ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ದೇಶಕ್ಕೆ ಭವಿಷ್ಯವಿದೆ. ನರೇಂದ್ರ ಮೋದಿಯವರು ಪ್ರಧಾನಿ ಆದ ಬಳಿಕ ಎರಡು ಲಕ್ಷ ಆರವತ್ತೈದು ಸಾವಿರ ರೂ.ಗಳ ರೈಲ್ವೆ ಬಜೆಟ್‍ನ್ನು ಸಾಮಾನ್ಯ ಬಜೆಟ್‍ಗೆ ಸೇರಿಸಿ ವಿಶ್ವದ ದಾಖಲೆಯನ್ನು ಬರೆದಿದ್ದಾರೆ. ವಿಮಾನ ನಿಲ್ದಾಣ ಹೇಗೋ ಅದೇ ರೀತಿ ರೈಲ್ವೆ ನಿಲ್ದಾಣ ಹಾಗೇ ಇರಬೇಕು ಎಂಬುದು ಪ್ರಧಾನಿಯವರ ಆಶಯ. ಕೊಂಕಣ ರೈಲ್ವೆಯನ್ನು ಕೇಂದ್ರ ರೈಲ್ವೆಯೊಂದಿಗೆ ವಿಲೀನಗೊಳಿಸಬೇಕೆಂಬ ಅನೇಕ ವರ್ಷಗಳ ಬೇಡಿಕೆಗೆ ಉತ್ತಮ ಫಲಿತಾಂಶ ನೀಡುವ ಕೆಲಸ ಪ್ರಾರಂಭವಾಗಿದೆ ಎಂದು ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಕುಂದಾಪುರ ರೈಲು ನಿಲ್ದಾಣಕ್ಕೆ ಭಾನುವಾರ ಭೇಟಿ ನೀಡಿ ಅವರು ಹಂಗಳೂರು ಲಯನ್ಸ್ ಕ್ಲಬ್ ವತಿಯಿಂದ ನೂತನವಾಗಿ ನಿರ್ಮಿಸಿದ ಶೆಲ್ಟರ್ ಹಾಗೂ ನೆಲಹಾಸು ಕಾಮಗಾರಿಯನ್ನು ವೀಕ್ಷಿಸಿ ಅವರು ಮಾತನಾಡಿದರು.
ಚೀನಾ ಹೊರತು ಪಡಿಸಿ ಸುಮಾರು ಒಂದು ಲಕ್ಷ ಕಿ.ಮೀ ರೈಲು ಹೋಗುವ ರಾಷ್ಟ್ರ ಇದ್ದರೆ ಅದು ಭಾರತ ಮಾತ್ರ. ಯುಪಿಎ ಸರಕಾರದ 11 ವರ್ಷದಲ್ಲಿ ಹಾಗೂ ದೇಶದಲ್ಲಿ 50-60 ವರ್ಷದಲ್ಲಿ ಏನೇನು ಆಗಿಲ್ಲವೋ ಆ ಎಲ್ಲವನ್ನು ಸಾಧನೆ ಮಾಡುವ ಮೂಲಕ ಭಾರತ ದೇಶದಲ್ಲಿ ರೈಲ್ವೆ ಇಲಾಖೆ ಹೊಸ ಭಾಷ್ಯ ಬರೆದಿದೆ. ಶೇ.23ರಷ್ಟಿದ್ದ ವಿದ್ಯುದ್ದೀಕರಣ ಶೇ.100 ಆಗಿದೆ. ಮಣಿಪುರ ರಾಜ್ಯದಲ್ಲಿ 16 ಸಾವಿರ ಕೋಟಿ ಖರ್ಚು ಮಾಡಿ ರೈಲ್ವೆ ಲೈನ್ ನಿರ್ಮಾಣ ಮಾಡಲಾಗಿದೆ. ಸಮಗ್ರ ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಪ್ರಧಾನಿಯವರ ಕೈಕಂರ್ಯಕ್ಕೆ ನಾವೆಲ್ಲರೂ ಕೈಜೋಡಿಸಬೇಕಿದೆ ಎಂದು ಅವರು ಹೇಳಿದರು.
ಕುಂದಾಪುರ ದೇಶಕ್ಕೆ, ವಿಶ್ವಕ್ಕೆ ನಂಬಿಕೆಗೆ ಮತ್ತೊಂದು ಹೆಸರಾಗಿದೆ. ವ್ಯಾವಹಾರಿಕವಾಗಿಯೂ ಅಲ್ಲದೆ ವೈಚಾರಿಕವಾಗಿಯೂ ಲಕ್ಷಾಂತರ ಜನರಿಗೆ ಜೀವನ ಬದುಕುವುದನ್ನು ಹೇಳಿಕೊಟ್ಟಿರುವ ತಾಲೂಕು ಕುಂದಾಪುರ. ಕರಾವಳಿ ಭಾಗದಿಂದ ರಾಮೇಶ್ವರಂ-ಕಾಶೀ ಮತ್ತು ಅಯೋಧ್ಯೆಗೆ ಹೊಸ ರೈಲು ನೀಡಬೇಕೆಂಬ ಬೇಡಿಕೆಯನ್ನು ಪರಿಶೀಲಿಸಲಾಗುವುದು ಎಂದು ಹೇಳಿದ ಅವರು 70 ಲಕ್ಷ ರೂ. ವೆಚ್ಚದಲ್ಲಿ ಶೆಲ್ಟರ್ ನಿರ್ಮಣ ಮಾಡಿರುವ ಹಂಗಳೂರು ಲಯನ್ಸ್ ಕ್ಲಬ್ ಕಾರ್ಯವನ್ನು ಶ್ಲಾಘಿಸಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸಬೇಕು. ಕುಂದಾಪುರ ರೈಲ್ವೆ ನಿಲ್ದಾಣವನ್ನು ಅತ್ಯಂತ ಸುಸಜ್ಜಿತಗೊಳಿಸಬೇಕು. ನೆನೆಗುದಿಗೆ ಬಿದ್ದಿರುವ ರೈಲ್ವೆ ಹಳಿಯ ಡಬ್ಲಿಂಗ್ ಕಾರ್ಯ ನಡೆಯಬೇಕು. ಕರಾವಳಿ ಭಾಗದ ಎಲ್ಲಾ ರೈಲ್ವೇ ನಿಲ್ದಾಣಗಳ ಉನ್ನತೀಕರಣ ಆಗಬೇಕು. ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಬೇಕು. ಈ ಭಾಗದ ರೈಲ್ವೆ ಪ್ರಯಾಣಿಕರ ಬೇಡಿಕೆಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಅನೇಕ ಹೊಸ ರೈಲು ಸಂಚಾರವನ್ನು ಪ್ರಾರಂಭಿಸಿದ ಮತ್ತು ಅನೇಕ ರೈಲುಗಳಿಗೆ ಕುಂದಾಪುರ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಆದೇಶಿಸಿದ ಸಚಿವ ವಿ.ಸೋಮಣ್ಣ ಅವರ ಕಾರ್ಯ ಅಭಿನಂದನೀಯ ಎಂದು ಹೇಳಿದರು.
ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ, ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೊಂಕಣ ರೈಲ್ವೇ ಹಿರಿಯ ಅಧಿಕಾರಿಗಳಾದ ಸುನೀಲ್ ಗುಪ್ತಾ, ಆಶಾ ಶೆಟ್ಟಿ, ಕುಂದಾಪುರ ರೈಲು ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ ಪುತ್ರನ್, ಲಯನ್ಸ್ ಕ್ಲಬ್ ಅಧ್ಯಕ್ಷ ಸಂದೀಪ ಶೆಟ್ಟಿ, ಮಾಜಿ ಅಧ್ಯಕ್ಷ ರೋಹನ್ ಡಿಕೋಸ್ತಾ ಕೊಂಕಣ ರೈಲ್ವೆ ಇಲಾಖೆ ಅಧಿಕಾರಿಗಳು, ಬಿಜೆಪಿ ಕುಂದಾಪುರ ಮಂಡಲ ಪದಾಧಿಕಾರಿಗಳು, ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭ ವಿವಿಧ ಸಂಘಗಳ ವತಿಯಿಂದ ಸಚಿವ ಸೋಮಣ್ಣ ಅವರಿಗೆ ಮನವಿ ಸಲ್ಲಿಸಿ ಗೌರವಿಸಲಾಯಿತು.
ಕೊಂಕಣ ರೈಲ್ವೆ ಇಲಾಖೆಯ ಲಿಖಿತಾ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.











