ಕಣ್ಣಿನ ಬಗ್ಗೆ ನಿರ್ಲಕ್ಷ್ಯ ವಹಿಸದಿರಿ – ನೇತ್ರ ತಜ್ಞೆ ಡಾ.ಪ್ರತಿಭಾ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕಣ್ಣು ಮನುಷ್ಯನ ಅವಿಭಾಜ್ಯ ಅಂಗ ಅದರ ಬಗ್ಗೆ ಆಗಾಗ ತಪಾಸಣೆ ಹಾಗೂ ಕಾಳಜಿ ಅಗತ್ಯ ಎಂದು ಉಡುಪಿಯ ಪ್ರಸಾದ್ ನೇತ್ರಾಲಯ ನೇತ್ರ ತಜ್ಞೆ ಡಾ.ಪ್ರತಿಭಾ ನುಡಿದರು.
ಶನಿವಾರ ಮೂಡುಗಿಳಿಯಾರಿನ ಯೋಗಬನದಲ್ಲಿ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನ, ಯೋಗಬನ ಮೂಡುಗಿಳಿಯಾರು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ಕರ್ನಾಟಕ ಸರಕಾರ ಉಡುಪಿ ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ ಉಡುಪಿ ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮುದಾಯ ಆರೋಗ್ಯ ಕೇಂದ್ರ, ಕೋಟ ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಕಣ್ಣಿನ ಮಹತ್ವ ಅರಿತು ನೇತ್ರದಾನ ಮಾಡಬೇಕು. ಈ ನಿಟ್ಟಿನಲ್ಲಿ ಇಲ್ಲಿನ ಸರ್ವಕ್ಷೇಮ ಯೋಗಬನ ಜನಸಾಮಾನ್ಯರಿಗೆ ಅಗತ್ಯವಿರುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಕೋಟದ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಕೆ.ಮಾಧವ ಪೈ, ಯೋಗಬನದ ಸಹ ನಿರ್ದೇಶಕ ಡಾ.ಗಣೇಶ್, ಯೋಗಬನದ ಸಹ ನಿರ್ದೇಶಕ ಷಣ್ಮುಖ ಕುತ್ಯಾಳ ಉಪಸ್ಥಿತರಿದ್ದರು.











