ಪೊಲೀಸರಿಂದ ಹಲ್ಲೆ ಪ್ರಕರಣ -ಸಿಓಡಿ ತನಿಖೆಗೆ ಆದೇಶ, ಕುಟುಂಬಕ್ಕೆ ಧೈರ್ಯ ತುಂಬಿದ ಗೃಹಸಚಿವರು

0
742

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕೋಟ:
ಕೋಟದಲ್ಲಿ ಕೊರಗ ಕುಟುಂಬದ ಮೆಹಂದಿ ಸಂದರ್ಭ ಪೊಲೀಸ್ ಇಲಾಖೆ ನೆಡೆದುಕೊಂಡ ರೀತಿ ನೋವಾಗಿದೆ. ಈ ಪ್ರಕರಣವನ್ನು ಸಿಓಡಿ ತಬಿಖೆಗೆ ವಹಿಸಲಾಗುತ್ತದೆ ಹಾಗೂ ಪೊಲೀಸರಿಂದ ಹಲ್ಲೆಗೊಳಗಾದವರಿಗೆ ಸರ್ಕಾರದ ವತಿಯಿಂದ ತಲಾ 2 ಲಕ್ಷ ರೂ. ನೀಡಲಾಗುವುದು ಎಂದರು ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.

Click Here


ಕೋಟತಟ್ಟು ಗ್ರಾಮದ ಕೊರಗ ಕಾಲೋನಿಯಲ್ಲಿ ಮೆಹಂದಿ ಸಂದರ್ಭ ಪೊಲೀಸರಿಂದ ಹಲ್ಲೆ ನಡೆದ ಮನೆಗೆ ಭೇಟಿ ನೀಡಿ, ಕುಟುಂಬಕ್ಕೆ ಧೈರ್ಯ ತುಂಬಿ ಮಾತನಾಡಿದರು.

ಈ ಬಗ್ಗೆ ಯಾರೂ ಹೆದರಬೇಕಾದ ಅವಶ್ಯಕತೆ ಇಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪಿಎಸ್‍ಐ ಅಮಾನತು ಮಾಡಲಾಗಿದೆ. ಉಳಿದವರ ವರ್ಗಾವಣೆ ಮಾಡಲಾಗಿದ್ದು, ಮುಂದೆ ತನಿಖೆಯಲ್ಲಿ ಅವರ ಮೇಲೂ ಕ್ರಮ ಆಗಲಿದೆ. ಹಾಗೆಯೇ ಪೊಲೀಸ್ ಇಲಾಖೆ ದಾಖಲಿಸಿದ ಮೊಕದ್ದಮೆಯ ಬಗ್ಗೆ ಮೇಲ್ನೋಟಕ್ಕೆ ಸುಳ್ಳುದಾವೆ ಎನ್ನುವುದು ಕಂಡು ಬರುತ್ತಿದೆ. ಈ ಬಗ್ಗೆ ಕೂಡಾ ಯಾರೂ ಹೆದರುವ ಅವಶ್ಯಕತೆ ಇಲ್ಲ. ಸರ್ಕಾರವೇ ನಿಮ್ಮ ಜೊತೆಗಿದೆ ಎಂದರು.

ಪೊಲೀಸರು ಆ ಸಂದರ್ಭ ಬಳಸಿದ ಭಾಷಾ ಪ್ರಯೋಗವೂ ಕೂಡ ತನಿಖೆಯಲ್ಲಿ ಬರುತ್ತದೆ. ಅದಕ್ಕೂ ಕೂಡಾ ತಕ್ಕ ಶಿಕ್ಷೆಯಾಗುತ್ತದೆ. ಕಾನೂನು ವ್ಯವಸ್ಥೆಯಲ್ಲಿ ಯಾರಿಗೂ ತಾರತಮ್ಯವಾಗಲೂ ಬಿಡುವುದಿಲ್ಲ. ಈ ಪ್ರಕರಣ ಸಮಗ್ರ ತನಿಖೆಯಾಗುತ್ತದೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಪುನರಪಿ ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.
ಡಿ.27ರ ರಾತ್ರಿ ನಡೆದ ಪ್ರಕರಣವನ್ನು ಇಲ್ಲಿನ ಸಬ್ ಇನ್ಸ್‍ಪೆಕ್ಟರ್ ತಕ್ಷಣ ಮೇಲಾಧಿಕಾರಿಗಳ ಗಮನಕ್ಕೆ ತರಲಿಲ್ಲ. ತಾನೇ ಸುಪ್ರೀಂ ಎನ್ನುವ ರೀತಿ ನಡೆದುಕೊಂಡಿದ್ದರಿಂದ ಹೀಗಾಯಿತು. ಪೊಲೀಸ್ ವ್ಯವಸ್ಥೆ ಇರುವುದು ಸಮಾಜದಲ್ಲಿ ರೌಡಿಗಳನ್ನು ನಿಯಂತ್ರಿಸಿ,ಶಾಂತಿ ಸುವ್ಯವಸ್ಥೆ ಕಾಪಾಡಲು. ಪೊಲೀಸರೇ ರೌಡಿಗಳಾಗಬಾರದು. ರಾಜ್ಯದಲ್ಲಿ ಇವತ್ತು ಒಂದು ಲಕ್ಷ ಜನ ಪೊಲೀಸರಿದ್ದಾರೆ. ಜನರ ಮಾನಪ್ರಾಣ ಆಸ್ತಿ ರಕ್ಷಣೆಗೆ ಸಿದ್ಧರಿರುತ್ತಾರೆ. ಅಂತಹ ಅಧಿಕಾರಿಗಳ ನಡುವೆ ಅಪರೂಪಕ್ಕೆ ಇಂತಹವರು ಇರುತ್ತಾರೆ. ಸರ್ಕಾರ ಇಂತಹವರ ಮೇಲೆ ಕ್ರಮ ಕೈಗೊಳ್ಳುತ್ತದೆ ಎಂದರು.

ನಾನು ಕೂಡಾ ಕೊರಗ ಸಮುದಾಯದ ಜೊತೆ ಬೆಳೆದವ. ಅಕ್ಕಿ ಗಿರಣಿಯಲ್ಲಿ ಕೊರಗ ಸಮುದಾಯದವರೊಂದಿಗೆ ಮೂಟೆ ಹೊರುತ್ತಿದ್ದೆ. ಅವರ ನೋವು ನಲಿವು ನನಗೆ ಗೊತ್ತಿದೆ. ತಳಸ್ತರದ ಮುಗ್ದ ಸಮುದಾಯ ಇಂತಹ ಕಾರ್ಯಕ್ರಮ ಮಾಡಿದ್ದೇ ಅಪರೂಪ. ಈ ಘಟನೆಯಿಂದ ಸಮುದಾಯಕ್ಕೆ ನೋವಾಗಿದೆ. ಕುಟುಂಬಕ್ಕೆ ಅಘಾತವಾಗಿದೆ. ಆ ದಿನ ಪೊಲೀಸರಿಂದ ಹಲ್ಲೆಗೊಳಗಾದವರಿಗೆ ಸರ್ಕಾರ ತಲಾ ಎರಡು ಲಕ್ಷ ನೀಡುತ್ತಿದ್ದು, ಇವತ್ತು 50ಸಾವಿರವನ್ನು ನೀಡಲಾಗುತ್ತದೆ ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸರ್ಕಾರವೇ ಇವತ್ತು ಬಡವರ ಮನೆಬಾಗಿಲಿಗೆ ಬಂದಿದೆ. ಈ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಲು ಸರ್ಕಾರ ಬದ್ದವಿದೆ. ಈ ವಿಷಯದ ಬಗ್ಗೆ ಮತ್ತೆ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಕೊರಗ ಸಮುದಾಯದ ಮುಖಂಡರು, ಹಾಗೂ ಕೊರಗ ಕುಟುಂಬದ ಮಹಿಳೆಯರು ತಮ್ಮ ದುಮ್ಮಾನ ಹಂಚಿಕೊಂಡರು. ಗೃಹ ಸಚಿವರು ನವದಂಪತಿಗಳನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ., ಎಸ್ಪಿ ವಿಷ್ಣುವರ್ದನ್, ಅಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ, ಕೋಟತಟ್ಟು ಗ್ರಾ.ಪಂ.ಅಧ್ಯಕ್ಷೆ ಅಶ್ವಿನಿ ದಿನೇಶ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here