ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಪ್ರತಿ ಭಾಷೆಗೂ ಅದರದ್ದೇ ಆದ ಸಂಸ್ಕೃತಿ ಇರುತ್ತದೆ. ಕನ್ನಡದ ಸಂಸ್ಕಾರ ಸಂಸ್ಕೃತಿ ಉಳಿಸಿ ಬೆಳೆಸಬೇಕಾದ್ದು ಕನ್ನಡಿಗರಾದ ನಮ್ಮೆಲ್ಲರ ಆದ್ಯ ಕರ್ತವ್ಯ. ಇದು ಇನ್ನಷ್ಟು ಕಾಲ ಪಸರಿಸಿ ಬೆಳೆದು ಉಳಿಯಬೇಕು. ನಾಡಿನ ಭಾಷೆ ಸಂಸ್ಕಾರ ಉಳಿಸುವ ಕೆಲಸ ನಿರಾತಂಕವಾಗಿ ನಡೆಯಲಿ ಎಂದು ಕರವೇ ತಾಲೂಕು ಗೌರವಾಧ್ಯಕ್ಷ, ಉದ್ಯಮಿ ಕೆ. ಆರ್. ನಾಯ್ಕ್ ಹೇಳಿದರು.
ಅವರು ರವಿವಾರ ಇಲ್ಲಿನ ಎ.ವಿ.ಎನ್. ಕಟ್ಟಡದ ಕಲಾ ಕ್ಷೇತ್ರ ಸಭಾಂಗಣದಲ್ಲಿ ಕನ್ನಡ ಸಂಘಟನೆಗಳ ಒಕ್ಕೂಟ ಕರ್ನಾಟಕ ರಕ್ಷಣಾ ವೇದಿಕೆ ಕುಂದಾಪುರ ತಾಲೂಕು ಘಟಕ ಉದ್ಘಾಟಿಸಿ ಮಾತನಾಡಿದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಭಾಷೆ ಧ್ವನಿ ಶಬ್ದ ಅಷ್ಟೇ ಅಲ್ಲ ಕರುನಾಡಿನ ಅಸ್ಮಿತೆ ಸಾರುವ ಪ್ರತಿಯೊಂದು ಕೆಲಸವೂ ಕನ್ನಡದ ಕಾರ್ಯವೇ ಆಗಿರುತ್ತದೆ. ಸಾಧುಂಗೆ ಸಾಧುಂ ಮಾಧುರ್ಯಂಗೆ ಮಾಧುರ್ಯಂ ಬಾದಿಪ್ಪ ಕಲಿಗೆ ಕಲಿ ವಿಪರೀತಂ ಎಂಬಂತೆ ಸ್ನೇಹಕ್ಕೂ ಸಿದ್ಧ ಸಮರಕ್ಕೂ ಬದ್ಧ ಎಂಬ ನಿಲುವು ಕರವೇಯದ್ದಾಗಿದೆ. ಜಗತ್ತಿನ 6 ಸಾವಿರ ಭಾಷೆಗಳಲ್ಲಿ ಮೊದಲ 20 ರಲ್ಲಿ ಕನ್ನಡ ಇದೆ ಎಂದರು.
ಜನತಾ ಫಿಶ್ ಮಿಲ್ ಕೋಟದ ಉದ್ಯಮಿ, ಕರವೇ ತಾಲೂಕು ಘಟಕ ಗೌರವಾಧ್ಯಕ್ಷ ಆನಂದ ಸಿ. ಕುಂದರ್ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆ ಜಿಲ್ಲಾಧ್ಯಕ್ಷ ಅ.ರಾ. ಪ್ರಭಾಕರ್ ಪೂಜಾರಿ, ಮಂಗಳೂರು ವಿಶ್ವವಿದ್ಯಾನಿಲಯ ಕುಂದಗನ್ನಡ ಅಧ್ಯಯನ ಪೀಠ ಸದಸ್ಯ ಕೆ. ಸಿ. ರಾಜೇಶ್, ಲೇಖಕ ಓಂ ಗಣೇಶ್ ಉಪ್ಪುಂದ, ಉದಯ ಜ್ಯುವೆಲ್ಲರ್ಸ್ ಉದ್ಯಮಿ ಉದಯ್ ಶೇಟ್, ಕರ್ನಾಟಕ ರಕ್ಷಣಾ ವೇದಿಕೆ ಕುಂದಾಪುರ ತಾಲೂಕು ಘಟಕ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಉಪ್ಪುಂದ, ಪ್ರಧಾನ ಕಾರ್ಯದರ್ಶಿ ಕೆ. ಸಿ. ಸಂತೋಷ್ ಉಪಸ್ಥಿತರಿದ್ದರು.
ಉದ್ಯಮಿ ರಿತೇಶ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಶಾಸ್ತ್ರಿ ಸರ್ಕಲ್ ನಲ್ಲಿ ಶಾಶ್ವತ ಕಟ್ಟೆಯೊಡನೆ ಕನ್ನಡ ಧ್ವಜ ಹಾರಿಸಲು ನಿರ್ಣಯಿಸಲಾಯಿತು.
ಮಣಿಕಂಠ ನಿರ್ವಹಿಸಿ. ಕರವೇ ಮುಖ್ಯ ಸಂಚಾಲಕ ಜೋಯ್ ಜೆ. ಕರ್ವಾಲೋ ಸ್ವಾಗತಿಸಿ, ಪ್ರಸ್ತಾವಿಸಿ, ಸಂಘಟನಾ ಕಾರ್ಯದರ್ಶಿ ಶೇಖ್ ಹಫೀಜ್ ವಂದಿಸಿದರು.











