ಯಕ್ರಮ ನಿರೂಪಿಸಿ, ಅನುಜ್ ಧನ್ಯವಾದ ಅರ್ಪಿಸಿದರು.











