ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಮಾವಿನಕಟ್ಟೆ ಸಮೀಪದ ಗುಲ್ವಾಡಿಯಲ್ಲಿರುವ ಹೆಲ್ತ್ ಕೇರ್ ಮೆಡಿಕಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ದಲಿತ ಯುವತಿಯ ಮೇಲೆ ಕ್ಷುಲ್ಲಕ ಕಾರಣಕ್ಕೆ ಅಮಾನವೀಯವಾಗಿ ಹಲ್ಲೆ ಮಾಡಿದ್ದ ಘಟನೆಗೆ ಸಂಬಂಧಿಸಿ ಉಡುಪಿ ಎಸ್ಪಿ ಹರಿರಾಂ ಶಂಕರ್ ಸೋಮವಾರ ರಾತ್ರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸೋಮವಾರ ಬೆಳಿಗ್ಗೆ ಸುಮಾರು 11.30 ಗಂಟೆಗೆ ಗ್ರಾಹಕಿಯಾಗಿ ಬಂದಿದ್ದ ಯಾಸ್ಮಿನ್ ಎಂಬ ಮುಸ್ಲಿಂ ಮಹಿಳೆ ಸೆರಿಲ್ಯಾಕ್ ಬೇಬಿ ಪೌಡರ್ ಖರೀದಿಸಿದ್ದಾಳೆ. ಅದರ ಬಾಬ್ತು 330 ರೂಪಾಯಿ ಪಾವತಿಸಲು 500 ರ ನೋಟು ನೀಡಿದ್ದಾಳೆ ಈ ಸಂದರ್ಭ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮೀ ಎಂಬ ದಲಿತ ಯುವತಿ ಚಿಲ್ಲರೆ ಇಲ್ಲ ಚಿಲ್ಲರೆ ಕೊಡಿ ಎಂದಿದ್ದಾಳೆ. ಅದಾಗಲೇ ರೊಚ್ಚಿಗೆದ್ದ ಯಾಸ್ಮಿನ್ ಲಕ್ಷ್ಮೀಗೆ ಅವಾಚ್ಯವಾಗಿ ಬಯ್ಯಲಾರಂಭಿಸಿದ್ದಾಳೆ. ತಕ್ಷಣ ಪಕ್ಕದಂಗಡಿಯಿಂದ ಚಿಲ್ಲರೆ ತರಲು ಲಕ್ಷ್ಮೀ ಹೊರ ಹೋಗಿದ್ದಾಳೆ. ಆಗ ಯಾಸ್ಮಿನ್ ಲಕ್ಷ್ಮೀ ಬಳಿ ಬಂದು ಹಲ್ಲೆ ನಡೆಸಿದ್ದಾಳೆ. ಗಾಯಗೊಂಡ ಲಕ್ಷ್ಮೀ ಕುಂದಾಪುರ ಸರ್ಕಾರೀ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಮಾಹಿತಿ ಪಡೆದ ಉಡುಪಿ ಎಸ್ಪಿ ಸೋಮವಾರ ರಾತ್ರಿ ಕುಂದಾಪುರ ಸರ್ಕಾರೀ ಆಸ್ಪತ್ರೆಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡು ಬಳಿಕ ಮಾವಿನಕಟ್ಟೆಯ ಮೆಡಿಕಲ್ ಸೆಂಟರ್ ಗೂ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಎಸ್ಪಿ ಹರಿರಾಂ ಶಂಕರ್ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು, ಮಂಗಳವಾರ ಆರೋಪಿ ಯಾಸ್ಮಿನ್ ಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.











