ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಗಂಗೊಳ್ಳಿ ಬಂದರಿನಿಂದ ಸಾಂಪ್ರದಾಯಿಕ ಮೀನುಗಾರಿಕೆಗೆ ತೆರಳಿದ ನಾಡದೋಣಿಯೊಂದು ಸಮುದ್ರದ ಅಲೆಗಳ ಅಬ್ಬರಕ್ಕೆ ಮಗುಚಿ ಮೂವರು ನಾಪತ್ತೆಯಾಗಿ, ಮತ್ತೊಬ್ಬ ಈಜಿ ಇನ್ನೊಂದು ದೋಣಿ ಹತ್ತಿ ಪಾರಾದ ಘಟನೆ ಮಂಗಳವಾರ ಬೆಳಿಗ್ಗೆ 9.30ರ ಸುಮಾರಿಗೆ ಕೋಡಿ ಸೀವಾಕ್ ಮತ್ತು ಗಂಗೊಳ್ಳಿ ಸೀವಾಕ್ ಮಧ್ಯೆ ಸೀ ಮೌತ್ (ಅಳಿವೆ ಬಾಗಿಲು) ನಲ್ಲಿ ನಡೆದಿದೆ. ದುರ್ಘಟನೆಯಲ್ಲಿ ನಾಪತ್ತೆಯಾದ ಮಿನುಗಾರರನ್ನು ಗಂಗೊಳ್ಳಿಯ ವಿನಾಯಕ ಸಾ ಮಿಲ್ ಸಮೀಪದ ಸಿಪಾಯಿ ಮನೆ ನಿವಾಸಿ ಸುರೇಶ್ ಖಾರ್ವಿ(48), ಗಂಗೊಳ್ಳಿಯ ಮಲ್ಯರಬೆಟ್ಟು ಚರ್ಚ್ ರಸ್ತೆ ಸೀನ ಎಂಬುವರ ಪುತ್ರ ಜಗದೀಶ್ ಖಾರ್ವಿ(50), ಗಂಗೊಳ್ಳಿಯ ಬೇಲಿಕೇರಿ ನಿವಾಸಿ ನಾರಾಯಣ ಎಂಬುವರ ಪುತ್ರ ಲೋಹಿತ್ ಖಾರ್ವಿ(34) ಎಂದು ಗುರುತಿಸಲಾಗಿದೆ. ಗಂಗೊಳ್ಳಿಯ ಮಲ್ಯರಬೆಟ್ಟು ನಿವಾಸಿ ಸಂತೋಷ್ ಖಾರ್ವಿ(35) ಪಾರಾದವರು.
ಬೆಳಿಗ್ಗೆ 9 ಗಂಟೆಗೆ ಕೋಡಿ ಸೀವಾಕ್ ಮತ್ತು ಗಂಗೊಳ್ಳಿ ಸೀವಾಕ್ ನಡುವೆ ಸೀಮೌತ್ (ಅಳಿವೆ ಬಾಗಿಲು) ನಲ್ಲಿ ಬರುತ್ತಿದ್ದ ವೇಳೆ ಭೀಕರ ಬಿರುಗಾಳಿಗೆ ದೋಣಿ ಮಗುಚಿದೆ. ದೋಣಿಯಲ್ಲಿದ್ದ ಮೀನುಗಾರರು ಸಮುದ್ರಕ್ಕೆ ಬಿದ್ದ ಬೆನ್ನಿಗೇ ಅವರ ಮೇಲೆ ದೋಣಿಯಲ್ಲಿದ್ದ ಬಲೆಯೂ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಇದರಿಂದಾಗಿಯೇ ಮೀನುಗಾರರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ನಾಪತ್ತೆಯಾದವರ ಶೋಧ ಕಾರ್ಯ ಮುಂದುವರೆದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಡದೋಣಿ ಅಧ್ಯಕ್ಷ ಯಶವಂತ ಖಾರ್ವಿ, ನಾಪತ್ತೆಯಾದವರು ಕುಟುಂಬಕ್ಕೆ ಸರ್ಕಾರ ತಕ್ಷಣ ಸ್ಪಂದಿಸಿ ಸಾಂತ್ವಾನದ ಜೊತೆಗೆ ಪರಿಹಾರ ನೀಡುವಂತೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಜೀ ಶಾಸಕ ಗೋಪಾಲ ಪೂಜಾರಿ ಭೇಟಿ:
ಘಟನೆಯ ಸುದ್ಧಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬೈಂದೂರು ಮಾಜೀ ಶಾಸಕ ಕೆ. ಗೋಪಾಲ ಪೂಜಾರಿ ಸಂತ್ರಸ್ಥ ಕುಟುಂಬಗಳಿಗೆ ಸಾಂತ್ವಾನ ನೀಡಿದರು. ಬಳಿಕ ಮಾಧ್ಯಮದೊಮದಿಗೆ ಮಾತನಾಡಿದ ಅವರು, ಹವಾಮಾನ ವೈಪರೀತ್ಯಗಳ ಬಗ್ಗೆ ಮೀನುಗಾರರು ಎಚ್ಚರಿಕೆ ವಹಿಸಿಕೊಳ್ಳಬೇಕು. ದಯವಿಟ್ಟು ಹುಚ್ಚು ಧೈರ್ಯ ಮಾಡಬೇಡಿ, ನಿಮ್ಮ ಕುಟುಂಬಗಳು ನಿಮ್ಮನ್ನೇ ನಂಬಿ ಬದುಕು ಸವೆಸುತ್ತಿದ್ದಾರೆ. ಶುಕ್ರವಾರದೊಳಗೆ ಮಾನ್ಯ ಮಂತ್ರಿಗಳೊಮದಿಗೆ ಮಾತುಕತೆ ನಡೆಸಿ ಸಂತ್ರಸ್ಥ ಕುಟುಂಬಗಳಿಗೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. ಅಲ್ಲದೇ ಹವಾಮಾನ ವೈಪರೀತ್ಯಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಘಟನಾ ಸ್ಥಳಕ್ಕೆ ಪೊಲೀಸರು, ಕರಾವಳಿ ಕಾವಲು ಪಡೆ ಪೊಲೀಸರು ಭೇಟಿ ನೀಡಿದ್ದು ಶೋಧ ಕಾರ್ಯ ಮುಂದುವರೆದಿದೆ. ದೋಣಿ ಸಮುದ್ರ ಪಾಲಾಗಿದ್ದು ಲಕ್ಷಾಂತರ ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಸುಧಾಕರ್ ನಾಯ್ಕ್, ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ, ಗಂಗೊಳ್ಳಿ ಪಿಎಸ್ಐ ಪವನ್ ನಾಯ್ಕ್, ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಆಗಮಿಸಿದ್ದಾರೆ.











