ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಮಾಹಿತಿ ನೀಡದೇ ಕಾಮಗಾರಿ ನಡೆಸುವವರ ಮೇಲೆ ಕೇಸು ದಾಖಲಿಸಿ. ಅಭಿವೃದ್ಧಿ ಕಾಮಗಾರಿ ಟೆಂಡರ್‍ನಲ್ಲಿ ಕುಡಿಯುವ ನೀರು, ಮೆಸ್ಕಾಂ ಇತ್ಯಾದಿ ಕಾಮಗಾರಿಯ ದುರಸ್ತಿಗೆ ಯುಟಿಲಿಟಿ ದರ ನಿಗದಿಯಾಗಿದ್ದರೂ ಬಿಎಸ್‍ಎನ್‍ಎಲ್ ಸಂಸ್ಥೆ ಹೆಸರು ನಮೂದಾಗಿಲ್ಲ. ಈ ಬಗ್ಗೆ ರಾಜ್ಯ ಸರಕಾರದ ಜತೆ ಸಂವಹನ ನಡೆಸಲಾಗುವುದು. ಹೊಸ ಟವರ್‍ಗಳು, ಬ್ಯಾಟರಿಗಳ ಪೂರೈಕೆಗೆ ಪತ್ರ ಬರೆಯಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ದೂರವಾಣಿ ಸಮಸ್ಯೆ ಕುರಿತು ಗುರುವಾರ ಬಿಎಸ್‍ಎನ್‍ಎಲ್ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಉತ್ತಮ ಸರ್ವಿಸ್ ಕೊಟ್ಟಾಗ ಗ್ರಾಹಕರು ಸೀಮ್ ಪೋರ್ಟ್ ಮಾಡುವುದಿಲ್ಲ. ಪಂಚಾಯತ್‍ಗಳ ಮೂಲಕ ನಿರ್ವಹಣೆ ಮಾಡುವ ವ್ಯವಸ್ಥೆಯನ್ನು ಗೋಪಾಡಿ ಪಂಚಾಯತ್‍ನಿಂದ ಆರಂಭಿಸಿ, ಉಡುಪಿ ಚಿಕ್ಕಮಗಳೂರಿನಲ್ಲಿ ಪ್ರಾಯೋಗಿಕವಾಗಿ ನಡೆಸಬಹುದು. ಟವರ್ ನಿರ್ಮಾಣದ ಜಾಗಕ್ಕೆ ಸಂಬಂಧಪಟ್ಟವರಿಗೂ, ಟವರ್ ಪಕ್ಕದವರು ಖಾಸಗಿಯಾಗಿ ನಿರ್ವಹಿಸುವುದಾದರೂ ಜನರೇಟರ್ ನಿರ್ವಹಣೆಗೆ ಅವಕಾಶ ಇದೆ ಎಂದರು.
ಮೊಬೈಲ್ ಟವರ್‍ಗಳಲ್ಲಿ ಜನರೇಟರ್ ಚಾಲೂ ಮಾಡುವುದು ಸೇರಿದಂತೆ ಡೀಸೆಲ್ ತುಂಬುವುದು ಇತ್ಯಾದಿ ಕೆಲಸಗಳನ್ನು ದೇಶಾದ್ಯಂತ ಒಂದೇ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಆ ಸಂಸ್ಥೆಯ ಸಿಬಂದಿ ಇದನ್ನು ಸರಿಯಾಗಿ ನಿರ್ವಹಿಸದ ಕಾರಣ ಗುತ್ತಿಗೆ ರದ್ದುಪಡಿಸಲು ಕೋರಿ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ಟವರ್‍ಗಳ ನಿರ್ವಹಣೆ ಹೊಣೆ ಪಂಚಾಯತ್‍ಗಳಿಗೇ ನೀಡುವಂತೆ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು. ಅದಕ್ಕೂ ಮುನ್ನ ಜನರೇಟರ್ ಆನ್ ಮಾಡುವ ಕೆಲಸಕ್ಕೆ ಪಂಚಾಯತ್ ಸಿಬಂದಿ ಅಥವಾ ಸ್ಥಳೀಯರಿಗೆ ಮಾಸಿಕ ಗೌರವಧನ ನೀಡುವ ಮೂಲಕ ಮಾಡಿಸಲಾಗುವುದು. ಗ್ರಾಮ ಸಭೆಗಳಿಗೂ ಬಿಎಸ್‍ಎನ್‍ಎಲ್ ಅಧಿಕಾರಿಗಳು ಹೋಗಬೇಕು. ಜನರ ಸಮಸ್ಯೆ ಅರಿಯಬೇಕು ಎಂದು ಸಂಸದರು ಹೇಳಿದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಡಾಮಕ್ಕಿಯ ಹಂಜ, ಚೋರಾಡಿ, ಅಮಾಸೆಬಲಿನ ಬಳ್ಮ, ಕೆಳಸುಂಕ, ಮಚ್ಚಟ್ಟು ಗ್ರಾಮದ ಹಂಚಿಕಟ್ಟೆ , ಕಬ್ಬಿನಾಲೆ ಮೊದಲಾದೆಡೆ ಹೊಸ ಟವರ್‍ಗಳನ್ನು ಅಳವಡಿಸಿದ್ದರೂ ಸಿಗ್ನಲ್ ಇಲ್ಲ, ಕರೆ ಹೋಗುವುದಿಲ್ಲ ಎಂದು ದೂರಿದರು.
ಬಿಎಸ್‍ಎನ್‍ಎಲ್ ಮಂಗಳೂರು ವೃತ್ತದ ಪಿಜಿಎಂ ನವೀನ್ ಗುಪ್ತ, ಖಾಸಗಿ ಸಂಸ್ಥೆಗಳ ಟವರ್, ಉಪಕರಣಗಳು ತಾಂತ್ರಿಕವಾಗಿ ಭಿನ್ನವಾಗಿವೆ. ವಿದೇಶೀ ಉಪಕರಣಗಳಾಗಿವೆ. ಪ್ರಸ್ತುತ ಬಿಎಸ್‍ಎನ್‍ಎಲ್ ಟಿಸಿಎಸ್ ಸಂಸ್ಥೆ ಮೂಲಕ ಸಿಡಾಟ್ ಉಪಕರಣಗಳನ್ನು 4ಜಿಗಾಗಿ ಬಳಸುತ್ತಿದ್ದು ಸಂಪೂರ್ಣ ದೇಸೀ ನಿರ್ಮಿತ ಉಪಕರಣಗಳು ಇನ್ನೂ ಪ್ರಾಯೋಗಿಕ ಹಂತದಲ್ಲಿವೆ. ಸಣ್ಣ ಪ್ರಮಾಣದ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತಿದ್ದು ಸರಿಪಡಿಸಲಾಗುತ್ತಿದೆ ಎಂದರು.
ಬಿಎಸ್‍ಎನ್‍ಎಲ್ ಮಂಗಳೂರು ವೃತ್ತದ ಎಜಿಎಂ ಜನಾರ್ದನ್, ಪ್ರಸ್ತುತ ಗುತ್ತಿಗೆ ವಹಿಸಿಕೊಂಡ ಸಂಸ್ಥೆ 15 ಟವರ್‍ಗಳಿಗೆ ಒಬ್ಬರಂತೆ ಸಿಬಂದಿ ನೇಮಿಸಿದ್ದು ವಿದ್ಯುತ್ ವ್ಯತ್ಯಯವಾದ ಕೂಡಲೇ ಅವರು ಪ್ರತೀ ಟವರ್ ಬುಡಕ್ಕೆ ಹೋಗಿ ಜನರೇಟರ್ ಆನ್ ಮಾಡಬೇಕಿದೆ. ಇದನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಟವರ್‍ಗಳು 15-20 ವರ್ಷದಷ್ಟು ಹಳೆಯದಾಗಿದ್ದು ಸ್ವಯಂ ಚಾಲೂ ಆಗುವ ಜನರೇಟರ್ ವ್ಯವಸ್ಥೆ ಇಲ್ಲ. ಹಾಗೆ ಮಾಡಬೇಕಾದರೆ ಪ್ರತಿ ಟವರ್‍ಗೆ 2 ಲಕ್ಷ ರೂ. ಬೇಕಾದರೂ ಉಪಕರಣ ಹಳೆಯದಾಗಿರುತ್ತದೆ. 83ರಲ್ಲಿ ಜನರೇಟರ್ ಇವೆ. ಆದರೆ ಸ್ವಯ ಚಾಲೂ ಆಗುವುದಿಲ್ಲ ಎಂದರು.
ಉಡುಪಿ ಜಿಲ್ಲೆಗೆ 150 ಟವರ್‍ಗಳ ಬೇಡಿಕೆ ಇದ್ದು 30 ಮಂಜೂರಾಗಿ ಪ್ರಯೋಗಾರ್ಥ ಸಿಗ್ನಲ್ ಬಿಡಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ 196 ಹಳೆ ಟವರ್‍ಗಳಿದ್ದು 111 ಟವರ್ 4ಜಿಗೆ ಅಪ್‍ಡೇಟ್ ಆಗಿದೆ. 73 ಕಡೆ ಬ್ಯಾಟರಿಯೇ ಇಲ್ಲ. ಕರೆಂಟ್ ಹೋದಾಗ ನೆಟ್‍ವರ್ಕ್ ಇರುವುದಿಲ್ಲ. 10 ಬ್ಯಾಕ್‍ಅಪ್ ಬ್ಯಾಟರಿಗಳು ಮಂಜೂರಾಗಿದ್ದು 4 ಬಂದಿವೆ. ಇನ್ನು 63 ಬ್ಯಾಟರಿಗಳು ಬೇಕು. ಕುಂದಾಪುರದಲ್ಲಿ 30, ಬೈಂದೂರಿನಲ್ಲಿ 34 ಟವರ್‍ಗಳಿವೆ ಎಂದು ಅವರು ಹೇಳಿದರು.
ಗೋಪಾಡಿ ಪಂಚಾಯತ್ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ಆನೆಗುಡ್ಡೆ ಟವರ್‍ನಲ್ಲಿ ಸಿಗ್ನಲ್ ಸಮಸ್ಯೆ ಇದೆ. ಡಿಸೆಂಬರ್‍ನಲ್ಲೇ ದೂರು ನೀಡಿದ್ದರೂ ಸ್ಪಂದನೆಯೇ ಇಲ್ಲ ಎಂದರು. ಹೆಬ್ರಿ, ಶಂಕರನಾರಾಯಣ, ಹಿರಿಯಡ್ಕದಲ್ಲಿ ಒಎಫ್‍ಸಿ ಸಮಸ್ಯೆ ಹೆಚ್ಚಿದೆ ಎಂದು ಸಂಸದರು ಹೇಳಿದರು. ಜಲ್‍ಜೀವನ್ ಮಿಶನ್, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಯಿಂದ ಒಎಫ್‍ಸಿ ಕೇಬಲ್ ತುಂಡಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು.
ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ಉಪಾಧ್ಯಕ್ಷೆ ವನಿತಾ ಬಿಲ್ಲವ, ಬಿಎಸ್‍ಎನ್‍ಎಲ್ ಸಲಹಾ ಸಮಿತಿ ಸದಸ್ಯರಾದ ಪ್ರದೀಪ್ ಕೊಠಾರಿ, ಗೋಪಾಲಕೃಷ್ಣ, ಶೈಲೇಂದ್ರ ಶೆಟ್ಟಿ, ಎಜಿಎಂ ಬಿಂದು ಪ್ರಕಾಶ್, ಡಿಜಿಎಂ ಗೀತಾ ಕುಮಾರಿ, ಡಿಜಿಎಂ ಸತೀಶ್ ರಾವ್, ಎಸ್‍ಡಿಇ ಕೃಷ್ಣ ನಾಯಕ್, ಒಎಫ್‍ಸಿ ಜೆಟಿಒ ರಾಜೇಶ್, ಬೈಂದೂರು, ಶಂಕರನಾರಾಯಣ ಜೆಟಿಒ ದಿನೇಶ್, ಕುಂದಾಪುರ ಜೆಟಿಒ ರಾಜೇಂದ್ರ, ಸುಭಾಶ್ಚಂದ್ರ, ಮೆಸ್ಕಾಂ ಎಇಇ ವಿಜಯ ಕುಮಾರ್ ಶೆಟ್ಟಿ, ತಲ್ಲೂರು ಎಇ ಹರೀಶ್, ರಾಜೇಶ್ ಕಾವೇರಿ, ಸುಧೀರ್ ಕೆ.ಎಸ್., ಪುರಸಭೆ ಮುಖ್ಯಾಧಿಕಾರಿ ಆನಂದ್ ಜೆ. ಉಪಸ್ಥಿತರಿದ್ದರು.











