ಕುಂದಾಪುರ ಮಿರರ್ ಸುದ್ದಿ…
ಕೋಟ: ಡಾ. ಡಿ.ಜಿ. ಶೆಟ್ಟಿ ಎಜುಕೇಶನಲ್ ಸೊಸೈಟಿ ಇದರ ಬಿ.ಡಿ. ಶೆಟ್ಟಿ ಕಾಲೇಜ್ ಆಫ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಮಾಬುಕಳ ಐರೋಡಿ, ರೋಟರಿ ಕ್ಲಬ್ ಬ್ರಹ್ಮಾವರ, ಲಯನ್ಸ್ ಕ್ಲಬ್ ಬ್ರಹ್ಮಾವರ -ಬಾರಕೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಡಿ. 16. ಗುರುವಾರ ಮಾದಕ ವ್ಯಸನ -ಕೆಡುಕುಗಳ ಕುರಿತು ಅರಿವು ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ಜರುಗಿತು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಮಾತಾ ಆಸ್ಪತ್ರೆ, ಕುಂದಾಪುರದ ಹೆಸರಾಂತ ಮನೋವೈದ್ಯ ಡಾ. ಪ್ರಕಾಶ್ ತೋಳಾರ್ ಮಾಹಿತಿ ನೀಡಿ ಆಲಸ್ಯ, ಸ್ನೇಹಿತರ ಪುಂಡಾಟ, ಆಧುನಿಕ ಜೀವನ ಶೈಲಿಗೆ ಮಾರು ಹೋಗುವುದು, ಮೋಜಿಗಾಗಿ, ಸಮಾರಂಭಗಳಲ್ಲಿ ವ್ಯವಸ್ಥೆಗೊಳಿಸಿರುವ ಮದ್ಯವನ್ನು ಕುತೂಹಲಕ್ಕಾಗಿ ಸೇವಿಸುವುದು, ಸಿನಿಮಾದ ಪ್ರಭಾವ ಹೀಗೆ ಬೇರೆ ಬೇರೆ ಮನೋಧರ್ಮದಿಂದ ಇಂದು ಯುವ ಜನತೆ ಹೆಚ್ಚು ಹೆಚ್ಚಾಗಿ ಮಾದಕ ದ್ರವ್ಯದ ವ್ಯಸನಕ್ಕೆ ದಾಸರಾಗುತ್ತಿದ್ದಾರೆ. ವಿದ್ಯಾರ್ಥಿಗಳು ಈ ಕುರಿತು ಎಚ್ಚೆತ್ತುಕೊಂಡು, ಇತರರಿಗೂ ಜಾಗ್ರತಿ ಮೂಡಿಸಿದಾಗ ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣ ಅಲ್ಲದೇ ಭವಿಷ್ಯದ ಭಾರತದ ನಿರ್ಮಾತೃರಾಗಲು ಸಾಧ್ಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಎನ್. ಎಸ್. ಎಸ್. ಘಟಕವು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕರಾದ ಎ ರತ್ನಾಕರ ಶೆಟ್ಟಿ ವಹಿಸಿದ್ದರು. ರೋಟರಿ ಕ್ಲಬ್ ಬ್ರಹ್ಮಾವರದ ಅಧ್ಯಕ್ಷ ಹರೀಶ್ ಕುಂದರ್, ಬ್ರಹ್ಮಾವರ ರೋಟರಿ ಕ್ಲಬ್ ಅಸ್ಸಿಸ್ಟೆಂಟ್ ಗವರ್ನರ್ ಸಿ.ಎ.ಪದ್ಮನಾಭ ಕಾಂಚನ್, ಚೇತನಾ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗಣೇಶ್ ಜಿ, ಲಯನ್ಸ್ ಕ್ಲಬ್ ಬ್ರಹ್ಮಾವರ -ಬಾರಕೂರು ಇದರ ಅಧ್ಯಕ್ಷ ಶುಭಕರ ಶೆಟ್ಟಿ, ರೋಟರಿ ಕ್ಲಬ್ ಬ್ರಹ್ಮಾವರದ ಪದಾಧಿಕಾರಿಗಳು ಹಾಗೂ ಸದಸ್ಯರು, ಲಯನ್ಸ್ ಕ್ಲಬ್ ಬ್ರಹ್ಮಾವರ – ಬಾರಕೂರು ಇದರ ಪದಾಧಿಕಾರಿಗಳು ಹಾಗೂ ಸದಸ್ಯರು, ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಜಿ. ಬಾಲಕೃಷ್ಣ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಹೆಲಿಕಾಫ್ಟರ್ ದುರಂತದಲ್ಲಿ ಮಡಿದ ಭಾರತೀಯ ಸೇನೆಯ ಮೇಜರ್ ಜನರಲ್ ಬಿಪಿನ್ ರಾವತ್ ಹಾಗೂ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಉಪನ್ಯಾಸಕ ಸುಕುಮಾರ್ ಶೆಟ್ಟಿಗಾರ್, ಅನುರಾಧ, ರಮ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿ ಸುಮಂತ್ ಪ್ರಾರ್ಥಿಸಿ, ಉಪನ್ಯಾಸಕರಾದ ದಿಶಾ ಕಾರ್ಯಕಮವನ್ನು ನಿರೂಪಿಸಿ, ಪ್ರಮಿಳಾ ವಂದಿಸಿದರು.











