ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಯಕ್ಷಗಾನ ಕಲೆಯ ಹೆಸರಲ್ಲಿ ನಡೆಸುವ “ರಾಜ್ಯೋತ್ಸವ ಯಕ್ಷಗಾನ ತಾಳಮದ್ದಳೆ” ಕಾರ್ಯಕ್ರಮವು ತನ್ನ 50ನೇ ವರ್ಷದ ಸುವರ್ಣ ಸಂಭ್ರಮ “ಸುವರ್ಣಾಕ್ಷ” ಕಾಯಕ್ರಮ ನವಂಬರ್ 1 ಮತ್ತು 2ರಂದು ನಡೆಯಲಿದೆ ಎಂದು ಭಂಡಾರ್ ಕಾರ್ಸ್ ಕಾಲೇಜು ವಿಶ್ವಸ್ಥ ಮಂಡಳಿ ಉಪಾಧ್ಯಕ್ಷ ಕೆ.ಶಾಂತಾರಾಮ ಪ್ರಭು ತಿಳಿಸಿದರು.
ಅವರು ಕಾಲೇಜಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನವೆಂಬರ್ 1ರಂದು ಶನಿವಾರ ಬೆಳಿಗ್ಗೆ 9.30ಕ್ಕೆ 50ನೇ ವರ್ಷದ ಯಕ್ಷಗಾನ ತಾಳಮದ್ದಲೆ ಮತ್ತು “ಸುವರ್ಣಾಕ್ಷ” ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಉಡುಪಿ ವಿಧಾಸಭಾ ಕ್ಷೇತ್ರದ ಮಾಜಿ ಶಾಸಕರಾದ ಪ್ರಮೋದ್ ಮಧ್ವರಾಜ್ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ ಎಂದರು.
ಆಡಳಿತ ಮಂಡಳಿ ಸದಸ್ಯ ಯು.ಎಸ್. ಶೆಣೈ ಮಾತನಾಡಿ ಅಂದು ಬೆಳಿಗ್ಗೆ 10 ಗಂಟೆಗೆ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಪ್ರದಾಯಿಕ “ಹೂವಿನ ಕೋಲು ಪ್ರದರ್ಶನ” ನಡೆಯಲಿದೆ. 10.30ಕ್ಕೆ ಯಕ್ಷಗಾನ ವಿಚಾರಗೋಷ್ಠಿ ‘ವಾಂಙ್ಮಯ ವಿಸ್ಮಯ’ ಕುರಿತು ಪವನ್ ಕಿರಣ್ ಕೆರೆ ಮತ್ತು ರಾಧಾಕೃಷ್ಣ ಕಲ್ಚಾರ್ ಅವರು ಯಕ್ಷಗಾನ ಮತ್ತು ಪದವಿ ಶಿಕ್ಷಣ ಪಠ್ಯ, ಶುದ್ಧ ಕನ್ನಡ ನಿರ್ಮಾಣದಲ್ಲಿ ಕನ್ನಡದ ಪಾತ್ರ, ಯಕ್ಷಗಾನ ಸಂಭಾಷಣೆ ಮತ್ತು ಆಶು ಸಂಭಾಷಣೆ, ಕಲೆಯಾಚೆಗಿನ ಯಕ್ಷಗಾನ ಕಾವ್ಯಗಳ ಕುರಿತು ಮಾತನಾಡಲಿದ್ದಾರೆ. 11.45ರಿಂದ ಆವರ್ತ ಯಕ್ಷ-ವೇದಿಕೆಯ ವಿದ್ಯಾರ್ಥಿಗಳಿಂದ “ರಾವಣ ಗರ್ವಭಂಗ” ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು.
ಮಧ್ಯಾಹ್ನ 2.30ಕ್ಕೆ ನೇರಂಬಳ್ಳಿ ನಾರಾಯಣ ರಾವ್ ಯಕ್ಷಗಾನ ವಸ್ತು ಸಂಗ್ರಹಾಲಯ ಉದ್ಘಾಟನೆ ನಡೆಯಲಿದೆ. ಮಾಹೆ, ಮಣಿಪಾಲ ಇಲ್ಲಿನ ಉಪಕುಲಪತಿಗಳಾದ ಡಾ.ಹೆಚ್.ಎಸ್.ಬಲ್ಲಾಳ್ ನೇರಂಬಳ್ಳಿ ನಾರಾಯಣ ರಾವ್ ಯಕ್ಷಗಾನ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಲಿದ್ದಾರೆ. ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಕೆ.ಶಾಂತಾರಾಮ್ ಪ್ರಭು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ ಕೊಡ್ಗಿ ಆಗಮಿಸಲಿದ್ದಾರೆ. ಉದ್ಯಮಿ ರಾಘವೇಂದ್ರರಾವ್, ನೇರಂಬಳ್ಳಿ ಮತ್ತು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ ಟಿ.ಸೋನ್ಸ್ ಉಪಸ್ಥಿತರಿಲಿದ್ದಾರೆ ಎಂದರು.
ಅಂದು ಮಧ್ಯಾಹ್ನ 3 ಗಂಟೆಗೆ “ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರ” ಪ್ರದಾನ ಕಾರ್ಯಕ್ರಮ ನಡೆಯಲಿದೆ. ಮಾಹೆ ಮಣಿಪಾಲ ಇಲ್ಲಿನ ಉಪಕುಲಪತಿಗಳಾದ ಡಾ.ಹೆಚ್.ಎಸ್.ಬಲ್ಲಾಳ್ ಕಾರ್ಯ ಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಕೆ.ಶಾಂತಾರಾಮ್ ಪ್ರಭು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಗೀತಾನಂದ ಪೌಂಡೇಶನ್ ಇದರ ಪ್ರವರ್ತಕರಾದ ಆನಂದ್ ಸಿ,ಕುಂದರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸೌಕೂರು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕಿಶನ್ ಹೆಗ್ಡೆ, ಪಳ್ಳಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಖ್ಯಾತ ಮದ್ದಲೆ ವಾದಕರಾದ ಎನ್.ಜಿ.ಹೆಗಡೆ ಈ ವರ್ಷದ ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದು ಎಂದರು.
ಸಂಜೆ 4 ಗಂಟೆಯಿಂದ ಶಿವಭಕ್ತ ವೀರಮಣಿ” ಎಂಬ ಪ್ರಸಂಗದ ಕುರಿತು ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಲೆ ನಡೆಯಲಿದೆ. ಪ್ರಸನ್ನ ಭಟ್ ಬಾಳ್ಕಲ್ ಅವರ ಬಾಗವತಿಕೆಯಲ್ಲಿ ಎನ್.ಜಿ. ಹೆಗಡೆಯವರ ಮದ್ದಲೆಯಲ್ಲಿ, ರಾಮಕೃಷ್ಣ, ಮಂದಾರ್ತಿ ಚಂಡೆಯಲ್ಲಿ ಸಹಕರಿಸಲಿದ್ದಾರೆ. ಮುಮ್ಮೆಳದಲ್ಲಿ ವೀರಮಣಿಯಾಗಿ ಜಬ್ಬಾರ್ ಸುಮೋ, ಸಂಪಾಜೆ, ಹನುಮಂತನಾಗಿ ರಾಧಾಕೃಷ್ಣ ಕಲ್ಚಾರ್, ಈಶ್ವರನಾಗಿ ಪವನ್ ಕಿರಣ್ ಕೆರೆ, ಶತ್ರುಘ್ನರಾಗಿ ಗಣೇಶ್ ಶೆಟ್ಟಿ ಕನ್ನಡಿಕಟ್ಟೆ ಪಾತ್ರನಿರ್ವಹಿಸಲಿದ್ದಾರೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಮಾತನಾಡಿ, 50 ವರ್ಷಗಳ ಹಿಂದೆ ಡಾ.ಎಚ್.ಶಾಂತಾರಾಮ ಅವರ ವಿಶೇಷ ಆಸಕ್ತಿಯಿಂದ ಆರಂಭವಾದ ರಾಜ್ಯೋತ್ಸವ ತಾಳಮದ್ದಳೆಗೆ ಈಗ ಐವತ್ತರ ಸಂಭ್ರಮ. ಕಾಳಿಂಗ ನಾವಡರು, ಎಂ.ಎ ಹೆಗಡೆ, ನಾರಾಣಪ್ಪ ಉಪ್ಪೂರು, ಕುಂಬಳೆ ಸುಂದರ್ ರಾವ್, ಗೋಪಾಲಕೃಷ್ಣ ಶಾಸ್ತ್ರೀ ಮುಂತಾದ ಅಗ್ರಮೇವ ಕಲಾವಿದರು ಭಾಗವಹಿಸಿದ್ದಾರೆ. ನವೆಂಬರ್ 2ರಂದು ಆದಿತ್ಯವಾರ 8.30ರಿಂದ ಬೆಳಿಗ್ಗೆ 50ನೇ ವರ್ಷದ ರಾಜ್ಯೋತ್ಸವ ತಾಳಮದ್ದಲೆ ಪ್ರಯುಕ್ತ ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಬಡಗುತಿಟ್ಟು ಯಕ್ಷಗಾನ ಸ್ಪರ್ಧೆ “ಬಂಗಾರದ ಹೆಜ್ಜೆ” ಯನ್ನು ಆಯೋಜಿಸಲಾಗಿದೆ. ಸೌಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕಿಶನ್ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಕೆ.ಶಾಂತಾರಾಮ್ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕುಂದಾಪುರ ಪುರಸಭೆಯ ಅಧ್ಯಕ್ಷರಾದ ಮೋಹನದಾಸ ಶೆಣೈ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸಂಜೆ 6 ಗಂಟೆಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಕೆ.ಶಾಂತಾರಾಮ್ ಪ್ರಭು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ ಗಂಟಿಹೊಳೆ, ಉಡುಪಿ-ಚಿಕ್ಕಮಗಳೂರು ಲೋಕಸಬಾ ಕ್ಷೇತ್ರದ ಮಾಜಿ ಸಂಸದರಾದ ಜಯಪ್ರಕಾಶ್ ಹೆಗ್ಡೆ, ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ರಘುಪತಿ ಭಟ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಯಕ್ಷಗಾನ ಕಲಾವಿದ ನಿವೃತ್ತ ಪ್ರಾಧ್ಯಾಪಕ ಕೆ.ಜಿ.ಮಂಜುನಾಥ್ ಸುವರ್ಣಾಕ್ಷದ ಕುರಿತು ವಿಮರ್ಶೆ ಮಾಡಲಿದ್ದಾರೆ ಎಂದರು.
ಕಾರ್ಯಕ್ರಮ ಸಂಯೋಜಕರಾದ ಉಪನ್ಯಾಸಕ, ಹವ್ಯಾಸಿ ಯಕ್ಷಗಾನ ಕಲಾವಿದ ಶಶಾಂಕ ಪಟೇಲ್ ಮಾತನಾಡಿ, ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಬಡಗುತಿಟ್ಟು ಯಕ್ಷಗಾನ ಸ್ಪರ್ಧೆ ‘ಬಂಗಾರದ ಹೆಜ್ಜೆ’ಯಲ್ಲಿ ಸುಮಾರು 7 ಕಾಲೇಜಿನ ತಂಡಗಳು ಭಾಗವಹಿಸಲಿವೆ. ಪ್ರತಿ ತಂಡವೂ ಒಂದು ಗಂಟೆ ಹದಿನೈದು ನಿಮಿಷದ ಅವಧಿಯಲ್ಲಿ ಪ್ರದರ್ಶನ ನೀಡಲಿವೆ. ಇಲ್ಲಿ ಭಾಗವಹಿಸುವ ಎಲ್ಲ ಕಾಲೇಜು ತಂಡಗಳಲ್ಲಿ ಗುರುಗಳ ಮೂಲಕ ಯಕ್ಷಗಾನ ಕಲಿಯುತ್ತಿರುವ ವಿದ್ಯಾರ್ಥಿಗಳೇ ಭಾಗವಹಿಸಲಿದ್ದಾರೆ. ಉದ್ಘಾಟನೆಯ ಬಳಿಕ ನಿರಂತರವಾಗಿ ಸ್ಪರ್ಧೆ ನಡೆಯಲಿದೆ. ಪ್ರಥಮ ಬಹುಮಾನ ರೂ.25 ಸಾವಿರ ನಗದು ಹಾಗೂ ಶಾಶ್ವತ ಫಲಕ, ದ್ವಿತೀಯ ಬಹುಮಾನ ರೂ.15 ಸಾವಿರ ಹಾಗೂ ಶಾಶ್ವತ ಫಲಕ, ತೃತೀಯ ರೂ.10ಸಾವಿರ ಹಾಗೂ ಶಾಶ್ವತ ಫಲಕ ನೀಡಲಾಗುವುದು. ಅಲ್ಲದೆ ವೈಯಕ್ತಿವಾಗಿ ಐದು ಬಹುಮಾನ ನೀಡಲಾಗುವುದು ಎಂದರು.
ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಸುಮಲತಾ ನಾಯಕ್ ಕಾರ್ಯಕ್ರಮ ನಿರ್ವಹಿಸಿ, ರೆಡಿಯೋ ಕುಂದಾಪುರ 89.6 ಎಫ್.ಎಂ ನ ಕಾರ್ಯನಿರ್ವಹಕಿ ಜ್ಯೋತಿ ಸಾಲಿಗ್ರಾಮ ವಂದಿಸಿದರು.











