ಟೀಂ ಅಶೋಕ್ ಪೂಜಾರಿ ಸ್ನೇಹಿತರ ಬಳಗದಿಂದ ಕೋಟೇಶ್ವರದಲ್ಲಿ ಅಭಿನಂದನಾ ಸಮಾರಂಭ
ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಟೀಂ ಅಶೋಕ್ ಪೂಜಾರಿ ಸ್ನೇಹಿತ ಬಳಗ ಬೀಜಾಡಿ-ಗೋಪಾಡಿ ವತಿಯಿಂದ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಬೀಜಾಡಿ ಮೀನುಗಾರರ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಆವಿರೋಧವಾಗಿ ಆಯ್ಕೆಯಾದ ಅಶೋಕ್ ಪೂಜಾರಿ ಬೀಜಾಡಿ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಅಭಿನಂದಿಸಿ ಮಾತನಾಡಿದ ಗೋಪಾಡಿ ಬ್ರಹ್ಮಲಿಂಗೇಶ್ವರ ಚಿಕ್ಕು ಅಮ್ಮನವರ ದೇವಸ್ಥಾನದ ಆಡಳಿತ ಮೊಕ್ತೇಸರ ಆನಂದ ಬಿಳಿಯ ಅವರು, ಅಶೋಕ್ ಪೂಜಾರಿಯವರು ಎಲ್ಲರೊಳು ಒಂದಾಗಿ ಇರುವ ವ್ಯಕ್ತಿ. ಬೇರೆ ಬೇರೆ ಕ್ಷೇತ್ರಗಳಲ್ಲಿ ಸೇವೆಯ ಛಾಪು ಮೂಡಿಸಿದ್ದಾರೆ. ಉತ್ತಮ ನಾಯಕತ್ವ ಹೊಂದಿದ್ದಾರೆ. ಇವರ ನೇತೃತ್ವದಲ್ಲಿ ಬೀಜಾಡಿ ಮೀನುಗಾರರ ಸಹಕಾರ ಸಂಘ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ಸಂಸದ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರು, ನಮ್ಮ ಯೋಚನೆಗಳು ಯೋಜನೆಗಳಾಗಿ ಜ್ಯಾರಿಗೆ ಬರಬೇಕು. ಗಳಿಸಿದ ಸ್ಥಾನ, ಕೆಲಸ ಮಾಡುವ ಮೂಲಕ ಅಂತಸ್ತು ಬೆಳೆಯುತ್ತದೆ. ಜನರು ನೆನಪಿನಲ್ಲಿ ಇರಿಸಿಕೊಳ್ಳುವಂತಹ ಕೆಲಸ ಮಾಡಬೇಕು. ಈಗ ಸರಕಾರವೂ ಇರುವುದರಿಂದ ಅಶೋಕ ಪೂಜಾರಿಯವರು ಸಂಘಕ್ಕೆ ಸರಕಾರದಿಂದ ದೊರಕುವ ಸೌಲಭ್ಯಗಳನ್ನು ತರಿಸಿಕೊಳ್ಳಲು ಸಾಧ್ಯತೆ ಇದೆ. ಅಶೋಕ್ ಪೂಜಾರಿ ಅವರ ನೇತೃತ್ವದಲ್ಲಿ ಉತ್ತಮ ಕಾರ್ಯಗಳು ನೆರವೇರುತ್ತದೆ ಎಂದರು.
ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಬೀಜಾಡಿ ಮೀನುಗಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಅಶೋಕ್ ಪೂಜಾರಿ ಬೀಜಾಡಿ ಅವರು, ನಿಮ್ಮೆಲ್ಲರ ಅಭಿಮಾನ, ಪ್ರೀತಿಗೆ ನಾನು ಸದಾ ಋಣಿಯಾಗಿರುತ್ತೇನೆ. ಇನ್ನೂ ಹೆಚ್ಚಿನ ಸೇವೆಯನ್ನು ನೀಡಲು ಪ್ರಯತ್ನಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಎಫ್‍ಡಿಸಿ ಮಾಜಿ ಅಧ್ಯಕ್ಷ ಹಿರಿಯಣ್ಣ ಚಾತ್ರಬೆಟ್ಟು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಕೇಂದ್ರ ಬ್ಯಾಂಕ್ ನಿರ್ದೇಶಕರಾದ ಎಂ.ಮಹೇಶ್ ಹೆಗ್ಡೆ, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಶೆಟ್ಟಿ ಮಲ್ಯಾಡಿ, ಕೋಟೇಶ್ವರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಕೆದೂರು ಸದಾನಂದ ಶೆಟ್ಟಿ, ಬೈಂದೂರು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ ಪೂಜಾರಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುರೇಂದ್ರ ಶೆಟ್ಟಿ, ಬೀಜಾಡಿ ಮೀನುಗಾರರ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ರಾಜು ತೋಟದಬೆಟ್ಟು ಉಪಸ್ಥಿತರಿದ್ದರು.
ಟೀಂ ಅಶೋಕ್ ಪೂಜಾರಿ ಸ್ನೇಹಿತ ಬಳಗ ಬೀಜಾಡಿ-ಗೋಪಾಡಿ ವತಿಯಿಂದ ಅಶೋಕ್ ಪೂಜಾರಿ ಬೀಜಾಡಿ ಹಾಗೂ ಆಶಾ ಅಶೋಕ್ ಪೂಜಾರಿ ಅವರನ್ನು ಅದ್ದೂರಿಯಾಗಿ ಸನ್ಮಾನಿಸಲಾಯಿತು.
ಗಾಯಕ ರಾಘವೇಂದ್ರ ಕೋಟೇಶ್ವರ ಪ್ರಾರ್ಥನೆ ಮಾಡಿದರು. ದಿನೇಶ ಚಾತ್ರಬೆಟ್ಟು ಸ್ವಾಗತಿಸಿದರು. ರಾಜಶೇಖರ ಶೆಟ್ಟಿ ಕೊರ್ಗಿ ಸನ್ಮಾನ ಪತ್ರ ವಾಚಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು.











