ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಇಲ್ಲಿನ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಬಹುಕಾಲದ ಬೇಡಿಕೆಯಾದ ಗಿಳಿಯಾರು ಹೊಳೆ ಹೂಳೆತ್ತಲು ಕೋಟ ಗ್ರಾಮಪಂಚಾಯತ್ ಅಣಿಯಾಗಿದೆ.
ಬುಧವಾರ ಕೋಟ ಗ್ರಾಮಪಂಚಾಯತ್ ಹಾಗೂ ಇಲ್ಲಿನ ಸ್ಮಾರ್ಟ ಸಿಟಿ ಸ್ಥಳೀಯ ಸಂಘ ಸಂಸ್ಥೆಗಳ ನೆರವಿನೊಂದಿಗೆ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ..
ಸರಳ ಕಾರ್ಯಕ್ರಮದಲ್ಲಿ ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿಭರತ್ ಕುಮಾರ್ ಶೆಟ್ಟಿ ಮಾತನಾಡಿ ಬಹುಕಾಲದಿಂದ ಕೃತಕ ನೆರೆಯಿಂದ ಈ ಭಾಗದ ಕೃಷಿಕರು ಸಮಸ್ಯೆ ಎದುರಿಸುತ್ತಿದ್ದು ಇದರ ಮುಕ್ತಿಗಾಗಿ ಈಗಾಗಲೇ ಸಾಕಷ್ಟು ಹೋರಾಟಗಳು ನಡೆಯುತ್ತಿದೆ. ಈ ಹಿನ್ನಲ್ಲೆಯಲ್ಲಿ ಕೋಟ ಗ್ರಾಮಪಂಚಾಯತ್ ತನ್ನ ಕ್ರೀಯಾಯೋಜನೆಯ ಮೂಲಕ ಹೊಳೆ ಹೂಳು ತೆಗೆಯಲು ಅನುದಾನ ಒದಗಿಸಲಿದ್ದು, ಸ್ಥಳೀಯ ರೈತ ಸಂಘಟನೆಗಳ ಹಾಗೂ ದಾನಿಗಳ ಸಹಕಾರ ಪಡೆದು ಈ ಕಾರ್ಯಕ್ಕೆ ವೇಗ ನೀಡಲಿದೆ ಎಂದರು.
ಉದ್ಯಮಿ ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ ತೆಕ್ಕಟ್ಟೆ ಭಾಗದಿಂದ ಸಾಲಿಗ್ರಾಮ ಪಟ್ಟಣಪಂಚಾಯತ್ ಮೂಲಕ ಮಾಬುಕಳ ಸೀತಾನದಿಯನ್ನು ಸೇರುವ ಈ ಹೊಳೆ ಸಾಲುಗಳನ್ನು ಹೂಳೆತ್ತುವ ಅಗತ್ಯತೆಯನ್ನು ಒತ್ತಿ ಹೇಳಿದರಲ್ಲದೆ ತಮ್ಮಿಂದಾದ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು.
ಕೋಟದ ಸ್ಮಾರ್ಟ್ ಸಿಟಿ, ಹಸಿರು ಸೇನೆ ಹದಿನಾಲ್ಕು ಗ್ರಾಮ ಒಕ್ಕೂಟ, ರೈತಧ್ವನಿ ಸಂಘ ಕೋಟ ಇತರ ಸಂಘಟನೆಗಳು ಈ ಕಾರ್ಯಕ್ಕೆ ಕೈಜೊಡಿಸಲಿದೆ ಎಂದು ಹೊಳೆ ಹೂಳೆತ್ತುವ ಹೋರಾಟದ ಹಸಿರು ಸೇನೆಯ ಸಮಿತಿಯ ವಸಂತ ಗಿಳಿಯಾರ್ ಅಭಿಮತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೋಟ ಗ್ರಾಮಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ, ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ, ಸದಸ್ಯರಾದ ಅಜಿತ್ ದೇವಾಡಿಗ, ಶೇಖರ್ ಗಿಳಿಯಾರು, ಕೋಟ ಸ್ಮಾರ್ಟ ಸಿಟಿ ಮುಖ್ಯಸ್ಥ ಚೇತನ್ ಶೆಟ್ಟಿ, ರೈತ ಮುಖಂಡರಾದ ರವೀಂದ್ರ ಐತಾಳ್, ಬಾಬು ಶೆಟ್ಟಿ, ತಿಮ್ಮ ಕಾಂಚನ್, ಶೇಷಪ್ಪ ಮಯ್ಯ, ಮಾಜಿ ತಾ.ಪಂ ಸದಸ್ಯ ಭರತ್ ಕುಮಾರ್ ಶೆಟ್ಟಿ, ಸಾಲಿಗ್ರಾಮ ಪ.ಪಂ ಸದಸ್ಯ ಶ್ಯಾಮಸುಂದರ್ ನಾಯರಿ, ತೆಕ್ಕಟ್ಟೆ ವ್ಯಾಪ್ತಿಯ ಶ್ರೀನಾಥ ಶೆಟ್ಟಿ, ಪ್ರಶಾಂತ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು, ರೈತ ಸಮುದಾಯ ಉಪಸ್ಥಿತರಿದ್ದರು.











