ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಅಂಪಾರು ಶ್ರೀ ದೇವದಾಸ ಪ್ರಭು ಕುಟುಂಬ ಹಾಗೂ ಶ್ರೀ ಪದ್ಮನಾಭ ಶೆಣೈ ಕುಟುಂಬದವರು ಸೀತಾರಾಮ ಕಲ್ಯಾಣೋತ್ಸವವನ್ನು ಭಕ್ತಿ ಹಾಗೂ ಶೃದ್ಧಾಪೂರ್ವಕ ನೆರವೇರಿಸಿದರು. ದಿ. ಶ್ರೀ ವೇದಮೂರ್ತಿ ದಾಮೋದರಾಚಾರ್ಯರ ಶಿಷ್ಯ ವೃಂದದವರು ಧಾರ್ಮಿಕ ವಿಧಿ ವಿಧಾಗಳನ್ನು ನಡೆಸಿದರು.
ಸೀತೆ ಹಾಗೂ ರಾಮದೇವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ದಿಬ್ಬಣವನ್ನು ಪುರ ಮೆರವಣಿಗೆಯೊಂದಿಗೆ ಕರೆತರಲಾಯಿತು. ರಾಮಚಂದ್ರ ದೇವರ ಪಲ್ಲಕ್ಕಿಯನ್ನು ದೇವದಾಸ ಪ್ರಭುಗಳ ಗೃಹದಿಂದ, ಸೀತಾ ಮಾತೆಯ ಪಲ್ಲಕ್ಕಿಯನ್ನು ಪದ್ಮನಾಭ ಶೆಣೈಯವರ ಗೃಹದಿಂದ ವಿಶೇಷ ವಾದ್ಯ ಘೋಷಗಳೊಂದಿಗೆ ಬರಮಾಡಿಕೊಳ್ಳಲಾಯಿತು.
ಈ ವಿಶೇಷ ಮಂಗಲೋತ್ಸವಕ್ಕೆ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮತ್ ವಿದ್ಯಾಧೀಶ ತೀರ್ಥರಿಗೆ ಭಕ್ತಿಪೂರ್ವಕ ಆಹ್ವಾನ ನೀಡಲಾಗಿತ್ತು. ಆಹ್ವಾನ ಮನ್ನಿಸಿ ಗುರುವರ್ಯರು ರಾಮ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಅಪಾರ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳಿಂದ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಶ್ರೀ ದೇವದಾಸ ಪ್ರಭು ಎರಡೂ ಕುಟುಂಬದ ಪರವಾಗಿ ಹಾಗೂ ಶ್ರೀ ಗೋಪಾಲಕೃಷ್ಣ ನಾಯಕರು ಊರಿನ ಹತ್ತು ಸಮಸ್ತರ ಪರವಾಗಿ ಹೂಹಾರ ಅರ್ಪಿಸಿ ಸ್ವಾಗತಿಸಿದರು.
ಸಭಾಂಗಣದ ವೇದಿಕೆಯಲ್ಲಿ ಸೀತಾರಾಮ ಕಲ್ಯಾಣೋತ್ಸವದ ದೇವರಿಗೆ ಗುರುವರ್ಯರು ಆರತಿ ಎತ್ತಿ ಪೂಜಿಸಿದರು. ದೇವದಾಸ ಪ್ರಭು ದಂಪತಿಗಳಿಂದ ಗುರುವರ್ಯರಿಗೆ ಪಾದಪೂಜೆ ಅರ್ಪಿಸಲಾಯಿತು.
ಗುರುವರ್ಯರು ತಮ್ಮ ಆಶೀರ್ವಚನದಲ್ಲಿ ದೇವದಾಸ ಪ್ರಭುಗಳ ಪುತ್ರ ಶ್ರೀ ರಾಘವೇಂದ್ರ ಪ್ರಭು ಹಾಗೂ ಪದ್ಮನಾಭ ಶೆಣೈಯವರ ಪುತ್ರಿ ರಂಜನಾ ಪ್ರಭು ಇವರು ಸಂಕಲ್ಪಿತ “ಸೀತಾರಾಮ ಕಲ್ಯಾಣೋತ್ಸವ” ಎರಡು ಕುಟುಂಬ ಅಥವಾ ಅಂಪಾರು ಊರಿಗೆ ಮಾತ್ರ ಸೀಮಿತವಾಗಿಲ್ಲಾ, ಇದು ಲೋಕ ಕಲ್ಯಾಣಕ್ಕಾಗಿ ಮಾಡಿರುತ್ತಾರೆ ಎಂದು ಆಶೀರ್ವದಿಸಿದರು.
ಸಭಾ ಕಾರ್ಯಕ್ರಮದ ವೇದ ಘೋಷವನ್ನು ವೇದಮೂರ್ತಿ ಶ್ರೀ ಪ್ರಸನ್ನ ಭಟ್ ತಂಡದವರು ಗೖದರು. ವೇದಮೂರ್ತಿ ಗಂಗೊಳ್ಳಿ ಶೀ ವೇದವ್ಯಾಸ ಆಚಾರ್ಯರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕ ದಿನೇಶ ಪ್ರಭು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಿದ್ಧಾಪುರ ಪಾಂಡರಂಗ ಪೖ ವಂದಿಸಿದರು. ಸೇರಿದ್ದ ಭಕ್ತವೃಂದಕ್ಕೆ ಪರಮಪೂಜ್ಯ ಗುರುಗಳು ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಉತ್ತರ ಕನ್ನಡ ಜಿಲ್ಲೆಯ ಮಂಕಿ ಮೊಕ್ಕಾಂ ನಿಂದ ಆಗಮಿಸಿದ ಗುರುವರ್ಯರು ಉಪ್ಪುಂದ ಮೊಕ್ಕಾಂ ಗೆ ತೆರಳಿದರು.
ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಟ್ಕಳ ಉದಯ ಪ್ರಭು ಬಳಗದವರಿಂದ “ಭಜನ್ ಸಂಧ್ಯಾ” ಕಾರ್ಯಕ್ರಮ ನಡೆಯಿತು. ರಾತ್ರಿ ಅಷ್ಠಾವಧಾನ ನಂತರ ಮಹಾಪೂಜೆಯ ಬಳಿಕ ಊರ ಪರಊರ ಸಾವಿರಾರು ಭಕ್ತಾಭಿಮಾನಿಗಳು ಭೋಜನ ಪ್ರಸಾದ ಸ್ವೀಕರಿಸಿದರು.











