ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಐ.ಎಂ.ಜಯರಾಮ ಶೆಟ್ಟಿ ಅವರು ವಿದ್ಯಾರ್ಥಿ ದಿನಗಳಲ್ಲಿ ವಿದ್ಯಾರ್ಥಿ ನಾಯಕರಾಗಿ ಗುರುತಿಸಿಕೊಂಡಿದ್ದರು. ಅವರಲ್ಲಿದ್ದ ನಾಯಕತ್ವ ಗುಣಗಳಿಂದ ಶಾಸಕರಾಗಿ, ಸಂಸದರಾಗಿ ಸ್ಮರಣೀಯ ಕೆಲಸಗಳನ್ನು ಮಾಡಿ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಇಂಜಿನಿಯರಿಂಗ್ ಕಾಲೇಜಿನ ಅವಶ್ಯಕತೆಯನ್ನು ಮನಗಂಡು ತನ್ನ ಹುಟ್ಟೂರಿನಲ್ಲಿ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಿ ಸಹಸ್ರಾರು ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ್ದಾರೆ. ಜಯರಾಮ ಶೆಟ್ಟಿ ಅವರು ಕಂಡ ಕನಸನ್ನು ಅವರ ಮಕ್ಕಳು ನನಸಾಗಿಸುವ ಪ್ರಯತ್ನ ನಡೆಸುತ್ತಿದ್ದು, ಅವರ ಒಳ್ಳೆಯ ಭಾವನೆ ಇದರಲ್ಲಿ ಮುಂದುವರಿಯುತ್ತಿರುವುದು ಅಭಿನಂದನೀಯ ಎಂದು ಕರ್ಣಾಟಕ ಬ್ಯಾಂಕಿನ ಮಾಜಿ ನಿರ್ದೇಶಕ ಡಾ.ಎಚ್.ರಾಮಮೋಹನ್ ಹೇಳಿದರು.
ಮೂಡ್ಲಕಟ್ಟೆಯ ಐಎಂಜೆ ಇನ್ಸ್ಟಿಟ್ಯೂಶನ್ಸ್ ಆಶ್ರಯದಲ್ಲಿ ಮೂಡ್ಲಕಟ್ಟೆ ಐಎಂಜೆ ಕ್ಯಾಂಪಸ್‍ನಲ್ಲಿ ಗುರುವಾರ ಜರಗಿದ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಈಗ ವಿದ್ಯಾರ್ಥಿ ಜೀವನವನ್ನು ಆನಂದಿಸಿ ಸುಖದಲ್ಲಿ ಇದ್ದರೆ ಮುಂದಿನ ದಿನಗಳನ್ನು ಕಷ್ಟದಲ್ಲಿ ಸಾಗಿಸಬೇಕಾಗಬಹುದು. ಆದ್ದರಿಂದ ವಿದ್ಯಾರ್ಥಿಗಳು ಕರ್ತವ್ಯ ಪ್ರಜ್ಞೆ, ಶಿಸ್ತು ಹಾಗೂ ಶ್ರದ್ಧೆಯನ್ನು ಜೀವನದಲ್ಲಿ ರೂಪಿಸಿಕೊಂಡು ನೈತಿಕತೆಯನ್ನು ಬೆಳೆಸಿಕೊಳ್ಳಬೇಕು. ಗುರು ಹಿರಿಯರನ್ನು ಗೌರವಿಸುವ ಪ್ರವೃತ್ತಿಯನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮೂಡ್ಲಕಟ್ಟೆಯ ಐಎಂಜೆ ಇನ್ಸ್ಟಿಟ್ಯೂಶನ್ಸ್‍ನ ಚೇರ್‍ಮನ್ ಸಿದ್ಧಾರ್ಥ ಜೆ.ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೆಕಳ ಹಾಜಬ್ಬ ಮತ್ತು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಭಾಸ್ಕರ ಕಾಮತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ಉಡುಪಿ ಸೆನ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ರಾಮಚಂದ್ರ ನಾಯಕ್ ಶುಭಾಶಂಸನೆಗೈದರು. ಮೂಡ್ಲಕಟ್ಟೆ ಎಂಎನ್‍ಬಿಎಸ್ ಟ್ರಸ್ಟ್‍ನ ಟ್ರಸ್ಟಿ ರಾಮ್ ರತನ್ ಶೆಟ್ಟಿ, ನಿರ್ದೇಶಕ ಸತ್ಯಜಿತ್, ರಾಮಕೃಷ್ಣ ಹೆಗ್ಡೆ, ವೈಸ್ ಪ್ರಿನ್ಸಿಪಾಲ್ ಮೆಲ್ವಿನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
ಎಂಐಟಿ ಪ್ರಾಂಶುಪಾಲೆ ಪ್ರತಿಭಾ ಪಾಟೀಲ್ ಸ್ವಾಗತಿಸಿದರು. ವೈಸ್ ಪ್ರಿನ್ಸಿಪಾಲ್ ರೂಪಶ್ರೀ ಮತ್ತು ಸುವರ್ಣ ರಾಣಿ ಅತಿಥಿಗಳನ್ನು ಪರಿಚಯಿಸಿದರು. ಪ್ರಾಧ್ಯಾಪಕಿ ಅರ್ಚನಾ ಗದ್ದೆ ಸನ್ಮಾನ ಪತ್ರ ವಾಚಿಸಿದರು. ಸಹಾಯಕ ಪ್ರಾಧ್ಯಾಪಕಿ ರಕ್ಷಿತಾ ಅಡಿಗ ಕಾರ್ಯಕ್ರಮ ನಿರ್ವಹಿಸಿದರು. ನರ್ಸಿಂಗ್ ಕಾಲೇಜಿನ ಪ್ರಿನ್ಸಿಪಾಲ್ ಜೆನ್ನಿಫರ್ ಮಿನೇಜಸ್ ವಂದಿಸಿದರು.











