ಕುಂದಾಪುರ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ

0
735

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಪಂಚಗ್ಯಾರಂಟಿ ಯೋಜನೆ ಕುಂದಾಪುರ ತಾಲೂಕಿನಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ತಾಲೂಕು ಮಟ್ಟದಲ್ಲಿ ಶಿಬಿರ ನಡೆಸಲು ಸರಕಾರದಿಂದ ಸೂಚನೆ ನೀಡಲಾಗಿದೆ. ಪಂಚಗ್ಯಾರಂಟಿ ಯೋಜನೆಯ ಫಲಾನುಭವಿಗಳ ಶಿಬಿರ, ಸಂವಾದ ಸಾಧಕ ಬಾಧಕಗಳ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷರಾದ ಹೆಚ್.ಹರಿಪ್ರಸಾದ್ ಶೆಟ್ಟಿ ತಿಳಿಸಿದರು.

ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರಕಾರದ ಪಂಚಗ್ಯಾರಂಟಿ ಯೋಜನೆಯಲ್ಲಿ ಕುಂದಾಪುರ ತಾಲೂಕಿಗೆ ಮೇ ತಿಂಗಳಲ್ಲಿ ಗೃಹಲಕ್ಷ್ಮೀ-ರೂ.20,17,94,000, ಗೃಹಜ್ಯೋತಿ-4,22,05,681, ಅನ್ನಭಾಗ್ಯ-2,39,40,000, ಶಕ್ತಿಯೋಜನೆ 2,72,13,212 ಒಟ್ಟು ರೂ.29,51,52,893 ಲಭಿಸಿದೆ. ಈ ತನಕ ಒಟ್ಟು ರೂ. 373,51,12,371 ಕುಂದಾಪುರ ತಾಲೂಕಿಗೆ ಬಂದಿದೆ ಎಂದರು.

ಅಮಾಸೆಬೈಲು ಜಡ್ಡಿನಗದ್ದೆ ಕೆಳಾಸುಂಕ ಮಾರ್ಗದಲ್ಲಿ ಸಂಚರಿಸುವ ಬಸ್‍ಗಳು ನಿಗದಿತ ಸಮಯಕ್ಕೆ ಸರಿಯಾಗಿ ಸಂಚಾರ ಮಾಡಬೇಕು. ಎರಡು ಬಸ್‍ಗಳು ಸಂಚಾರ ಮಾಡಲೆಬೇಕು. ಸಮಯದ ಬದಲಾವಣೆ ಮಾಡುತ್ತಾ ಇದ್ದರೆ ನಿತ್ಯ ಪ್ರಯಾಣಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ ಎಂದು ಸಮಿತಿ ಸದಸ್ಯ ವಸುಂಧರ ಹೆಗ್ಡೆ ಹೇಳಿದರು.

Click Here

ಇತ್ತೀಚೆಗೆ ಸಾರಿಗೆ ಸಚಿವರು ಕೋಟೇಶ್ವರಕ್ಕೆ ಬಂದಾಗ ಶಂಕರನಾರಾಯಣ ಕಾಲೇಜು ವಿದ್ಯಾರ್ಥಿಗಳು ಕೊಲ್ಲೂರು – ವಂಡ್ಸೆ – ಅಂಪಾರು- ಶಂಕರನಾರಾಯಣ ಮಾರ್ಗದಲ್ಲಿ ಬಸ್ ಸೌಲಭ್ಯದ ಬಗ್ಗೆ ಮನವಿ ಮಾಡಿದ್ದರು. ಆಗ ಸಚಿವರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗೆ ಈ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಿದ್ದರು. ಅದು ಏನಾಯಿತು? ಎಂದು ಸಮಿತಿ ಅಧ್ಯಕ್ಷರಾದ ಹೆಚ್.ಹರಿಪ್ರಸಾದ್ ಶೆಟ್ಟಿ ಪ್ರಶ್ನಿಸಿದರು.
ಈ ಬಗ್ಗೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಸಮೀಕ್ಷೆ, ಸಮಯ ನಿಗಧಿಯಾದ ತಕ್ಷಣ ಪರವಾನಿಗೆ ಲಭಿಸುತ್ತದೆ. ಕೊಲ್ಲೂರಿಗೆ ಬಸ್ ಬೇಡಿಕೆಯೂ ಇದೆ ಎಂದರು. ಈಗಾಗಲೆ ಚಾಲಕರ ನೇಮಕಾತಿಯಲ್ಲಿ ಕುಂದಾಪುರಕ್ಕೆ 60 ಜನರನ್ನು ನೀಡಿದ್ದಾರೆ. ತರಬೇತಿ ಬಳಿಕ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುತ್ತಾರೆ ಎಂದರು.
ಕುಂದಾಪುರದ ಶಾಸ್ತ್ರೀ ಸರ್ಕಲ್ ಹತ್ತಿರ ಸರ್ವೀಸ್ ರಸ್ತೆಯಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲುಗಡೆಗೆ ಅವಕಾಶ ಬೇಕು ಸದಸ್ಯೆ ಆಶಾ ಕರ್ವೇಲ್ಲೋ ತಿಳಿಸಿದರು. ಉತ್ತರಿಸಿದ ಕುಂದಾಪುರ ಘಟಕದ ಅಧಿಕಾರಿ ಈಗಾಗಲೇ ಆರ್.ಎನ್.ಶೆಟ್ಟಿ ಹಾಲ್ ಹತ್ತಿರ ನಿಲುಗಡೆ ಮಾಡಲಾಗುತ್ತದೆ ಎಂದರು.
ಇದಕ್ಕೆ ಪ್ರತಿಸ್ಪಂದಿಸಿ ಮಾತನಾಡಿದ ಸಮಿತಿ ಅಧ್ಯಕ್ಷರಾದ ಹೆಚ್.ಹರಿಪ್ರಸಾದ್ ಶೆಟ್ಟಿ ಇಲ್ಲಿ ತಾತ್ಕಾಲಿಕ ನಿಲಗಡೆ ಮಾಡಲು ಸಭೆ ನಿರ್ಣಯ ಮಾಡಿ, ಸಂಚಾರ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ಮಾಡೋಣ. ಸಂಚಾರ ಸಮಸ್ಯೆಯಾಗುತ್ತದೆ. ಏನಾದರೂ ಪರಿಹಾರ ಕಂಡುಕೊಳ್ಳೋಣ ಎಂದರು.

ಮೆಸ್ಕಾಂಗೆ ಸಂಬಂಧಿಸಿ ಸಾಕಷ್ಟು ಚರ್ಚೆ ನಡೆಯಿತು. ಮೆಸ್ಕಾಂ ಕಂಬಗಳಿಗೆ ಡಿಶ್ ಕೇಬಲ್ ಅಳವಡಿಸಿದ್ದಲ್ಲಿ ಅದಕ್ಕೆ ಇಲಾಖಾ ನಿಯಮಾನುಸಾರ ಸೂಕ್ತ ಶುಲ್ಕವನ್ನು ಪಡೆಯಲಾಗುತ್ತದೆ. 2025-26ನೇ ಸಾಲಿನಲ್ಲಿ ಒಟ್ಟು 3421 ಕಂಬಳಗಳ ಮೂಲಕ ಡಿಶ್ ಕೇಬಲ್ ಅಳವಡಿಸಿದ್ದು ಕಂಬಗಳ ಬಾಬ್ತು ರೂ.4,03,648 ಬೇಡಿಕೆ ಮಾಡಲಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದರು.
ಕೇಬಲ್ ಅಳವಡಿಕೆ ನಿಯಮಗಳನ್ನು ಪಾಲನೆ ಮಾಡುವುದು ಕಡಿಮೆಯಾಗಿದೆ. ಇತ್ತೀಚೆಗೆ ಜನ್ನಾಡಿಯಲ್ಲಿ ಒಂದು ಪ್ರಕರಣ ವರದಿಯಾಗಿದೆ. ಕೇಬಲ್ ವಯರ್‍ಗಳು ಜೋತಾಡುತ್ತಿರುವುದು ಅಪಾಯವನ್ನುಂಟು ಮಾಡುತ್ತವೆ. ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸದಸ್ಯರು ಹೇಳಿದರು.

ಗಂಗೊಳ್ಳಿ ಅತೀ ಹೆಚ್ಚು ಜನವಸತಿ ಇರುವ ಪ್ರದೇಶ. ಲೈನ್ ಮ್ಯಾನ್‍ಗಳ ಸೇವೆ ಸರಿಯಾಗಿ ಸಿಗುತ್ತಿಲ್ಲ. ರಾತ್ರಿ ವೇಳೆ ಕರೆ ಮಾಡಿದರೆ ಸ್ಪಂದಿಸುತ್ತಿಲ್ಲ. ಮಳೆಗಾಲದಲ್ಲಿ ತುಂಬಾ ಅಗತ್ಯವಿದೆ. ತುರ್ತಾಗಿ ಗಂಗೊಳ್ಳಿಗೆ ಲೈನ್ ಮ್ಯಾನ್ ವ್ಯವಸ್ಥೆ ಮಾಡಿ ಎಂದು ಸದಸ್ಯ ಜಹೀರ್ ಆಹಮ್ಮದ್ ಗಂಗೊಳ್ಳಿ ಹೇಳಿದರು.
ಇದಕ್ಕೆ ಉತ್ತರಿಸಿದ ಅಧಿಕಾರಿಗಳು ವಿಶೇಷ ಮಾನ್ಸೂನ್ ಪಡೆಗಳನ್ವಯ ಗಂಗೊಳ್ಳಿ ಭಾಗಕ್ಕೆ 2 ಗ್ಯಾಂಗ್ ಮನ್‍ಗಳನ್ನು ನೀಡಲಾಗಿದೆ. ಹಾಗೂ ಕಂಪೆನಿಯ ವತಿಯಿಂದಲೂ ಕೂಡ, ಈಗಾಗಲೇ ಹೊಸದಾಗಿ ಖಾಯಂ ಮಾರ್ಗದಾಳುಗಳನ್ನು ನೇಮಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದರು.
ಗೃಹಲಕ್ಷ್ಮೀ ಯೋಜನೆಯಲ್ಲಿ ಒಟ್ಟು 529 ಕೊರಗ ಕುಟುಂಬಗಳಲ್ಲಿ 70 ಕೊರಗ ಕುಟುಂಬಗಳನ್ನು ಈ ಯೋಜನೆಗೆ ನೋಂದಾಯಿಸಲು ಬಾಕಿ ಇದ್ದು 4 ಕುಟುಂಬಗಳನ್ನು ನೋಂದಾಯಿಸಿಕೊಳ್ಳಲಾಗಿದೆ. ಒಂದು ಕುಟುಂಬ ಯಜಮಾನಿಯ ಬೆರಳಚ್ಚು ದಾಖಲಾಗದೆ ಆಧಾರ್‍ಗೆ ಮೊಬೈಲ್ ಸಂಖ್ಯೆ ನಮೊದಿಸಲು ಆಗುತ್ತಿಲ್ಲ ಎಂದು ಶಿಶು ಅಭಿವೃದ್ದಿ ಯೋಜನೆಯ ಅಧಿಕಾರಿ ತಿಳಿಸಿದರು. ಈ ಬಗ್ಗೆ ಆ ಫಲಾನುಭವಿಯನ್ನು ಯೋಜನೆಗೆ ನೊಂದಾಯಿಸಲು ಕ್ರಮ ವಹಿಸುವುದಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಸದಸ್ಯರಾದ ವಸುಂಧರ ಹೆಗ್ಡೆ, ಚಂದ್ರ ಕಾಂಚನ್, ಅಭಿಜಿತ್ ಪೂಜಾರಿ, ವಾಣಿ ಆರ್.ಶೆಟ್ಟಿ, ಆಶಾ ಕರ್ವಾಲ್ಲೋ, ನಾರಾಯಣ ಆಚಾರ್, ಗಣೇಶ್, ಕೆ.ಪ್ರದೀಪ್ ಕುಮಾರ್ ಶೆಟ್ಟಿ, ಅರುಣ, ಹರ್ಷ ಶೆಟ್ಟಿ ಸವಿತಾ ಪೂಜಾರಿ, ಮಂಜು ಕೊಠಾರಿ, ಜಹೀರ್ ಅಹಮದ್ ಉಪಸ್ಥಿತರಿದ್ದರು.

ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪ್ರಕಾಶ್ ಹುಕ್ಕೇರಿ ಸ್ವಾಗತಿಸಿ, ವಂದಿಸಿದರು.

Click Here

LEAVE A REPLY

Please enter your comment!
Please enter your name here