ಜಿಲ್ಲೆಯಲ್ಲಿ ಏಕವಿನ್ಯಾಸ ನಕ್ಷೆ ಹಾಗೂ ನಮೂನೆ 9/11 ರ ಹೊಸ ಅಧಿಸೂಚನೆಯಲ್ಲಿ ಕೆಲವು ವಿನಾಯಿತಿ ಅಗತ್ಯವಿದೆ : ಸಂಸದ ಕೋಟ ಶ್ರೀನಿವಾಸ ಪೂಜಾರಿ

0
347

Click Here

Click Here

ಕುಂದಾಪುರ ಮಿರರ್ ಸುದ್ದಿ…

ಉಡುಪಿ :ಜಿಲ್ಲೆಯಲ್ಲಿ ಸಾರ್ವಜನಿಕರು ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಏಕ ವಿನ್ಯಾಸ ನಕ್ಷೆ ಹಾಗೂ ನಮೂನೆ 9/11 ರನ್ನು ಹೊಸ ಅಧಿಸೂಚನೆಯ ಪ್ರಕಾರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಡೆಯಲು ಸಮಸ್ಯೆ ಉಂಟಾಗುತ್ತಿದೆ. ಕರಾವಳಿ ಜಿಲ್ಲೆಗಳಿಗೆ ಕೆಲವೊಂದು ವಿನಾಯಿತಿ ನೀಡಲು ಸರಕಾರದೊಂದಿಗೆ ಚರ್ಚಿಸಲಾಗುವುದು ಎಂದು ಉಡುಪಿ – ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಏಕ ನಿವೇಶನ ನಕ್ಷೆ ಹಾಗೂ ನಮೂನೆ 9/11 ರಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಏಕ ವಿನ್ಯಾಸ ನಕ್ಷೆ ಹಾಗೂ ನಮೂನೆ 9/11 ಅನ್ನು ಪಡೆಯಲು ಜನಸಾಮಾನ್ಯರು ಸಂಬಂಧಿಸಿದ ಇಲಾಖೆಗಳಿಗೆ ಅರ್ಜಿ ಸಲ್ಲಿಸಿದರೂ ಅವುಗಳನ್ನು ಪಡೆಯಲು ವಿಳಂಬವಾಗುತ್ತಿದೆ. ತಿಂಗಳುಗಟ್ಟಲೇ ಸುತ್ತಾಡಿದರೂ ಅರ್ಜಿಗಳು ವಿಲೇವಾರಿ ಆಗುತ್ತಿಲ್ಲ. ಹೊಸ ಅಧಿಸೂಚನೆಯ ಪ್ರಕಾರ ಎಲ್ಲಾ ಅರ್ಜಿಗಳನ್ನು ಅನುಮೋದನೆ ನೀಡಲೂ ಸಹ ಕಷ್ಟಸಾಧ್ಯವಾಗುತ್ತಿದೆ. ಇದಕ್ಕೆ ಸರಕಾರ ಕೆಲವೊಂದು ವಿನಾಯಿತಿಗಳನ್ನು ಕರಾವಳಿ ಜಿಲ್ಲೆಗಳಿಗೆ ವಿಶೇಷ ಪ್ರಕರಣ ಎಂದು ತಿಳಿದು ನೀಡುವ ಅಗತ್ಯವಿದೆ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಸಭೆ ನಡೆಸಿ, ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

Click Here

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಜಿಲ್ಲೆಯ ಜನ ಸಾಮಾನ್ಯರಿಗೆ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಏಕ ವಿನ್ಯಾಸ ನಕ್ಷೆ ಹಾಗೂ ಮತ್ತಿತರ ದಾಖಲೆಗಳನ್ನು ಪಡೆಯಲು ಆಗುತ್ತಿರುವ ತೊಂದರೆಯ ಬಗ್ಗೆ ಸರಕಾರದ ಗಮನಕ್ಕೆ ತರಲು ಜಿಲ್ಲೆಯ ಬಾಗೀಧಾರರ ಸಭೆಯನ್ನು ಕರೆದು ಅವರ ಅಹವಾಲುಗಳನ್ನು ಕೇಳಿ, ಸಮಸ್ಯೆಗಳ ಪಟ್ಟಿಯನ್ನು ಕ್ರೂಢೀಕರಣವನ್ನು ಮುಂದಿನ ಐದು ದಿನಗಳ ಒಳಗಾಗಿ ಮಾಡಬೇಕೆಂದು ಸೂಚನೆ ನೀಡಿದ ಅವರು, ಜಿಲ್ಲೆಯ ಜನತೆಗೆ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.

ಶಾಸಕ ಸುನೀಲ್ ಕುಮಾರ್ ಮಾತನಾಡಿ, ಪ್ರಾಧಿಕಾರ ಹೊಸ ಅಧಿಸೂಚನೆಯಲ್ಲಿ ಕರಾವಳಿ ಜಿಲ್ಲೆಗಳಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಒಂದು ಪಟ್ಟಿಮಾಡಿ ಕೊಡಿ. ಅದನ್ನು ಮತ್ತೊಮ್ಮೆ ಎಲ್ಲರೂ ಸೇರಿ ಅದನ್ನು ಮತ್ತೊಮ್ಮೆ ಚರ್ಚಿಸಿ ಬೆಂಗಳೂರಿನಲ್ಲಿ ಕಾರ್ಯದರ್ಶಿಗಳ ಮಟ್ಟದಲ್ಲಿ ಸಭೆ ಮಾಡಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡೋಣಾ ಎಂದರು. ಜನಪ್ರತಿನಿಧಿಗಳು ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಲು ಸಭೆಗಳನ್ನು ಕರೆದಾಗ ಸಭೆಯ ನಡುವಳಿಯನ್ನು ದಾಖಲಿಸಿದ್ದಲ್ಲಿ ಮುಂದಿನ ಸಭೆಗಳಲ್ಲಿ ನಡುವಳಿ ಆಧಾರದ ಮೇಲೆ ಸಭೆಯನ್ನು ಮುಂದುವರೆಸಲು ಅನುಕೂಲವಾಗುತ್ತದೆ. ಆದರೆ ಕಳೆದ ಸಭೆಯ ನಡುವಳಿಯನ್ನು ದಾಖಲಿಸದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಗ್ರಾಮಠಾಣೆಗಳು ಇಲ್ಲದೇ ಇರುವುದರಿಂದ ಸಮಸ್ಯೆಗಳು ಉದ್ಭವವಾಗುತ್ತಿವೆ ಎಂದ ಅವರು, ಲೋಕೋಪಯೋಗಿ ಇಲಾಖೆ ರಸ್ತೆಯ ಅಂಚಿನಿಂದ ಗೃಹ ನಿರ್ಮಾಣಕ್ಕೆ 6 ಮೀ. ಬಿಟ್ಟು ಏಕವಿನ್ಯಾಸ ನಕ್ಷೆಗೆ ಅನುಮೋದನೆ ನೀಡಬೇಕು. ಇದರಿಂದ ಜನರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದರು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ನಗರ ಯೋಜನಾ ಪ್ರಾಧಿಕಾರದಲ್ಲಿ ನಮ್ಮ ಕೆಲಸಗಳು ಆಗುವುದಿಲ್ಲ ಎಂದು ಜನರ ಮನಸ್ಸಿನಲ್ಲಿ ಇದೆ. ಸಲ್ಲಿಕೆಯಾಗುವ ಅರ್ಜಿಗಳಲ್ಲಿ ಕಂಡು ಬರುವ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ, ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಶಾಸಕರಾದ ಯಶ್‌ಪಾಲ್ ಎ ಸುವರ್ಣ ಹಾಗೂ ಗುರುರಾಜ್ ಶೆಟ್ಟಿ ಗಂಟಿಹೊಳೆ, ನಗರಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ನಗರ ಮತ್ತು ಗ್ರಾಮಾಂತರ ಇಲಾಖೆಯ ಸಹಾಯಕ ನಿರ್ದೇಶಕಿ ರಮ್ಯಾ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here