ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕೋಟ ಸಹಕಾರಿ ವ್ಯವಸಾಯಿಕ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರಿ ಮಿತ್ರರು ತಂಡದಿಂದ ಚುನಾವಣೆಗೆ ಸ್ಪರ್ಧಿಸಿದ ಪ್ರೇಮಾ ಗಣೇಶ್ ಅವರು ಕೇವಲ ಒಂದು ಮತದಿಂದ ಸೋಲನ್ನಪ್ಪಿದ್ದರು. ಚುನಾವಣೆಯಲ್ಲಿ ಕನಿಷ್ಠ ಮತಗಳ ಅಂತರದಿಂದ ಸೋತಾಗ ಮರು ಎಣಿಕೆ ಕೋರುವುದು ಕಾನೂನಾತ್ಮಕ ಹಕ್ಕಾಗಿದ್ದು ನ್ಯಾಯಾಲಯ ಕೂಡ ಈ ಹಕ್ಕನ್ನು ಎತ್ತಿ ಹಿಡಿದಿದೆ ಎಂದು ಸಹಕಾರಿ ಮಿತ್ರರು ತಂಡದ ಮುಖಂಡ, ಕೋಟ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್‌ಅವರು ಜೂ.೨೮ರಂದು ಕೋಟದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಉಮಾ ಗಾಣಿಗ ಹಾಗೂ ಪ್ರೇಮಾ ಗಣೇಶ್ ನಡುವಿನ ಸ್ಪರ್ಧೆಯಲ್ಲಿ 620ಮತಗಳು ಅಸಿಂಧುವಾಗಿದ್ದವು. ಹೀಗಾಗಿ ಸಹಜವಾಗಿ ಅಸಿಂಧು ಮತಗಳನ್ನು ಕುಲಂಕುಶವಾಗಿ ಪರಿಶೀಲಿಸಿದರೆ ಕೆಲವು ನಮ್ಮ ಪರವಾಗಿ ಇರಬಹುದು ಎನ್ನುವ ಆಸೆ ಎರಡೂ ಕಡೆಯವರಿಗೆ ಇರುತ್ತದೆ. ಅದರಂತೆ ಮರು ಎಣಿಕೆಗೆ ಅವಕಾಶ ಕೋರಲಾಗಿದೆ ಎಂದರು.
ಜೂ.೨೯ರಂದು ನಡೆಯುವ ಮರು ಎಣಿಕೆಯಲ್ಲಿ ಯಾವುದೇ ರೀತಿಯ ಫಲಿತಾಂಶ ಬಂದರೂ ಅದನ್ನು ಸ್ವೀಕರಿಸಲು ಸಿದ್ಧವಾಗಿದ್ದೇನೆ ಎಂದು ಪರಾಜಿತ ಅಭ್ಯರ್ಥಿ ಪ್ರೇಮಾ ಗಣೇಶ್ ತಿಳಿಸಿದರು ಎ.ಆರ್. ಕಚೇರಿ ಎದುರು ಪ್ರತಿಭಟನೆ ಮಾಡುವ ಮೂಲಕ ಬಿಜೆಪಿಯವರು ಸಹಕಾರಿ ವ್ಯವಸ್ಥೆಯನ್ನು ಸಂಪೂರ್ಣ ರಾಜಕೀಯಗೊಳಿಸಿ ಸಣ್ಣತನ ಮೆರೆದಿದ್ದಾರೆ. ಉಚ್ಛ ನ್ಯಾಯಾಲಯ ಮರುಎಣಿಕೆ ಆದೇಶವನ್ನು ಪುರಸ್ಕರಿಸಿದ ಮೇಲೂ ಪ್ರತಿಭಟನೆ ಮಾಡಿರುವುದು ಕಾನೂನಿಗೆ ತೋರಿದ ಅಗೌರವವಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಬ್ಲಾಕ್ ಅಧ್ಯಕ್ಷ ಶಂಕರ್ ಕುಂದರ್ ತಿಳಿಸಿದರು.
ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ನಾಗರಾಜ ಹಂದೆ, ಮಾಜಿ ಅಧ್ಯಕ್ಷ ತಿಮ್ಮ ಪೂಜಾರಿ ಹಾಗೂ ನಿರ್ದೇಶಕರು, ಸಹಕಾರಿ ಮಿತ್ರರು ತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿದ್ದರು.











