ಕುಂದಾಪುರ :ಮುಂಗಾರು ಅವಘಡ ಸಂಭವಿಸದಂತೆ ಎಚ್ಚರ ವಹಿಸಿ ಅಧಿಕಾರಿಗಳಿಗೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಸೂಚನೆ

0
223

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಮುಂಗಾರು ಮಳೆಯ ಸಂದರ್ಭ ಸಂಭವಿಸಬಹುದಾದ ಹಾನಿಯನ್ನು ತಡೆಯಲು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು, ಇಲಾಖೆಗಳು, ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆಯಾಗದಂತೆ ಪೂರ್ವದಲ್ಲಿ ಕ್ರಮಗಳನ್ನು ವಹಿಸಬೇಕು, ಚರಂಡಿಗಳ ದುರಸ್ತಿ, ಅಪಾಯಕಾರಿ ಮರಗಳ ತೆರವು, ಕೃಷಿಗೆ ಪೂರಕವಾಗಿ ಸ್ಪಂದನೆ ನೀಡುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ನೆರೆ, ಪ್ರಾಕೃತಿಕ ವಿಕೋಪ, ಕೃಷಿ, ಮನೆ ಹಾನಿಸಂಭವಿಸಿದರೆ ಪರಿಹಾರಕ್ಕೆ ಸಾರ್ವಜನಿರನ್ನು ಹೆಚ್ಚು ಅಲೆದಾಡಿಸದೆ ವರದಿ ಕೊಡಬೇಕು ಎಂದು ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಂಗಾರು ಮಳೆಯ ಮುಂಜಾಗೃತ ಕ್ರಮದ ಬಗ್ಗೆ ಚರ್ಚಿಸಲು ಆಯೋಜಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Click Here

Click Here

ಕುಂದಾಪುರ ತಹಶೀಲ್ದಾರ್ ಮಾತನಾಡಿ, ಮುಂಜಾಗೃತ ಕ್ರಮವಾಗಿ ಕಂಟ್ರೋಲ್ ರೂಂ ತೆರೆಯಲಾಗಿದ್ದು ವಿಪತ್ತು ನಿರ್ವಹಣೆಗೆ ಟಾಸ್ಕ್‍ಪೋರ್ಸ್ ಸಮಿತಿ, ಗ್ರಾಮ ಮಟ್ಟದ ಅಧಿಕಾರಿಗ ತಂಡ, ಪುರಸಭೆ ಮಟ್ಟದಲ್ಲಿ ಅಧಿಕಾರಿಗಳು, ಅಧ್ಯಕ್ಷರು ತಂಡವಾಗಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ 22 ಮನೆಗೆ ಬಾಗಶಃ ಹಾನಿಯಾಗಿದೆ. ಶೇ.15 ಹಾನಿಯಾದರೆ 6ಸಾವಿರ, 20ರಿಂದ 50ಶೇ ಹಾನಿಯಾದರೆ 30ಸಾವಿರ, 50ಶೇ ಕ್ಕಿಂತ ಮೇಲ್ಪಟ್ಟು ಹಾನಿಯಾದರೆ 60ಸಾವಿರ, ಪೂರ್ಣಹಾನಿ ಸಂಭವಿಸಿದರೆ 1.20 ಲಕ್ಷ ಪರಿಹಾರ ಸಿಗುತ್ತದೆ ಎಂದರು.
ಬ್ರಹ್ಮಾವರ ತಹಶೀಲ್ದಾರ್ ಮಾತನಾಡಿ, 23 ಮನೆಗಳಿಗೆ ಹಾನಿಯಾಗಿದ್ದು ಈಗಾಗಲೇ 19 ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ ಎಂದರು.

ಕೃಷಿ ಇಲಾಖೆಯ ಅಧಿಕಾರಿಗಳು ಮಾತನಾಡಿ ಈಗಾಗಲೇ 150 ಕ್ವಿಂಟಲ್ ಎಂಒ 4 ಭತ್ತದ ಬೀಜವನ್ನು ವಿತರಣೆ ಮಾಡಲಾಗಿದೆ. 210 ಕ್ವಿಂಟಾಲ್ ದಾಸ್ತಾನು ಇದೆ ಎಂದರು. ತೆಕ್ಕಟ್ಟೆಯಲ್ಲಿ ನೆಲಗಡಲೆ ಬೀಜದ ಸಮಸ್ಯೆಯಾದ ಬಗ್ಗೆ ಕೂಡಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಡೆಸಿ ಎಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಳೆಹಾನಿಗೆ ಸಿಗುವ ಪರಿಹಾರ ಮೊತ್ತ ತುಂಬಾ ಕಡಿಮೆ. ಚಿಕ್ಕಾಸು ಪರಿಹಾರಕ್ಕೆ ಯಾರೂ ಮುಂದೆ ಬರುತ್ತಿಲ್ಲ ಎಂದು ಪಂಚಾಯತ್ ಪ್ರತಿನಿಧಿಗಳು ಅಹವಾಲು ತೊಡಿಕೊಂಡರು. ಒಂದು ಹೆಕ್ಟರ್‍ಗೆ 28ಸಾವಿರ ಪರಿಹಾರ ಸಿಗುತ್ತದೆ. 1 ಅಡಿಕೆ ಮರಕ್ಕೆ ನಾಶವಾದರೆ 280 ರೂಪಾಯಿ ಸಿಗುತ್ತದೆ. ತೀರಾ ಕಡಿಮೆ ಮೊತ್ತದ ಪರಿಹಾರವನ್ನು ಪಡೆಯಲು ಅದಕ್ಕೆ ದಾಖಲೆ, ಪೊಟೋ ಇತ್ಯಾದಿ ಸಂಗ್ರಹಕ್ಕೆ ಹೆಚ್ಚು ಹಣ ಖರ್ಚಾಗುತ್ತದೆ ಎಂದು ದೂರಿಕೊಂಡರು.
ಕುಂದಾಪುರ ಪುರಸಭಾ ಅಧ್ಯಕ್ಷರಾದ ಮೋಹನದಾಸ ಶೆಣೈ ಮಾತನಾಡಿ, ಕೋಡಿ ಭಾಗದಲ್ಲಿ ಕೃತಕ ನೆರೆ ಉಂಟಾಗುತ್ತದೆ. ಕೆಂಪು ಮಣ್ಣು ತುಂಬಿಸಿ ನೀರು ಹೋಗಲು ಅವಕಾಶ ನೀಡದೆ ಇರುವುದರಿಂದ ಸಮಸ್ಯೆಯಾಗುತ್ತಿದೆ. ಹೊಸ ಮನೆ ನಿರ್ಮಾಣ ಸಮಯದಲ್ಲಿ ನೀರು ಹರಿದು ಹೋಗಲು ವ್ಯವಸ್ಥೆಗಳನ್ನು ಕಲ್ಪಿಸದೆ ಇರುವುದರಿಂದ ಸಮಸ್ಯೆಯಾಗುತ್ತಿದೆ ಎಂದರು.
ಅರಣ್ಯ ಇಲಾಖೆ ಅಧಿಕಾರಿಗಳು ಮಾತನಾಡಿ, ಅಪಾಯಕಾರಿ ಮರಗಳ ತೆರವಿಗೆ ಪುರಸಭಾ ಮಟ್ಟದಲ್ಲಿ ಉತ್ತಮ ಸಹಕಾರ ಸಿಗುತ್ತದೆ. ಆದರೆ ಗ್ರಾಮ ಮಟ್ಟದಲ್ಲಿ ಸರಿಯಾದ ಸಹಕಾರ ಸಿಗುತ್ತಿಲ್ಲ ಎಂದರು. ಅದಕ್ಕೆ ಉತ್ತರಿಸಿ ಶಾಸಕರು, ನೀವು ಗ್ರಾಮ ಪಂಚಾಯತ್‍ಲ್ಲಿ ಕೇಳಿ, ಗ್ರಾಮ ಪಂಚಾಯತ್ ಗಳು ಖಂಡಿತಾ ಸಹಕಾರ ಕೊಡುತ್ತಾರೆ ಎಂದರು. ರಸ್ತೆಯ ಪಕ್ಕದಲ್ಲಿರುವ ಅಪಾಯಕಾರಿ ಆಕೇಶಿಯಾ ಮರಗಳನ್ನು ಅದಕ್ಕೆ ಕಡಿಯುವ ವಯಸ್ಸಾದರೂ ಕಡಿಯುವುದಿಲ್ಲ ಇದರಿಂದ ಆ ಮರಗಳು ರಸ್ತೆಗೆ ಉರುಳಿ ಬೀಳುತ್ತಿವೆ, ವಿದ್ಯುತ್ ತಂತಿಗಳ ಕೆಳಭಾಗದಲ್ಲಿ ಹೊಸದಾಗಿ ಸಸಿಗಳನ್ನು ನಡುತ್ತಾರೆ. ಚರಂಡಿಯ ಒಳಗೂ ಸಸಿ ನೆಡಲು ಹೊಂಡ ಮಾಡಿದ್ದಾರೆ. ನಡೂರು, ಕಾಡೂರು ಭಾಗದಲ್ಲಿ ಮರಗಳು ರಸ್ತೆಗೆ ಭಾಗಿಕೊಂಡಿವೆ ಇತ್ಯಾದಿ ದೂರುಗಳು ಕೇಳಿ ಬಂದವು.

ಲೋಕೋಪಯೋಗಿ ಇಲಾಖೆ ಅಧಿಕಾರಿ ಹಾಗೂ ಶಾಸಕರ ನಡುವೆ ಕೆಲವೊತ್ತು ಗಂಭೀರ ಚರ್ಚೆ ನಡೆದು ಅಧಿಕಾರಿಯನ್ನು ಶಾಸಕರು ತೀವ್ರ ತರಾಟೆಗೆ ತಗೆದುಕೊಂಡರು. ಗುತ್ತಿಗೆ ಆಧಾರದಲ್ಲಿ ರಸ್ತೆ ನಿರ್ವಹಣೆಗೆ ಕಾರ್ಮಿಕರನ್ನು ನಿಯೋಜನೆ ಮಾಡಿಕೊಳ್ಳುವ ವಿಚಾರವಾಗಿ ಚರ್ಚೆ ನಡೆಯಿತು. 16 ಮಂದಿ ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ತಗೆದುಕೊಳ್ಳಲಾಗಿದ್ದು 16 ಜನರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆಯೇ, ನೀವು ಅವರೆಲ್ಲರನ್ನು ನೋಡಿದ್ದಿರಾ? 30 ಕಿ.ಮೀ ಗೆ ಒಬ್ಬರು ಕಾರ್ಮಿಕರು ಕೆಲಸ ಮಾಡಬೇಕು, ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರಾ ಎನ್ನುವ ಶಾಸಕರ ಪ್ರಶ್ನೆಗೆ ಇಂಜಿನಿಯರ್ ನೀಡಿದ ಉತ್ತರ ಶಾಸಕರಿಗೆ ತೃಪ್ತಿಕರವಾಗಲಿಲ್ಲ. ಗ್ಯಾಂಗ್ ಮನ್ ವಿಚಾರವಾಗಿ ಸರಿಯಾದ ಮಾಹಿತಿ ಪಡೆದುಕೊಳ್ಳಿ ಎಂದು ಅಧಿಕಾರಿಗೆ ಶಾಸಕರು ಸೂಚಿಸಿದರು.

ಸಭೆಯಲ್ಲಿ ತಾಲೂಕು ಕಾರ್ಯನಿರ್ವಹಣಾಧಿಕಾರಿ ಡಾ.ರವಿ ಹುಕ್ಕೆರಿ, ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುಮಾರ್, ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ ಹೆಗಡೆ ಮೊದಲಾದವರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here