ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಬಾರ್ಕೂರು ರೈಲು ನಿಲ್ದಾಣದಲ್ಲಿ ಎರಡನೇ ಪ್ಲಾಟ್ ಪಾರಂ ನಿರ್ಮಾಣ ಮಾಡುವಂತೆ ಮತ್ತು ಪ್ಲಾಟ್ ಪಾರಂ ನಿರ್ಮಾಣವಾಗುವವರೆಗೆ ಎರಡನೇ ಪ್ಲಾಟ್ ಪಾರಂ ಜಾಗವನ್ನು ಸಮತಟ್ಟುಗೊಳಿಸಿ ಹತ್ತಿಳಿಯಲು ತಾತ್ಕಾಲಿಕ ವ್ಯವಸ್ಥೆ ರೂಪಿಸುವಂತೆ ಕೊಂಕಣ ರೈಲ್ವೆ ಪ್ರಯಾಣಿಕರ ಸಲಹಾ ಸಮಿತಿಯ ಸದಸ್ಯ, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ಕೊಂಕಣ ರೈಲ್ವೆ ನಿಗಮವನ್ನು ಆಗ್ರಹಿಸಿದ್ದಾರೆ.
ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯ ಅಡಿ ತಾರದೇ ಇರುವ ಕಾರಣಕ್ಕಾಗಿ ಬಜೆಟ್ ಅನುದಾನವೇ ಸಣ್ಣ ಪುಟ್ಟ ಕೆಲಸಗಳಿಗೂ ಸಿಗುತ್ತಿಲ್ಲ. ಕನಿಷ್ಟ ಪ್ಲಾಟ್ ಪಾರಂ ನಿರ್ಮಾಣಕ್ಕೂ ಹೋರಾಟಗಳು, ಮನವಿಗಳ ಅಗತ್ಯ ಇರುವಾಗ ಇನ್ನು ಡಬ್ಲಿಂಗ್ ರೀತಿಯ ಬೃಹತ್ ಯೋಜನೆಗಳು ಕೊಂಕಣ ನಿಗಮದಿಂದ ಜಾರಿಯಾಗಲು ಸಾದ್ಯವೇ ಎಂದು ಪ್ರಶ್ನಿಸಿರುವ ಅವರು ಬಾರ್ಕೂರು ನಿಲ್ದಾಣದ ಪ್ಲಾಟ್ ಪಾರಂ ಅಭಿವೃದ್ಧಿಗೆ ಕೊಂಕಣ ನಿಗಮ ಹಾಗೂ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.
ಬಾರ್ಕೂರು ರೈಲು ನಿಲ್ದಾಣದ ಮೊದಲ ಪ್ಲಾಟ್ ಪಾರಮ್ ಒಂದು ವೇಳೆ ರೈಲು ಬಂದು ನಿಂತರೆ, ವಿರುದ್ದ ದಿಕ್ಕಿನಿಂದ ಬರುವ ರೈಲುಗಳು ಎರಡನೇ ಪ್ಲಾಟ್ ಪಾರಂ ಅಲ್ಲಿ ನಿಲ್ಲಬೇಕಾಗುತ್ತದೆ. ಆದರೆ ಅಲ್ಲಿ ಎತ್ತರಿಸಿದ ಪ್ಲಾಟ್ ಪಾರಂ ಇಲ್ಲದ ಕಾರಣ ನೇರವಾಗಿ ರೈಲಿನಿಂದ ಕೆಳಗೆ ಧುಮಕ ಬೇಕಾಗಿದ್ದು, ಇದರಿಂದ ವೃದ್ದರು, ಗರ್ಭಿಣಿಯರು, ಅಶಕ್ತರು ರೈಲಿನಿಂದ ಇಳಿಯಲು ಸಾದ್ಯವಾಗದೆ, ಇಳಿಯಲು ಪ್ರಯತ್ನ ಪಟ್ಟು ಗಾಯಗೊಂಡ ಘಟನೆಗಳು ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ಪ್ಲಾಟ್ ಪಾರಂ ಕಾಮಗಾರಿ ಆರಂಭವಾಗಲು ಅನುದಾನ, ಯೋಜನೆ ಎಂದೆಲ್ಲಾ ಕಾಲಹರಣ ಮಾಡದೇ ನಿಗಮದ ಮೂಲಕ ಈ ಕಾಮಗಾರಿ ಯಾವಾಗ ಕೈಗೊಳ್ಳಲಾಗುವುದು ಎಂಬುದನ್ನು ಸ್ಪಷ್ಟ ಪಡಿಸುವಂತೆ ಆಗ್ರಹಿಸಿರುವ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ, ಶಾಶ್ವತ ಎತ್ತರಿಸಿದ ಪ್ಲಾಟ್ ಪಾರಂ ನಿರ್ಮಾಣದವರೆಗೆ ಈಗಿರುವ ಪ್ಲಾಟ್ ಪಾರಂನಲ್ಲಿ ತಾತ್ಕಾಲಿಕ ರಚನೆ ನಿರ್ಮಿಸುವಂತೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಕೊಂಕಣ ರೈಲ್ವೆ ನಿಗಮಕ್ಕೆ ಮನವಿ ಸಲ್ಲಿಸಿದೆ.











