ಉಡುಪಿ :ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕರ ಹೊಣೆ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

0
220

Click Here

Click Here

ಕುಂದಾಪುರ ಮಿರರ್ ಸುದ್ದಿ…


ಉಡುಪಿ :ಮನುಷ್ಯ ಸೇರಿದಂತೆ ಜಗತ್ತಿನಲ್ಲಿರುವ ಪ್ರತಿಯೊಂದು ಜೀವಸಂಕುಲವೂ ಪರಿಸರವನ್ನು ಅವಲಂಭಿಸಿದೆ. ಮಾನವನ ದುರಾಸೆಯಿಂದ ಗಾಳಿ, ನೀರು ಸೇರಿದಂತೆ ಸೇವಿಸುವ ಆಹಾರವು ಕಲುಷಿತವಾಗುತ್ತಿದೆ. ಪರಿಸರದ ರಕ್ಷಣೆಗೆ ಉತ್ತೇಜಿಸುವುದರೊಂದಿಗೆ ಉತ್ತಮ ಪರಿಸರದ ಮಹತ್ವವನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರ ಹೊಣೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು.

ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಕೈಗಾರಿಕೆಗಳು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮನುಷ್ಯನ ದುರಾಸೆಯಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಗಟ್ಟಲು ಹಾಗೂ ಪರಿಸರ ಸಂರಕ್ಷಣೆ ಮಾಡುವ ಉದ್ದೇಶದಿಂದ 1972 ರಿಂದ ಪರಿಸರ ದಿನವನ್ನು ಆಚರಣೆ ಮಾಡಲಾಗುತ್ತಾ ಬರುತ್ತಿದೆ ಎಂದ ಅವರು, ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಎಂಬ ಭೂತ ಪರಿಸರದ ಸ್ವಾಸ್ಥ್ಯ ವನ್ನು ಹದಗೆಡಿಸುತ್ತಿದೆ. ಪ್ಲಾಸ್ಟಿಕ್‌ಗಳು ನೀರಿನ ಮೂಲಗಳಲ್ಲಿ ಸೇರಿ ಅಲ್ಲಿನ ಜಲಚರಗಳು, ಸಸ್ಯ ಪ್ರಬೇಧ ಹಾಗೂ ಜೀವ ಸಂಕುಲಕ್ಕೆ ಹಾನಿ ಉಂಟುಮಾಡುವುದರೊಂದಿಗೆ ಪರಿಸರದ ಅಸಮತೋಲನಕ್ಕೆ ಕಾರಣವಾಗುತ್ತಿವೆ. ಆದ್ದರಿಂದ ಏಕಬಳಕೆ ಪ್ಲಾಸ್ಟಿಕ್ ಅನ್ನು ಬಳಸದೇ ಮರುಬಳಕೆ ಮಾಡುವಂತಹ ಪ್ಲಾಸ್ಟಿಕ್‌ಅನ್ನು ಬಳಕೆ ಮಾಡಬೇಕು ಎಂದರು.

ವಿದ್ಯಾರ್ಥಿಗಳು ಪರಿಸರದ ರಾಯಭಾರಿಗಳು. ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಪ್ರತಿಯೊಂದು ಹಂತದಲ್ಲಿಯೂ ಯೋಚಿಸಬೇಕು. ಮನುಷ್ಯ ಅಭಿವೃದ್ಧಿಯ ಹೆಸರಿನಲ್ಲಿ ಕಾಡನ್ನು ಹಾಳು ಮಾಡದೇ, ಕಾಡು ಪ್ರಾಣಿಗಳು ಅರಣ್ಯ ಪ್ರದೇಶಗಳಲ್ಲಿ ವಾಸಿಸಲು ಅನುವು ಮಾಡಿಕೊಡಬೇಕು ಎಂದ ಅವರು, ಮಣ್ಣಿನ ಆರೋಗ್ಯವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಕೃಷಿ ಸೇರಿದಂತೆ ಮತ್ತಿತರ ಚಟುವಟಿಕೆಗಳಿಗೆ ಸಾವಯವ ಗೊಬ್ಬರ ಬಳಸಬೇಕು. ರೈತರು ಮಣ್ಣಿನ ಫಲವತ್ತತೆಯ ಪರೀಕ್ಷೆಯನ್ನು ಮಾಡಿಸುವುದರೊಂದಿಗೆ ಸೂಕ್ತ ಬೆಳೆಯನ್ನು ಬೆಳೆಯಲು ಮುಂದಾಗಬೇಕು ಎಂದರು.
ಪರಿಸರವನ್ನು ಮನುಷ್ಯ ಪ್ರೀತಿಸಬೇಕು. ಜೀವವೈವಿಧ್ಯ ಉಳಿವಿಗೆ ಪ್ರತಿಯೊಬ್ಬ ನಾಗರಿಕರು ಕೈಜೋಡಿಸಬೇಕು, ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಜಾಗೃತಿ ವಹಿಸಿ, ಗಿಡಗಳ ಪೋಷಣೆ ಮಾಡಿದ್ದಲ್ಲಿ ಪರಿಸರ ದಿನ ಕಾರ್ಯಕ್ರಮ ಸಾರ್ಥಕವಾಗುತ್ತದೆ. ಎಂದರು.

Click Here

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಭೂಮಿಯ ಮೇಲೆ ಪ್ರತಿ ಜೀವಿಗಳಿಗೂ ಬದುಕುವ ಹಕ್ಕಿದೆ. ಪರಿಸರದಲ್ಲಾಗುವ ಹವಾಮಾನ ಬದಲಾವಣೆ, ಬರಗಾಲ, ಅತಿವೃಷ್ಠಿ, ಅನಾವೃಷ್ಠಿ, ಸೇರಿದಂತೆ ಮತ್ತಿತರ ಹಾನಿಗಳಿಗೆ ಮನುಷ್ಯ ಒಂದಲ್ಲಾ ಒಂದು ರೀತಿಯಲ್ಲಿ ಕಾರಣೀಕರ್ತನಾಗಿದ್ದಾನೆ. ಪರಿಸರ ಸಮತೋಲನದಲ್ಲಿದ್ದಾಗ ಪ್ರಾಕೃತಿಕ ವಿಕೋಪಗಳು ಕಡಿಮೆಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಮನುಷ್ಯ ಪರಿಸರ ಸ್ನೇಹಿ ಹವ್ಯಾಸ ರೂಢಿಸಿಕೊಳ್ಳಬೇಕು. ಸುತ್ತಮುತ್ತಲಿನ ಪರಿಸರವನ್ನು ರಕ್ಷಣೆ ಮಾಡಿದರೆ, ನಮ್ಮ ವೈಯಕ್ತಿಕ ಆರೋಗ್ಯವೂ ಸಹ ಸುಸ್ಥಿತಿಯಲ್ಲಿರುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಜೈಹಿಂದ್ ಇಂಡಸ್ಟ್ರಿಸ್ ಉಡುಪಿ ವತಿಯಿಂದ ನೀಡಲಾದ ಪರಿಸರ ಸ್ನೇಹಿ ಸೆಣಬಿನ ಚೀಲಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಚಿತ್ರಕಲಾ ಸ್ಪರ್ಧೆಯ ವಿಜೇತರುಗಳಿಗೆ ಬಹುಮಾನ ವಿತರಿಸಲಾಯಿತು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸಿ ಎಂಬ ಘೋಷಣೆಯೊಂದಿಗೆ ಕಿರು ನಾಟಕ ಪ್ರದರ್ಶನ ನಡೆಯಿತು.
ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗಿಡ ನೆಡಲಾಯಿತು.

ಮಣಿಪಾಲ ಎಂ.ಐ.ಟಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಮದ್ದೋಡಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಮಾಹಿತಿ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೇಶ್ ಪಿ.ಆರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಅಶೋಕ್ ಕಾಮತ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ ಶೆಟ್ಟಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಳಿ ಮಂಡಳಿಯ ಪ್ರಾದೇಶಿಕ ಅಧಿಕಾರಿ ಕೆ ಕೀರ್ತಿ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರೆ, ಶಿವಪ್ರಸಾದ್ ಅಡಿಗ ಶಿವಪುರ ನಿರೂಪಿಸಿ, ಕಚೇರಿ ರಾಜೇಶ್ವರಿ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಎಂ.ಜೆ.ಸಿ ಕಾಲೇಜು ಮೈದಾನದಿಂದ ಜಿಲ್ಲಾಧಿಕಾರಿ ಕಛೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದ ವರೆಗೆ ನಡೆದ ಪರಿಸರ ಜಾಥಾ ಗೆ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೇಶ್ ಪಿ.ಆರ್ ಚಾಲನೆ ನೀಡಿದರು.

Click Here

LEAVE A REPLY

Please enter your comment!
Please enter your name here