ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಜಿಲ್ಲೆಯ ಇತಿಹಾಸದಲ್ಲೇ ವಿಶೇಷಚೇತನ ವಿದ್ಯಾರ್ಥಿ ಮೊದಲ ಬಾರಿಗೆ ಸಂಗೀತ ವಿಷಯವನ್ನು ಆಯ್ದುಕೊಂಡು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐತಿಹಾಸಿಕ ಸಾಧನೆ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.
ತ್ರಾಸಿ ಗ್ರಾಮದ ಉದ್ಯಮಿ ರಘುನಂದ ನಾಯಕ್ ಮತ್ತು ಅಂಜಲಿ ನಾಯಕ್ ದಂಪತಿಯ ಪುತ್ರನಾಗಿರುವ ವಿಶೇಷಚೇತನ ವಿದ್ಯಾರ್ಥಿ ಅನುರಾಗ್ ನಾಯಕ್ ತಲ್ಲೂರಿನ ನಾರಾಯಣ ಸ್ಪೆಶಲ್ ಸ್ಕೂಲ್‍ನ ವಿದ್ಯಾರ್ಥಿ. ಅನುರಾಗ್ ನಾಯಕ್ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.80 ಅಂಕಗಳನ್ನು ಪಡೆದುಕೊಂಡಿದ್ದಲ್ಲದೆ, ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಹಿಂದುಸ್ತಾನಿ ಸಂಗೀತವನ್ನು ಐಚ್ಛಿಕ ವಿಷಯವನ್ನಾಗಿ ಆಯ್ದುಕೊಂಡು ಉತ್ತೀರ್ಣನಾಗಿದ್ದಾನೆ. ಕನ್ನಡ-105, ಸಮಾಜಶಾಸ್ತ್ರ-88, ಹಿಂದುಸ್ಥಾನಿ ಸಂಗೀತ-90, ಸಮಾಜವಿಜ್ಞಾನ-60 ಪಡೆದುಕೊಂಡು ಅತ್ಯುತ್ತಮ ಸಾಧನೆ ಮಾಡಿದ್ದಾನೆ. ತಲ್ಲೂರಿನ ಸರಕಾರಿ ಪ್ರೌಢಶಾಲೆಯಲ್ಲಿ ಜರಗಿದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಈತನಿಗೆ ಹಕ್ಲಾಡಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಸಾತ್ವಿಕ್ ಸಹಕರಿಸಿದ್ದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಂಗೀತ ವಿಷಯ ಇರುವುದು ಯಾರಿಗೂ ತಿಳಿದಿರಲಿಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ವಿಶೇಷಚೇತನ ವಿದ್ಯಾರ್ಥಿಗೆ ಒಟ್ಟು ನಾಲ್ಕು ವಿಷಯಗಳಿದ್ದು, ಈ ಪೈಕಿ ಒಂದು ವಿಷಯ ಐಚ್ಛಿಕ ವಿಷಯವಾಗಿತ್ತು. ಅನುರಾಗ್ ನಾಯಕ್ ಅವರಿಗೆ ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ಮತ್ತು ಅನುಭವ ಇದ್ದುದರಿಂದ ಸಂಗೀತ ವಿಷಯವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಇಷ್ಟರವರೆಗೆ ಯಾರೊಬ್ಬರೂ ಸಂಗೀತ ವಿಷಯವನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಆಯ್ಕೆ ಮಾಡಿಕೊಂಡಿರಲಿಲ್ಲ. ಹೀಗಾಗಿ ಪ್ರಶ್ನೆ ಪತ್ರಿಕೆ ಹೇಗೆ ಬರುತ್ತದೆ ಎಂಬುದು ತಿಳಿದಿರಲಿಲ್ಲ. ಇಂಟರ್‍ನೆಟ್‍ನಲ್ಲಿ ದೊರೆತ ಕೆಲವೊಂದು ಪ್ರಶ್ನೆ ಪತ್ರಿಕೆಗಳನ್ನು ನೋಡಿ ಅದರ ಆಧಾರದ ಮೇಲೆ ಅನುರಾಗ್ ನಾಯಕ್ ಪರೀಕ್ಷೆ ಎದುರಿಸಿದ್ದರು. ವಿಶೇಷವೆಂದರೆ ಸಂಗೀತ ಶಿಕ್ಷಕರಿಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಂಗೀತ ವಿಷಯ ಎಂಬುದೇ ತಿಳಿದಿರಲಿಲ್ಲ ಎಂದು ಅನುರಾಗ್ ನಾಯಕ್ ತಂದೆ ರಘುನಂದನ್ ನಾಯಕ್ ಮಗನ ಸಾಧನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.











