ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಯುವಶಕ್ತಿಗಳ ಕೈಯಲ್ಲಿ ನಮ್ಮ ದೇಶದ ಭವಿಷ್ಯವಿದೆ. ಮಧುಕರ ಶೆಟ್ಟಿ ಅವರಂತಹ ಆದರ್ಶ ವ್ಯಕ್ತಿಗಳು ನಮಗೆ ಪ್ರೇರಣೆಯಾಗಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ಗುರಿಯನ್ನಿಟ್ಟುಕೊಂಡು ಕಠಿಣ, ಪ್ರಾಮಾಣಿಕ ಪ್ರಯತ್ನ ನಡೆಸಿದರೆ ಜೀವನದಲ್ಲಿ ದೊಡ್ಡ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ತಮ್ಮನ್ನು ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳದೆ ತಮ್ಮ ಗುರಿಯ ಕಡೆಗೆ ಗಮನ ಇಟ್ಟು ಮುಂದೆ ಸಾಗಬೇಕು. ಎಲ್ಲಾ ಮಕ್ಕಳ ಸಮಸ್ಯೆಗಳನ್ನು ಹಾಗೂ ಅವಶ್ಯಕತೆಗಳನ್ನು ಅರಿತು ಅದನ್ನು ಸರಿಪಡಿಸುವ ಪ್ರಾಮಾಣಿಕ ಪ್ರಯತ್ನ ನಡೆಯಬೇಕು. ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ ಹೇಳಿದರು.
ಕುಂದಾಪುರದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಪ್ರಾಯೋಜಿತ ಸುಜ್ಞಾನ ಪದವಿ ಪೂರ್ವ ಕಾಲೇಜು ಮತ್ತು ವಿದ್ಯಾರಣ್ಯ ಇಂಗ್ಲೀಷ್ ಮೀಡಿಯಂ ಸ್ಕೂಲ್‍ನಲ್ಲಿ ವಿದ್ಯಾರ್ಥಿ ಸಂಸತ್ತು ಪದಗ್ರಹಣ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮೊಬೈಲ್ ಬಳಕೆಯಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಂಡು ಎಚ್ಚರ ವಹಿಸಬೇಕು. ತಮ್ಮ ಸಮಸ್ಯೆಯನ್ನು ಮುಚ್ಚಿಡದೆ ಅದನ್ನು ನೇರವಾಗಿ ಪೊಲೀಸರೊಂದಿಗೆ ಚರ್ಚೆ ನಡೆಸಿ ಪರಿಹರಿಸಿಕೊಳ್ಳಬೇಕು. ವಾಟ್ಸಪ್, ಫೇಸ್‍ಬುಕ್, ಇನ್ಸ್ಟಾಗ್ರಾಮ್‍ಗಳಲ್ಲಿ ಬರುವ ಸಂದೇಶಗಳನ್ನು ನಂಬದೆ, ಲಿಂಕ್‍ಗಳನ್ನು ಒತ್ತುವುದು, ನಮ್ಮ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಬಾರದು. ಮಾದಕ ವಸ್ತುಗಳ ಸೇವನೆಯಿಂದ ನಮ್ಮ ಜೀವನ ಸಂಪೂರ್ಣ ಹಾಳಾಗುತ್ತದೆ. ತಮಾಷೆಗಾದರೂ ಮಾದಕ ವಸ್ತುಗಳನ್ನು ಉಪಯೋಗಿಸಬಾರದು. ಪೋಲಿಸರು ನಿಮ್ಮ ಸ್ನೇಹಿತರು, ತಂದೆ ತಾಯಿಗಳ ಹತ್ತಿರ ಹೇಳಿಕೊಳ್ಳಲಾಗದ ಸಮಸ್ಯೆಗಳನ್ನು ಪೊಲೀಸರ ಹತ್ತಿರ ಹೇಳಿಕೊಳ್ಳಬಹುದು. ಸಮಾಜದಲ್ಲಿ ಕಾನೂನು ಪ್ರಕಾರ ದೇಶ ಸೇವೆ ಮಾಡಲು ವಿದ್ಯಾರ್ಥಿಗಳು ಸಿದ್ಧರಾಗಬೇಕು. ಉತ್ತಮ ಮನುಷ್ಯ, ಆದರ್ಶ ವ್ಯಕ್ತಿಯಾಗಿ ಬೆಳೆಯಲು ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಅವರು ಹೇಳಿದರು.
ಸುಜ್ಞಾನ ಎಜುಕೇಶನಲ್ ಟ್ರಸ್ಟ್‍ನ ಚೇರ್‍ಮನ್ ಡಾ. ರಮೇಶ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯೋಪಾಧ್ಯಾಯ ಪ್ರದೀಪ ಕೆ. ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ಟ್ರಸ್ಟ್ ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಟ್ರಸ್ಟ್‍ನ ಖಜಾಂಚಿ ಭರತ್ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ವಿನಯ ಕುಮಾರ್ ಕೆ. ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ಪ್ರಾಂಶುಪಾಲ ರಂಜನ್ ಶೆಟ್ಟಿ ವಂದಿಸಿದರು.











