ಕೊಲ್ಲೂರು ದೇಗುಲದ ಮಾವಿನಕಟ್ಟೆ ಪ್ರೌಢಶಾಲೆಯಲ್ಲಿ ಪ್ರತಿಭಟನೆ – ಶಿಕ್ಷಕರ ಸಾಮೂಹಿಕ ವರ್ಗಾವಣೆ ಖಂಡಿಸಿ ಮಕ್ಕಳು, ಪೋಷಕರಿಂದ ಪ್ರತಿಭಟನೆ – ಮತ್ತೆ ಹಿಂದೆ ಇದ್ದ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯ

0
104

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾವಿನಕಟ್ಟೆ ಪ್ರೌಢಶಾಲೆಯಲ್ಲಿ ಶಿಕ್ಷಕರ ಸಾಮೂಹಿಕ ವರ್ಗಾವಣೆ ಖಂಡಿಸಿ, ಬುಧವಾರ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟಿಸಿದರು. ಮಕ್ಕಳ ಪೋಷಕರು ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

Click Here

ಮಾವಿನಕಟ್ಟೆ ಪ್ರೌಢಶಾಲೆಯಲ್ಲಿ ಈ ಹಿಂದೆ ಕಾರ್‍ಯನಿರ್ವಹಿಸುತ್ತಿದ್ದ ಎಲ್ಲ ೯ ಮಂದಿ ಶಿಕ್ಷಕರನ್ನು ಕೊಲ್ಲೂರು ದೇಗುಲದ ಅಧಿನದ ವಿವಿಧ ಶಾಲೆಗಳಿಗೆ ವರ್ಗಾವಣೆ ಮಾಡಿ, ಇಲ್ಲಿಗೆ ಬೇರೆ ಶಾಲೆಗಳಿಂದ ಶಿಕ್ಷಕರನ್ನು ನಿಯೋಜಿಸಿದ್ದಾರೆ. ಇದರಿಂದ ಇಲ್ಲಿ ಕಲಿಯುವ ಎಸೆಸೆಲ್ಸಿ ಸಹಿತ ಎಲ್ಲ ಮಕ್ಕಳಿಗೆ ಕಲಿಕೆಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಬೆಳಗ್ಗೆ ತರಗತಿಗಳಿಗೆ ತೆರಳದೇ, ಬಹಿಷ್ಕರಿಸಿದರು.

ಸತತ ೧೦ ವರ್ಷ ಶೇ.೧೦೦ ಫಲಿತಾಂಶ ಬಂದಿದೆ. ಚೆನ್ನಾಗಿದೆ ಅನ್ನುವ ಕಾರಣಕ್ಕೆ ನಮ್ಮ ಮಕ್ಕಳನ್ನು ಇಲ್ಲಿಗೆ ಸೇರಿಸಿದ್ದೇವೆ. ಮುಖ್ಯ ಶಿಕ್ಷಕರ ಸಹಿತ ೯ ಮಂದಿ ಶಿಕ್ಷಕರನ್ನು ಏಕಾಏಕಿ ಬೇರೆ ಕಡೆಗೆ ವರ್ಗಾವಣೆ ಮಾಡಿದ್ದಾರೆ. ಇಲ್ಲಿದ್ದ ೧೦-೧೫ ವರ್ಷ ಅನುಭವಿ ಶಿಕ್ಷಕರನ್ನು ಬೇರೆಡೆಗೆ ವರ್ಗಾಯಿಸಿದ್ದು ಸರಿಯಲ್ಲ. ಅರ್ಧದಷ್ಟು ವರ್ಗಾವಣೆ ಮಾಡಲಿ. ಆದರೆ ಎಲ್ಲ ಬದಲಾವಣೆ ಮಾಡಿದಾಗ ಮಕ್ಕಳ ಬಗ್ಗೆ, ಅವರ ಕಲಿಕಾ ಸಾಮರ್ಥ್ಯದ ಕುರಿತು ಹೊಸಬರಿಗೆ ಗೊತ್ತಿರಲ್ಲ. ಕನಿಷ್ಠ ಹಿಂದೆ ಇದ್ದ ಮೂವರು ಶಿಕ್ಷಕರನ್ನಾದರೂ ಕೊಡಿ ಅನ್ನುವುದು ನಮ್ಮ ಬೇಡಿಕೆ. ಈ ಸಮಸ್ಯೆ ಬಗೆಹರಿಸಲು ಮೂರು ದಿನದ ಗಡುವು ನೀಡಿದ್ದೇವೆ. ಇಲ್ಲದಿದ್ದರೆ ಮತ್ತೆ ಇದೇ ರೀತಿ ಹೋರಾಟ ಮಾಡಲಾಗುವುದು ಎಂದು ಪೋಷಕರಾದ ಚಂದ್ರ ಬೋವಿ, ಸುಂದರ್ ಬಾಯರ್ ಎಚ್ಚರಿಸಿದ್ದಾರೆ.

ಕೊಲ್ಲೂರು ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆಯವರಿಗೆ ಕರೆ ಮಾಡಿ, ಸಮಸ್ಯೆ ಬಗ್ಗೆ ತಿಳಿಸಿದ್ದು, ಅವರು ಕೂಡಲೇ ಇದನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಊರ ಹಿರಿಯ ಮುಂದಾಳು ಜಿ.ಎಂ. ಚೆರಿಯಬ್ಬ ಸಾಹೇಬ್ ತಿಳಿಸಿದರು. ಬಳಿಕ ಮಕ್ಕಳು ತರಗತಿಗೆ ತೆರಳಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಬಂದೂರು ಬಿಇಒ ನಾಗೇಶ್ ನಾಯ್ಕ್ ಅವರು ಶಾಲೆಗೆ ಭೇಟಿ ನೀಡಿ, ಮಕ್ಕಳು, ಪೋಷಕರಿಂದ ಮನವಿ ಸ್ವೀಕರಿಸಿದರು. ನಿಮ್ಮ ಮನವಿಯನ್ನು ಸಂಬಂಧಪಟ್ಟವರಿಗೆ ಸಲ್ಲಿಸಿ, ಬಗೆಹರಿಸಲು ಪ್ರಯತ್ನಿಸುತ್ತೇವೆ. ಕಲಿಕೆಗೆ ತೊಂದರೆಯಾಗದಂತೆ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

Click Here

LEAVE A REPLY

Please enter your comment!
Please enter your name here