ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಸ್ವಾತಂತ್ರ್ಯಕ್ಕಾಗಿ ದೇಶದ ಅನೇಕ ಮಂದಿ ತಮ್ಮ ತನು-ಮನವನ್ನೇ ಸಮರ್ಪಿಸಿದ್ದಾರೆ. ಅವರೆಲ್ಲರನ್ನು ನೆನೆಯುವ ದಿನವಿದು. ಕುಂದಾಪುರದಲ್ಲಿ 40ಕ್ಕೂ ಮಿಕ್ಕಿ ಜನರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಸಿಕ್ಕ ಸ್ವಾತಂತ್ರ್ಯವನ್ನು ಇಂದಿಗೂ ಗಟ್ಟಿಯಾಗಿ ಕಾಪಾಡಿಕೊಂಡು ಬರುತ್ತಿರುವ ಸೈನಿಕರನ್ನು ಸ್ಮರಿಸಬೇಕು. ಸ್ವಾತಂತ್ರ್ಯ ಸಮಯದಲ್ಲಿ ನಮ್ಮಲ್ಲಿರುವ ಏಕತೆ, ದೇಶಾಭಿಮಾನ ಇನ್ನೂ ಕೂಡ ಎಲ್ಲರಲ್ಲೂ ಮತ್ತಷ್ಟು ಬಲಗೊಳ್ಳಬೇಕಿದೆ ಎಂದು ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತೆ ರಶ್ಮೀ ಎಸ್.ಆರ್. ಕರೆ ನೀಡಿದರು.
ಕುಂದಾಪುರ ತಾಲೂಕು ಆಡಳಿತದ ನೇತೃತ್ವದಲ್ಲಿ ಕುಂದಾಪುರದ ಗಾಂಧಿ ಮೈದಾನದಲ್ಲಿ ಶುಕ್ರವಾರ ನಡೆದ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಅವರು ಸಂದೇಶ ನೀಡಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿದ ಪುಣ್ಯ ಸ್ಥಳವಿದು. ಇದೇ ಗಾಂಧಿ ಮೈದಾನದಲ್ಲಿ ನಾವಿಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿರುವುದು ಹೆಮ್ಮೆಯ ವಿಷಯ. ಪ್ರತಿಯೊಬ್ಬ ಭಾರತೀಯನಲ್ಲಿ ನನ್ನ ದೇಶ ಎಂಬ ದೇಶಾಭಿಮಾನ ಸೃಷ್ಟಿಯಾಗಬೇಕು. ಭಾರತವಿಂದು ವಿಶ್ವದ ಬಲಿಷ್ಠ ರಾಷ್ಟ್ರವಾಗಿ ಎಲ್ಲ ರಂಗದಲ್ಲೂ ಮುಂಚೂಣಿಯಲ್ಲಿದೆ. ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣಕ್ಕೆ ಪ್ರಬಲ ಸಂವಿಧಾನವನ್ನು ನೀಡಿದ ಡಾ.ಅಂಬೇಡ್ಕರ್ ಅವರನ್ನು ಸ್ಮರಿಸಿಕೊಳ್ಳಬೇಕು. ಮಳೆಯ ನಡುವೆಯೂ ಹಿಂಜರಿಯದೇ, ಎಲ್ಲರೂ ಪಥಸಂಚಲನದಲ್ಲಿ ಪಾಲ್ಗೊಂಡ ರೀತಿ ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ನಮ್ಮ ಹಿರಿಯರ ಬಲಿದಾನ, ಹೋರಾಟ ಎಲ್ಲವನ್ನು ಇಂದಿನ ಯುವ ಪೀಳಿಗೆ ಅರಿಯಬೇಕು. ಈ 79 ವರ್ಷದಲ್ಲಿ ದೇಶ ಬೆಳೆದ ಬಗೆ, ವಿಶ್ವದ ನಾಲ್ಕನೇ ಆರ್ಥಿಕ ಶಕ್ತಿಯಾಗಿ ರೂಪುಗೊಂಡಿರುವುದಕ್ಕೆ ಸಮಸ್ತ ನಾಗರಿಕರ ಇಚ್ಛಾಶಕ್ತಿಯೇ ಕಾರಣ ಎಂದು ಹೇಳಿದರು.
ಕುಂದಾಪುರ ಪುರಸಭಾ ಅಧ್ಯಕ್ಷ ಮೋಹನ್‍ದಾಸ್ ಶೆಣೈ, ಉಪಾಧ್ಯಕ್ಷೆ ವನಿತಾ ಬಿಲ್ಲವ, ಮುಖ್ಯಾಧಿಕಾರಿ ಆನಂದ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತ, ಕುಂದಾಪುರ ಡಿವೈಎಸ್‍ಪಿ ಹೆಚ್.ಡಿ. ಕುಲಕರ್ಣಿ, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ್ ಕೆ., ತಾಲೂಕು ಆಸ್ಪತ್ರೆಯ ಡಾ.ನಾಗೇಶ್, ಯುವಜನಾ ಸೇವಾ ಕ್ರೀಡಾಧಿಕಾರಿ ಕುಸುಮಾಕರ್ ಶೆಟ್ಟಿ, ವಿವಿಧ ಇಲಾಖಾಧಿಕಾರಿಗಳು, ಪುರಸಭೆ ಸದಸ್ಯರು, ಗ್ಯಾರಂಟಿ ಸಮಿತಿ ಸದಸ್ಯರು, ಜನಪ್ರತಿನಿಧಿಗಳು, ವಿವಿಧ ಶಾಲಾ- ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಕಿಟ್‍ಗಳನ್ನು ವಿತರಿಸಲಾಯಿತು.
ಧ್ವಜಾರೋಹಣದ ಬಳಿಕ ಆಕರ್ಷಕ ಪಥ ಸಂಚಲನ ಮತ್ತಷ್ಟು ಕಳೆ ತಂದಿತು. ಎಸಿ ರಶ್ಮೀ ಎಸ್.ಆರ್. ಗೌರವ ವಂದನೆ ಸ್ವೀಕರಿಸಿದರು. ಕುಂದಾಪುರ ನಗರ ಠಾಣಾಧಿಕಾರಿ ನಂಜಾ ನಾಯ್ಕ್ ಖಡ್ಗಧಾರಿಯಾಗಿ ಕಮಾಂಡ್ ನೀಡಿದರು. ಸಂಚಾರ ಪೊಲೀಸ್ ಠಾಣಾಧಿಕಾರಿ ನೂತನ್ ನೇತೃತ್ವದಲ್ಲಿ ಪೆÇಲೀಸ್ ತಂಡ, ಗೃಹ ರಕ್ಷಕ ದಳ, ಕುಂದಾಪುರದ ವಿವಿಧ ಶಾಲೆಗಳ ಎನ್‍ಸಿಸಿ, ಸ್ಕೌಟ್- ಗೈಡ್ಸ್ ತಂಡಗಳು ಹಾಗೂ ಪೌರ ಕಾರ್ಮಿಕರ ತಂಡ ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.
ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಸ್ವಾಗತಿಸಿದರು. ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಶೋಭಾ ಶೆಟ್ಟಿ ವಂದಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ನಿರೂಪಿಸಿದರು.











