ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಕೊಲ್ಲೂರು, ವಂಡ್ಸೆ, ಶಂಕರನಾರಾಯಣ ಮಾರ್ಗದಲ್ಲಿ ಬಸ್ಸು ಸೌಕರ್ಯ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಶಂಕರನಾರಾಯಣ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮಂಗಳವಾರ ಕೋಟೇಶ್ವರದಲ್ಲಿ ಕರ್ನಾಟಕ ಸರ್ಕಾರದ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಶಂಕರನಾರಾಣ ಕಾಲೇಜಿಗೆ ಕೊಲ್ಲೂರು, ಇಡೂರು, ಚಿತ್ತೂರು, ವಂಡ್ಸೆ, ನೇರಳಕಟ್ಟೆ, ಅಂಪಾರು, ಬೈಂದೂರು ಮೊದಲಾದ ಕಡೆಗಳಿಂದ ಆಗಮಿಸುವ 150ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಸೂಕ್ತ ಸಾರಿಗೆ ಸಂಪರ್ಕದ ವ್ಯವಸ್ಥೆ ಇಲ್ಲ. ತಾಲೂಕಿನಲ್ಲಿ ಉತ್ತಮ ಶಿಕ್ಷಣ ಕೇಂದ್ರವಾದ ಶಂಕರನಾರಾಯಣ ಕಾಲೇಜಿಗೆ ವಿದ್ಯಾರ್ಥಿಗಳು ಕಷ್ಟಪಟ್ಟು ನಡೆದುಕೊಂಡು ಬರುತ್ತಿದ್ದಾರೆ. ಬೆಳಿಗ್ಗೆ ಒಂದು ಖಾಸಗಿ ಬಸ್ ಮಾತ್ರ ಸಂಚರಿಸುತ್ತಿದ್ದರೆ, ಸಂಜೆ ಕಾಲೇಜು ಬಿಟ್ಟ ನಂತರ 6 ಗಂಟೆವರೆಗೂ ಮನೆಗೆ ತೆರಳಲು ಯಾವುದೇ ಬಸ್ ಸೌಕರ್ಯ ಇಲ್ಲ ಎಂದು ಸಚಿವರ ಮುಂದೆ ಸಮಸ್ಯೆಗಳನ್ನು ಬಿಚ್ಚಿಟ್ಟ ವಿದ್ಯಾರ್ಥಿಗಳು ಶಂಕರನಾರಾಯಣ ಮಾರ್ಗದಲ್ಲಿ ಬೆಳಿಗ್ಗೆ ಮತ್ತು ಸಂಜೆ ಸಮಯ ಬಸ್ ಸೌಕರ್ಯ ಒದಗಿಸುವಂತೆ ಮನವಿ ಮಾಡಿದರು.
ವಿದ್ಯಾರ್ಥಿಗಳ ಸ್ಪಂದಿಸಿದ ಸಚಿವ ರಾಮಲಿಂಗಾ ರೆಡ್ಡಿ ಅವರು ಕೆಎಸ್‍ಆರ್‍ಟಿಸಿ ಮಂಗಳೂರು ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ ಶೆಟ್ಟಿ ಅವರನ್ನು ಕರೆದು, ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸಿ ಬಸ್ ಸೌಕರ್ಯ ಕಲ್ಪಿಸಲು ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.











