ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಲಯನ್ಸ್ ಕ್ಲಬ್ ಹಂಗಳೂರು ಇವರ ವತಿಯಿಂದ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಂಡ ಕುಂದಾಪುರ ರೈಲು ನಿಲ್ದಾಣದ ಫ್ಲಾಟ್ ಫಾರ್ಮ್, ನೂತನ ಮೇಲ್ಛಾವಣಿ ಹಾಗೂ ಗಾರ್ಡ್‍ನಿನ ಸುಂದರೀಕರಣದ ಉದ್ಘಾಟನೆಯನ್ನು ಕೇಂದ್ರದ ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಜೂ.13ರಂದು ಸಂಜೆ 3 ಗಂಟೆಗೆ ಉದ್ಘಾಟಿಸಲಿದ್ದಾರೆ ಎಂದು ಕೊಂಕಣ ರೈಲ್ವೆ ಸಲಹಾ ಸಮಿತಿ ಸದಸ್ಯ ಗಣೇಶ್ ಪುತ್ರನ್ ತಿಳಿಸಿದ್ದಾರೆ.
ಕುಂದಾಪುರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ಖಾಸಗಿ ಸಂಸ್ಥೆಯೊಂದು ಇಷ್ಟು ದೊಡ್ಡದ ಕೊಡುಗೆಯನ್ನು ನೀಡುತ್ತಿರುವುದು ರಾಜ್ಯದಲ್ಲೇ ಮೊದಲು. ಮಳೆಗಾಲ ಮತ್ತು ಬೇಸಿಗೆಯಲ್ಲಿ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಗಳನ್ನು ಮನಗಂಡು ಲಯನ್ಸ್ ಕ್ಲಬ್ ಹಂಗಳೂರು ಕೊಂಕಣ ರೈಲ್ವೆಯೊಂದಿಗೆ ಸಮನ್ವತೆ ಸಾಧಿಸಿಕೊಂಡು ರೈಲ್ವೆ ಇಲಾಖೆಯ ಮಾರ್ಗಸೂಚಿಯಂತೆ ಫ್ಲಾಟ್ ಫಾರ್ಮ್ ನವೀಕರಣ ಹಾಗೂ ನೂತನ ಮೇಲ್ಛಾವಣಿಯನ್ನು ಮಾಡಲಾಗಿದೆ. ವರ್ಗ-1 ರೈಲ್ವೆ ನಿಲ್ದಾಣಗಳಲ್ಲಿರುವ ಸೌಲಭ್ಯಗಳನ್ನು ವರ್ಗ-3ರಲ್ಲಿರುವ ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ನೀಡುತ್ತಿರುವುದು ಹೆಮ್ಮೆಯ ವಿಚಾರ ಎಂದು ಅವರು ಹೇಳಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕೊಂಕಣ ರೈಲ್ವೆ ನಿರ್ದೇಶಕ ಸುನೀಲ್ ಗುಪ್ತ, ಲಯನ್ಸ್ ಜಿಲ್ಲಾ ರಾಜ್ಯಪಾಲ ಮಹಮ್ಮದ್ ಹನೀಫ್, ಹಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ರೋವನ್ ಡಿ’ಕೋಸ್ತಾ ಸೇರಿದಂತೆ ಲಯನ್ಸ್ ಪದಾಧಿಕಾರಿಗಳು, ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಕೇಂದ್ರದ ರೈಲ್ವೆ ಸಚಿವರಾದವರು ಈವರೆಗೆ ಯಾರೂ ಕೂಡ ಕುಂದಾಪುರಕ್ಕೆ ಬಂದಿರಲಿಲ್ಲ. ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರು ಪ್ರಥಮ ಬಾರಿಗೆ ಕುಂದಾಪುರ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡುತ್ತಿರುವುದರಿಂದ ಈ ಭಾಗದ ಪ್ರಯಾಣಿಕರ ಬೇಡಿಕೆಯನ್ನು ಸಚಿವರಿಗೆ ಸಲ್ಲಿಸಲಾಗುವುದು. 1990ರಲ್ಲಿ ಪ್ರಾರಂಭವಾದ ಕೊಂಕಣ ರೈಲ್ವೆಯು 15 ವರ್ಷಗಳ ಬಳಿಕ ಕೇಂದ್ರ ರೈಲ್ವೆಯಲ್ಲಿ ವಿಲೀನವಾಗಬೇಕಿತ್ತು. ಆದರೆ ಕೆಲವೊಂದು ಕಾರಣಗಳಿಂದ ವಿಲೀನ ವಿಳಂಬವಾಗುತ್ತಿದೆ. ಆದಷ್ಟು ಶೀಘ್ರ ವಿಲೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದ ಅವರು, ಕಾರವಾರ-ಯಶವಂತಪುರ ಹಗಲು ರೈಲು ರದ್ದಾಗಿರುವುದರಿಂದ ರಾತ್ರಿ ವೇಳೆ ಬೆಂಗಳೂರಿಗೆ ಇನ್ನೊಂದು ರೈಲಿನ ಸೇವೆಯನ್ನು ಒದಗಿಸಬೇಕು ಮತ್ತು ಅಮೃತ್ ಭಾರತ್ ರೈಲು ನಿಲ್ದಾಣ ಯೋಜನೆಗೆ ಕುಂದಾಪುರ ರೈಲ್ವೆ ನಿಲ್ದಾಣವನ್ನು ಸೇರಿಸಬೇಕು ಎಂದು ಹೇಳಿದರು.
ಕರಾವಳಿ ಕರ್ನಾಟಕದ ಯಾವುದೇ ನಿಲ್ದಾಣದಲ್ಲೂ ರೈಲಿಗೆ ನೀರು ತುಂಬುವ ವ್ಯವಸ್ಥೆ ಇಲ್ಲ. ಹೀಗಾಗಿ ಕುಂದಾಪುರ ಅಥವಾ ಉಡುಪಿ ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ನೀರು ತುಂಬುವ ವ್ಯವಸ್ಥೆ ನಿರ್ಮಾಣ ಮಾಡಬೇಕಿದೆ. ಕೊಂಕಣ ರೈಲ್ವೆ ನಿಲ್ದಾಣದಲ್ಲೂ ರೈಲುಗಳ ಪಾರ್ಕಿಂಗ್ ಮಾಡಲು ಸ್ಟೇಬಲ್ ಲೈನ್ ಅಥವಾ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ಕುಂದಾಪುರ ಭಾಗದಲ್ಲಿ ರೈಲು ನಿಲ್ಲಿಸುವ ಪಾಕಿರ್ಂಗ್ ವ್ಯವಸ್ಥೆ ರಚನೆ ಮಾಡಬೇಕು. ಕೋಚುವೇಲಿ-ಅಮೃತ್‍ಸರ್, ಪೆÇೀರ್ ಬಂದರ್, ಡೆಹ್ರಾಡೂನ್ ರೈಲುಗಳನ್ನು ಕುಂದಾಪುರದಲ್ಲಿ ನಿಲುಗಡೆ ನೀಡಬೇಕು, ಕುಂದಾಪುರ ರೈಲು ನಿಲ್ದಾಣದ ಎಡ ಭಾಗದ ಮೇಲ್ಛಾವಣಿ ಮತ್ತು ರೂಫಿಂಗ್ ಕಾಮಗಾರಿಯನ್ನು ಕೊಂಕಣ ರೈಲ್ವೆ ಅನುದಾನದಿಂದ ನಡೆಸಬೇಕು. ಕುಂದಾಪುರ ನಿಲ್ದಾಣದ ಪಾದಚಾರಿ ಮೇಲ್ ಸೇತುವೆಗೆ ಮೇಲ್ಛಾವಣಿ ನಿರ್ಮಾಣ ಮಾಡಬೇಕು. ಕುಂದಾಪುರ ನಿಲ್ದಾಣದ ಎರಡನೇ ಪ್ಲಾಟ್ ಫಾರ್ಮ್‍ಗೆ ಮೇಲ್ಛಾವಣಿ ನಿರ್ಮಾಣ ಮತ್ತು ನಿಲ್ದಾಣದಿಂದ ಮುಖ್ಯರಸ್ತೆಯವರೆಗೆ ಬೆಳಕಿನ ಸೌಲಭ್ಯ ಒದಗಿಸಬೇಕೆಂಬ ಮನವಿಯನ್ನು ಸಚಿವರಿಗೆ ಸಲ್ಲಿಸಲಾಗುವುದು ಎಂದರು.
ಹಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ರೋವನ್ ಡಿ’ಕೋಸ್ತಾ, ಜೋನ್ ಚೇರ್‍ಮೆನ್ ಬಾಲಕೃಷ್ಣ ಶೆಟ್ಟಿ, ಕುಂದಾಪುರ ರೈಲ್ವೆ ಪ್ರಯಾಣಿಕರ ಹಿತರಕ್ಷಣ ಸಮಿತಿಯ ವಿವೇಕ ನಾಯಕ್ ಉಪಸ್ಥಿತರಿದ್ದರು.











