ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕಾಂಗ್ರೆಸ್ ಪಕ್ಷ ಸತ್ಯದರ್ಶನದ ಹೆಸರಲ್ಲಿ ವೈಯಕ್ತಿಕ ಟೀಕೆಗಳನ್ನು ಮಾಡುವುದರಲ್ಲಿ ನಿರತವಾಗಿದೆ. ಜನರಿಗೆ ತಪ್ಪು ಸಂದೇಶ ನೀಡುತ್ತಿದೆ, 9/11ಗೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ನೀಡಲು ಕರಾವಳಿಯ ಮೂರು ಜಿಲ್ಲೆಗಳಿಗೆ ಇದ್ದ ವಿನಾಯತಿಯನ್ನು ರದ್ದು ಗೊಳಿಸಿದ್ದು ಸರ್ಕಾರ. ಅಕ್ರಮ ಸಕ್ರಮದಲ್ಲಿ ಮನಸೋ ಇಚ್ಛೆ ಅಧಿಕಾರಿಗಳಿಂದ ತಿರಸ್ಕಾರ, ಬಸವ ವಸತಿ ಯೋಜನೆಯಲ್ಲಿ ಎರಡು ವರ್ಷದಲ್ಲಿ ಒಂದೇ ಒಂದು ಮನೆ ನೀಡಿಲ್ಲ, ಹೊಸ ಪಡಿತರ ಚೀಟಿ ನೀಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ, ಪಿಂಚಣಿ ಯೋಜನೆಗಳಿಗೂ ಸಮಸ್ಯೆ ಮಾಡುತ್ತಿರುವ ಬಗ್ಗೆ ಬೀದಿಗಿಳಿದು ಪ್ರತಿಭಟನೆ ಮಾಡುವುದು ನಮಗೆ ಅನಿವಾರ್ಯವಾಗಿತ್ತು ಎಂದು ಕುಂದಾಪುರ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಅವರು ಕುಂದಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪಕ್ಷದ ಕಾರ್ಯಕ್ರಮವಾದರೆ ಅವರು ಮಾಡಲಿ, ಅದರಲ್ಲಿ ವೈಯಕ್ತಿಕ ಟೀಕೆ ಮಾಡುವುದರಲ್ಲಿ ನಿರತರಾಗಿದ್ದಾರೆ. ಗೇರುಲೀಸ್‍ನಲ್ಲಿ 25 ಎಕರೆ ತನ್ನ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಗೇರುಲೀಸ್ 50-60 ವರ್ಷದಿಂದ ಇದ್ದ ವ್ಯವಸ್ಥೆ. ಇದರಲ್ಲಿ ಕಾನೂನು ಬದ್ದವಾಗಿ 50-60ದಿಂದ ಮಾಡಿಕೊಂಡು ಬಂದವರಿಗೆ ಗ್ರಾಮ ಮಟ್ಟದಲ್ಲಿ ಗೈಡೆನ್ಸ್ ವ್ಯಾಲ್ಯೂ ಕಟ್ಟಿದರೆ ಮಂಜೂರು ಮಾಡುವ ಅವಕಾಶವಿತ್ತು. ಆದರೆ ಕಾನೂನು ಬಗ್ಗವಾಗಿದ್ದರೂ ನಮ್ಮ ತಂದೆಯವರಾಗಲಿ, ಅಥವಾ ಅವರ ಮಕ್ಕಳಾಗಲಿ ಅಕ್ರಮ ಸಕ್ರಮವಾಗಲಿ, ಗೇರುಲೀಸ್ ಆಗಲಿ, ಒಂದು ಸೆಂಟ್ಸ್ ಜಾಗ ಪಡೆಯಲಿಲ್ಲ ಎಂದರು.
ಅಕ್ರಮ ಸಕ್ರಮದಲ್ಲಿ ಕುಂದಾಪುರ ಕ್ಷೇತ್ರದಲ್ಲಿ 10ರಿಂದ 15ಸಾವಿರ ಅರ್ಜಿಗಳು ತಿರಸ್ಕೃತ ವಾಗಿವೆ. ನಾನು ಅಧ್ಯಕ್ಷನಾದ ಬಳಿಕ ಕುಂದಾಪುರ ತಾಲೂಕು ಕಚೇರಿಯಲ್ಲಿ 7 ಸಭೆಗಳು ಆಗಿವೆ. 60 ಅರ್ಜಿಗಳು ಬಂದಿವೆ. ಬ್ರಹ್ಮಾವರ ಹೋಬಳಿಯಲ್ಲಿ 18 ಅರ್ಜಿ ಬಂದಿದೆ. 78 ಅರ್ಜಿ ಇತ್ಯರ್ಥವಾಗಿದೆ. ಅದರಲ್ಲಿ ಒಂದೇ ಒಂದು ಫಲಾನುಭವಿಗೂ ಡಿನೋಟಿಸು ಕೊಡಲು ಆಗಲಿಲ್ಲ. ತಾಂತ್ರಿಕವಾಗಿ ಮೂಲಭೂತ ಸಮಸ್ಯೆಗಳಿಂದ ಅಕ್ರಮ ಸಕ್ರಮದಲ್ಲಿ ಇತ್ಯರ್ಥವಾದರೂ ಕೂಡಾ ಡಿನೋಟಿಸು ಕೊಡಲು ಆಗುತ್ತಿಲ್ಲ ಎಂದರು.
9/11 ಹಿಂದೆ ಪಂಚಾಯತ್ ಮಟ್ಟದಲ್ಲಿ ನಕ್ಷೆಗೆ ಅನುಮೋದನೆ ಸಿಗುತ್ತಿತ್ತು. ಈಗ ಅದನ್ನು ರದ್ದು ಮಾಡಿ ನಗರ ಪ್ರಾಧೀಕಾರಕ್ಕೆ ನೀಡಿರುವುದರಿಂದ ಸಮಸ್ಯೆಯಾಗಿದೆ. ಮೊದಲನೇಯದಾಗಿ ಅಲ್ಲಿ ಅಧಿಕಾರಿಗಳ ಕೊರತೆ ಇದೆ. ಜನರಿಗೆ ಕಚೇರಿಗೆ ಅಲೆದು ಅಲೆದು ಸಾಕಾಗಿ ಹೋಗಿದೆ. ಸರಕಾರದ ಗಮನಕ್ಕೆ ತಂದರೂ ಏನೂ ಪ್ರಯೋಜನ ಆಗಿಲ್ಲ. ಆ ಹಿನ್ನೆಲೆಯಲ್ಲಿ ಬೀದಿಗಿಳಿದು ಹೋರಾಡುವುದು ಅನಿವಾರ್ಯವಾಗಿದೆ. ಮುಂದೆಯೂ ಹೋರಾಟ ನಡೆಸುತ್ತೇವೆ ಎಂದರು. ಬಸವ ವಸತಿ ಯೋಜನೆಯಲ್ಲಿ ಹಿಂದಿನ ಸರಕಾರಗಳ ಅವಧಿಯಲ್ಲಿ ಪ್ರತೀ ಕ್ಷೇತ್ರಕ್ಕೆ ವರ್ಷಕ್ಕೆ ಕನಿಷ್ಠ 50 -100 ಮನೆ ಮಂಜೂರಾತಿಯಾಗುತ್ತಿತ್ತು. ಈಗ ಎರಡು ವರ್ಷದಿಂದ ಒಂದೇ ಒಂದು ಮನೆ ಮಂಜೂರು ಆಗಿಲ್ಲ ಎಂದರು.
ಕ್ಷೇತ್ರಕ್ಕೆ ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನ ಬಿಟ್ಟು ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಈಗ 10 ಕೋಟಿ ಕಾಮಗಾರಿಗೆ ಪ್ರಸ್ತಾವನೆ ಕೇಳಿದ್ದಾರೆ. ಯಾವಾಗ ಅನುಷ್ಟಾನ ಆಗುತ್ತದೆಯೋ ಗೊತ್ತಿಲ್ಲ. ಪಿಡಬ್ಲ್ಯೂಡಿಯಲ್ಲಿ 10 ಕೋಟಿ ಅನುದಾನವಷ್ಟೇ ಲಭಿಸಿದೆ ಎಂದರು.
ಕುಂದಾಪುರ ಮಂಡಲ ಬಿಜೆಪಿ ಅಧ್ಯಕ್ಷ ಸುರೇಶ ಶೆಟ್ಟಿ ಮಾತನಾಡಿ, ನಾವು ಐದು ಅಂಶಗಳ ವಿಚಾರದಲ್ಲಿ ಪ್ರತಿಭಟನೆ ಮಾಡಿದ್ದೇವೆ. ಇದರಲ್ಲಿ ಎಲ್ಲ ಕಡೆ ನಮ್ಮ ಬಿಜೆಪಿ ನಾಯಕರು ಭಾಗವಿಸಲಿಲ್ಲ. ಸ್ಥಳೀಯ ಪಂಚಾಯತ್ ಪ್ರತಿನಿಧಿಗಳು, ಸ್ಥಳೀಯರಷ್ಟೇ ಭಾಗವಹಿಸಿದ್ದರು. ಕಾಂಗ್ರೆಸ್ ನವರ ಸತ್ಯದರ್ಶನ ಪ್ರತಿಭಟನೆ ಮುಂಬರುವ ಚುನಾವಣಾ ಪ್ರಚಾರದ ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ. ಸ್ಪರ್ಧೆಗಿಳಿದಂತೆ ಪ್ರಚಾರ ಮಾಡುತ್ತಿದ್ದಾರೆ. ಇದು ಚುನಾವಣಾ ತಯಾರಿ ಎನ್ನುವಂತೆ ಕಾಣಿಸುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಕಾಡೂರು ಸುರೇಶ ಶೆಟ್ಟಿ, ಸಹಸಂಚಾಲಕ ರಾಜೇಶ ಕಾವೇರಿ, ಯುವ ಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ ಶೆಟ್ಟಿ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಸುಧೀರ್ ಕೆ.ಎಸ್., ಸತೀಶ ಪೂಜಾರಿ ವಕ್ವಾಡಿ ಉಪಸ್ಥಿತರಿದ್ದರು.











