ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಪಕ್ಷ ಅಧಿಕಾರಕ್ಕೆ ಬಂದಿದೆ. ಜನರು ಆಶೀರ್ವಾದ ಮಾಡಿದ್ದಾರೆ. ಗೆದ್ದವರು ಅದನ್ನು ತಿಳಿದುಕೊಳ್ಳಬೇಕು. ಎಲ್ಲರಿಗೂ ಮಂತ್ರಿ ಸ್ಥಾನ ಸಿಕ್ಕಿರಲ್ಲ, ಎಲ್ಲರೂ ಚೇರ್‍ಮೆನ್ ಆಗಿರಲ್ಲ. ಸ್ವಲ್ಪ ಸಮಾಧಾನವಾಗಿರಬೇಕು. ಸಮಾಧಾನವಾಗಿ ಇರದಿದ್ದರೆ ಅಪಾಯ. 135 ಜನ ಶಾಸಕರ ಪೈಕಿ ಇಬ್ಬರು ಮೂರು ಜನ ಶಾಸಕರು ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ಬಹಿರಂಗವಾಗಿ ಹೇಳಿಕೆ ನೀಡುವುದು ಸರಿಯಿಲ್ಲ ಎಂದು ಕರ್ನಾಟಕ ಸರ್ಕಾರದ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಕೋಟೇಶ್ವರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾಲ್ಕುವರೆ ಲಕ್ಷ ಕೋಟಿ ರೂ. ಜಿಎಸ್‍ಟಿ ಸಂಗ್ರವಾಗುತ್ತಿದ್ದು, ಅದರಲ್ಲಿ 50 ಸಾವಿರ ಕೋಟಿ ರೂ. ಮಾತ್ರ ರಾಜ್ಯಕ್ಕೆ ನೀಡಲಾಗುತ್ತಿದೆ. ಸಂಗ್ರಹವಾದ ದುಡ್ಡಿನಲ್ಲಿ ಅರ್ಧದಷ್ಟು ನೀಡಿದರೆ ಯಾವ ಸಮಸ್ಯೆಯೂ ಇರುತ್ತಿರಲಿಲ್ಲ ಮತ್ತು ರಾಜ್ಯವೂ ಅಭಿವೃದ್ಧಿ ಆಗುತ್ತಿತ್ತು ಎಂದು ಕೇಂದ್ರ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಕೇಂದ್ರ ಸರಕಾರಕ್ಕೆ ಕಣ್ಣು, ಕಿವಿ ಇದ್ದರೆ ಮಾತ್ರ ನಾವು ಹೇಳಿದದ್ದು ಕೇಳಿಸುತ್ತಿತ್ತು, ನಾವು ಜಿಎಸ್‍ಟಿ ಗೋಸ್ಕರ ದೆಹಲಿಯಲ್ಲಿ ಧರಣಿ ಕುಳಿತುಕೊಂಡಿದ್ದು ತೋರುತ್ತಿತ್ತು ಎಂದು ವ್ಯಂಗ್ಯವಾಡಿದರು.
ಹಿರಿಯ ಸಚಿವರೇ ಅಸಮಾಧಾನದ ಮಾತುಗಳನ್ನಾಡುತ್ತಿರುವ ಮತ್ತು ಶಾಸಕರಲ್ಲಿ ಅಸಮಾಧಾನದ ಹೊಗೆಯಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗೃಹಸಚಿವ ಪರಮೇಶ್ವರ ಅವರ ತುಮಕೂರು ಜಿಲ್ಲೆಯಲ್ಲಿ ಬೇಕಾದಷ್ಟು ಶಂಕುಸ್ಥಾಪನೆ, ಉದ್ಘಾಟನೆ ಆಗಿದೆ. ಪರಮೇಶ್ವರ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದು ಅವರು ಹೇಳಿದರು. ಎಲ್ಲಾ ಶಾಸಕರಿಗೆ ಒಂದೇ ರಿತಿ ಅನುದಾನ ಸಿಗುತ್ತದೆ. ಮುಖ್ಯಮಂತ್ರಿಯವರು ತಾರತಮ್ಯ ಮಾಡುದಿಲ್ಲ. ವಿರೋಧ ಪಕ್ಷದವರಿಗೂ ಕೊಡುತ್ತೇವೆ. ಬಜೆಟ್‍ನಲ್ಲೂ ಅದನ್ನೇ ಹೇಳಿದ್ದೇವೆ. ಅನುದಾನ ಸಮಾನಾಗಿ ಕೊಟ್ಟರೆ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.
ಪುತ್ತೂರು, ಮಂಗಳೂರು, ಚಾಮರಾಜನಗರ ಹಾಗೂ ರಾಮನಗರ ವಿಭಾಗದಲ್ಲಿ ಚಾಲಕರ ಕೊರತೆ ಇತ್ತು. ಈಗ ರಾಜ್ಯದಲ್ಲಿ ಎರಡು ಸಾವಿರ ಚಾಲಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಮಂಗಳೂರು ವಿಭಾಗಕ್ಕೆ ಸುಮಾರು 340 ಚಾಲಕರನ್ನು ನೀಡಲಾಗಿದೆ. ಉಡುಪಿಗೆ 200ಕ್ಕೂ ಮಿಕ್ಕಿ ಚಾಲಕರನ್ನು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಆಗುದಿಲ್ಲ ಎಂದು ಅವರು ಹೇಳಿದರು. ನರ್ಮ್ ಬಸ್ ಬೇಡಿಕೆ ಬಗ್ಗೆ ಮಾತನಾಡಿದ ಅವರು ಯುಪಿಎ ಸರಕಾರದ ಅವಧಿಯಲ್ಲಿ ನಗರ ಪ್ರದೇಶಗಳಿಗೆ ನರ್ಮ್ ಯೋಜನೆಯಡಿ ಬಸ್ ನೀಡುತ್ತಿದ್ದರು. ಸರಕಾರ ಬದಲಾದ ಮೇಲೆ ಯೋಜನೆ ಬದಲಾಗಿದೆ. ಈ ಬಾರಿ 700-800 ಬಸ್ಸುಗಳನ್ನು ಕೆಎಸ್‍ಆರ್‍ಟಿಸಿಗೆ ನೀಡಲಾಗುತ್ತಿದೆ ಎಂದರು.
ಕೊಲ್ಲೂರು ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಬರುತ್ತಿದ್ದು ದೇವಸ್ಥಾನದಲ್ಲಿ ಮೂಲಭೂತ ಸೌಕರ್ಯ ಇರಲೇಬೇಕು. ಈ ಬಗ್ಗೆ ಚರ್ಚೆ ಮಾಡಿ ಏನೇನು ನ್ಯೂನತೆ ಇದೆ ಅದನ್ನು ಸರಿಪಡಿಸುವ ಕೆಲಸ ಮಾಡಲಾಗುವುದು. ಹೆಚ್ಚು ಭಕ್ತರು ಬರುವ ದೇವಸ್ಥಾನಗಳಿಗೆ ಪ್ರಾಧಿಕಾರ ರಚನೆ ಮಾಡಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಮೂಕಾಂಬಿಕೆ ಅತಿ ಹೆಚ್ಚು ಭಕ್ತರು ಜನರು ಬರುವ ಪ್ರದೇಶ. ಹಾಗಾಗಿ ಈ ಪ್ರದೇಶಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಒಂದು ದೇವಸ್ಥಾನದ ಹಣವನ್ನು ಇನ್ನೊಂದು ದೇವಸ್ಥಾನಕ್ಕೆ ನೀಡುವ ಅಧಿಕಾರ ಯಾರಿಗೂ ಇಲ್ಲ ಎಂದು ಹೇಳಿದ ಅವರು, ಮುಖ್ಯಮಂತ್ರಿ ಬದಲಾವಣೆಯ ಎರಡುವರೆ ವರ್ಷದ ಗಡುವು ಬಗ್ಗೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.











