ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ, ಮಾ.10: ಸಮಗ್ರ ಆರೋಗ್ಯ, ಉಪಶಾಮಕ ಆರೈಕೆ ವಿನೂತನವಾದ ಕಾರ್ಯಕ್ರಮ. ಇವತ್ತಿನ ಆಹಾರ ಪದ್ದತಿ, ಜೀವನ ಶೈಲಿಗೆ ಇಂಥಹ ಕಾರ್ಯಕ್ರಮಗಳು ಅನಿವಾರ್ಯ. ಗ್ರಾಮದ ಒಂಟಿಯಾಗಿರುವ ವ್ಯಕ್ತಿಗಳ ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಸದಾ ನಿಗಾ ಇಡುವ ಈ ಯೋಜನೆಗೆ ಆರೋಗ್ಯ ಮತು ಕುಟುಂಬ ಕಲ್ಯಾಣ ಇಲಾಖೆ ಸದಾ ನಿಮ್ಮ ಜೊತೆ ಇರಲಿದೆ. ವಂಡ್ಸೆಯಲ್ಲಿ ಎಸ್.ಎಲ್.ಆರ್.ಎಂ ಯೋಜನೆ ಮಾದರಿಯಾಗಿ ಮೂಡಿಬಂದಿದೆ. ಅದೇ ರೀತಿ ಕ್ಲಸ್ಟರ್ ಮಟ್ಟದ ಉಪಶಾಮಕ ಆರೈಕೆ ಯೋಜನೆಯೂ ಕೂಡಾ ಯಶಸ್ವಿಯಾಗಲಿ ಎಂದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಹೇಳಿದರು.
ರಾಜ್ಯದಲ್ಲಿ ಪ್ರಥಮವಾಗಿ ವಂಡ್ಸೆ ಕ್ಲಸ್ಟರ್‍ನಲ್ಲಿ ಅನುಷ್ಟಾನ ಆಗುತ್ತಿರುವ ಸಮಗ್ರ ಆರೋಗ್ಯ ಮತ್ತು ಉಪಶಾಮಕ ಆರೈಕೆ (ಪಾಲಿಯೇಟಿವ್ ಕೇರ್ ಯೂನಿಟ್) ದೀರ್ಘಕಾಲಿನ ಕಾಯಿಲೆ ಹಾಗೂ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳ ಆರೋಗ್ಯದ ಮೇಲೆ ನಿಗಾ ವಹಿಸುವ ಸಲುವಾಗಿ ವಂಡ್ಸೆ ಕ್ಲಸ್ಟರ್ ವ್ಯಾಪ್ತಿಯಲ್ಲಿ ಈಗಾಗಲೇ ಗುರುತಿಸಲಾದ ವ್ಯಕ್ತಿಗಳನ್ನು ವೈದ್ಯಕೀಯ ಪರೀಕ್ಷಿಸುವ ಪ್ರಕ್ರಿಯೆಗೆ ವಂಡ್ಸೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಅವರು ಚಾಲನೆ ನೀಡಿ ಮಾತನಾಡಿದರು.
ಆಶಾ ಕಾರ್ಯಕರ್ತರಿಗೆ ಈ ಯೋಜನೆಯಲ್ಲಿ ಒಳಪಡುವ ವ್ಯಕ್ತಿಗಳ ನಿಖರ ಮಾಹಿತಿ ಇರುತ್ತದೆ. ಆರೋಗ್ಯ ಮತ್ತು ಉಪಶಾಮಕ ಆರೈಕೆ ಯೋಜನೆಗೆ ಸಿಎಸ್.ಆರ್ ಅಳವಡಿಕೆಯ ಬಗ್ಗೆ ಚರ್ಚೆ ನಡೆಸುತ್ತೇವೆ. ಇದೊಂದು ಉತ್ತಮ ಕಾರ್ಯಕ್ರಮ ಎಂದು ಅವರು ಹೇಳಿದರು.
ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಅವಿನಾಶ್ ಅಧ್ಯಕ್ಷತೆ ವಹಿಸಿದ್ದರು.
ನಿರಾಮಯ ಸೊಸೈಟಿ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಪ್ರಪ್ರಥಮವಾಗಿ ವಂಡ್ಸೆ ಕ್ಲಸ್ಟರ್‍ನಲ್ಲಿ ಪಾಲಿಯೇಟಿವ್ ಕೇರ್ ಯೂನಿಟ್ ಆರಂಭಗೊಂಡಿದೆ. ಕೇರಳ ರಾಜ್ಯದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಈ ಕಾರ್ಯಕ್ರಮ ರಾಜ್ಯದಲ್ಲಿ ಪೈಲೆಟ್ ಯೋಜನೆಯಾಗಿ ವಂಡ್ಸೆ ಕ್ಲಸ್ಟರ್ ಮಟ್ಟದಲ್ಲಿ ಅನುಷ್ಠಾನವಾಗಿದೆ. ವಂಡ್ಸೆ, ಚಿತ್ತೂರು, ಇಡೂರು, ಆಲೂರು, ಹಕ್ಲಾಡಿ, ಹೆಮ್ಮಾಡಿ, ಕೆರಾಡಿ ಈ ಗ್ರಾಮ ಕ್ಲಸ್ಟರ್ ವ್ಯಾಪ್ತಿಗೆ ಒಳಪಡುತ್ತಿದ್ದು, ಈ ಗ್ರಾಮಗಳಲ್ಲಿ ದೀರ್ಘಕಾಲಿನ ಕಾಯಿಲೆ ಹಾಗೂ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ 317 ವ್ಯಕ್ತಿಗಳನ್ನು ಈಗಾಗಲೇ ಆಶಾ ಕಾರ್ಯಕರ್ತೆಯರು ಗುರುತಿಸಿದ್ದಾರೆ. ಈಗ ಮಣಿಪಾಲ ಮಾಹೆಯ ವೈದ್ಯರ ತಂಡ ಗುರುತಿಸಲಾದ ಕುಟುಂಬಗಳ ಸಮೀಕ್ಷೆ ಮಾಡಲಿದ್ದು, ಅದನ್ನು ದೃಢೀಕರಿಸುವ ಕಾರ್ಯ ಇವತ್ತಿನಿಂದ ಆರಂಭವಾಗುತ್ತದೆ. ಉಪಶಾಮಕ ಆರೈಕೆಗೆ ವಾರ್ಡ್ ಮಟ್ಟದಲ್ಲಿ ಒಬ್ಬರು ಸ್ವಯಂ ಸೇವಕರು ಕಾರ್ಯನಿರ್ವಹಿಸುತ್ತಾರೆ. ಬೆಂಗಳೂರಿನ ಕೆ.ಎಚ್.ಪಿ.ಟಿ ಸಂಸ್ಥೆ ಪೂರಕ ವ್ಯವಸ್ಥೆ ಇದಕ್ಕೆ ಪೂರಕ ಮಾರ್ಗದರ್ಶನ ನೀಡುತ್ತಿದ್ದು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲಹೆ ಸೂಚನೆ ಮಾರ್ಗದರ್ಶನ ನೀಡುತ್ತಾರೆ. ಇದಕ್ಕಾಗಿ ಒಂದು ಟಾಸ್ಕ್‍ಪೋರ್ಸ್ ಸಮಿತಿ ರಚನೆ ಮಾಡಲಾಗಿದೆ. ವಂಡ್ಸೆ ಕ್ಲಸ್ಟರ್ ಮಟ್ಟದಲ್ಲಿ ನಿರಾಮಯ ಎನ್ನುವ ಸೊಸೈಟಿ ರಚಿಸಲಾಗಿದ್ದು ಅದರ ನೋಂದಣಿ ಪ್ರಕ್ರಿಯೆಯೂ ಚಾಲ್ತಿಯಲ್ಲಿದೆ. ಪಾಲಿಯೇಟಿವ್ ಕೇರ್ ಯೂನಿಟ್‍ನ್ನು ವ್ಯವಸ್ಥಿತವಾಗಿ ರೂಪಿಸುವ ನಿಟ್ಟಿನಲ್ಲಿ ಪಂಚಾಯತ್ ವತಿಯಿಂದ ಸ್ಥಳವನ್ನು ಕಾದಿರಿಸಲಾಗಿದೆ. ಕಟ್ಟಡ ರಚನೆ ಇತ್ಯಾದಿ ಮೂಲಸೌಕರ್ಯಗಳಿಗಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ನಿರಾಮಯ ಸೊಸೈಟಿ ಕಾರ್ಯದರ್ಶಿ ಕೆರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದರ್ಶನ ಶೆಟ್ಟಿ, ಖಜಾಂಚಿ ಇಡೂರು ಕುಂಜ್ಞಾಡಿ ಗ್ರಾ.ಪಂ ಅಧ್ಯಕ್ಷೆ ಆಶಾ ಆಚಾರ್ಯ, ಚಿತ್ತೂರು ಗ್ರಾ.ಪಂ. ಅಧ್ಯಕ್ಷ ರವಿರಾಜ ಶೆಟ್ಟಿ, ಆಲೂರು ಗ್ರಾ.ಪಂ ಅಧ್ಯಕ್ಷ ರಾಜೇಶ ದೇವಾಡಿಗ, ಹಕ್ಲಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಬಾಸ್ ಶೆಟ್ಟಿ, ವಂಡ್ಸೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗೋವರ್ದನ್ ಜೋಗಿ, ಸದಸ್ಯರಾದ ಶಶಿಕಲಾ ಎಸ್ ವಂಡ್ಸೆ, ಸುಬ್ಬು, ಸುಶೀಲ, ಮಣಿಪಾಲ ಮಾಹೆ ವೈದ್ಯಕೀಯ ತಜ್ಞರ ತಂಡ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ವಂಡ್ಸೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಶೇಟ್ ಕಾರ್ಯಕ್ರಮ ನಿರ್ವಹಿಸಿದರು.











