ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಭಾರತ ಸರಕಾರದ 2023ರ ವರದಿ ಪ್ರಕಾರ ಪ್ರತಿ ದಿನ 1370 ಅಪಘಾತಗಳು ನಡೆಯುತ್ತಿದ್ದು, 475 ಜನರು ಸಾವನ್ನಪ್ಪುತ್ತಿದ್ದಾರೆ. 1268 ಜನರು ಗಾಯಾಳುವಾಗುತ್ತಿದ್ದಾರೆ. 55 ಅಪಘಾತಗಳು ಪ್ರತಿಗಂಟೆಗೆ ನಡೆಯುತ್ತಿದ್ದು, 20 ಜನರು ಪ್ರತಿಗಂಟೆ ಸಾವನ್ನಪ್ಪುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ 30-35 ವರ್ಷ ಪ್ರಾಯದ ಜನರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು, ಪ್ರತಿದಿನ 7-8 ಸಾವಿರ ಜನರು ಹೃದಯ ಸಂಬಂಧಿ ತೊಂದರೆಗೆ ಒಳಗಾಗುತ್ತಿದ್ದು, ಸುಮಾರು 250 ಮಂದಿ ಸಾವನ್ನಪ್ಪುತ್ತಿದ್ದಾರೆ. ಒಂದು ಲಕ್ಷ ಪ್ರಸವ ನಡೆದರೆ 2 ಸಾವಿರ ಮಂದಿ ಸಾವನ್ನಪುತ್ತಿದ್ದರೆ ಈಗ 118 ಕ್ಕೆ ಬಂದಿದೆ. ಒಂದು ಸಾವಿರ ಮಗು ಜನಿಸಿದರೆ 125 ಮಗು ಸಾವನ್ನುಪ್ಪುತ್ತಿದ್ದರೆ ಅದರ ಪ್ರಮಾಣ ಈಗ 28 ಕ್ಕೆ ಇಳಿದಿದೆ. ಹಾಗಾಗಿ ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆ ಆಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಜಯಕರ ಶೆಟ್ಟಿ ಹೇಳಿದರು.
ಕುಂದಾಪುರದ ಶ್ರೀ ಸಾಯಿ ಆಸ್ಪತ್ರೆಯಲ್ಲಿ ಮಂಗಳೂರು ಕೆಎಂಸಿ ಆಸ್ಪತ್ರೆಯ 24*7 ಅಪಘಾತ ಮತ್ತು ತುರ್ತು ಚಿಕಿತ್ಸಾ ಘಟಕವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕುಂದಾಪುರ ಹಾಗೂ ಸುತ್ತಮುತ್ತಲಿನ ಭಾಗದ ಜನರಿಗೆ ತುರ್ತು ಪರಿಸ್ಥಿತಿಯಲ್ಲಿ ಆರೋಗ್ಯ ಸೇವೆಯನ್ನು ನೀಡುವ ಉದ್ದೇಶದಿಂದ ಕುಂದಾಪುರದ ಶ್ರೀ ಸಾಯಿ ಆಸ್ಪತ್ರೆಯಲ್ಲಿ ಮತ್ತು ಮಂಗಳೂರು ಕೆಎಂಸಿ ಆಸ್ಪತ್ರೆ ಒಡಂಬಡಿಕೆ ಮಾಡಿಕೊಂಡು ದಿನದ 24 ಗಂಟೆಯೂ ತುರ್ತು ಚಿಕಿತ್ಸೆ ನೀಡಲು ಅಪಘಾತ ಮತ್ತು ತುರ್ತು ಚಿಕಿತ್ಸಾ ಘಟಕದ ಸ್ಥಾಪನೆ ಮಾಡಿರುವುದು ವೈದ್ಯಕೀಯ ಕ್ಷೇತ್ರದಲ್ಲಿ ಹಾಗೂ ತುರ್ತು ಆರೋಗ್ಯ ಸೇವಾ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಮತ್ತು ದಂತಾಗಿದೆ ಎಂದು ಶ್ಲಾಘಿಸಿದ ಅವರು, ತುರ್ತು ಪರಿಸ್ಥಿತಿಗಳು ತುಂಬಾ ನಿರ್ಣಾಯವಾಗಿದೆ. ಜನರು ಆರೋಗ್ಯ ಸಂಬಂಧಿ ಕಾಯಿಲೆಗಳ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕಿದೆ.
ಮುಖ್ಯ ಅತಿಥಿಯಾಗಿದ್ದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ ಶಂಕರ್ ಮಾತನಾಡಿ, ಯಾವುದೇ ತುರ್ತು ಪರಿಸ್ಥಿತಿ ಎದುರಾದರೂ ಧೈರ್ಯವಾಗಿ ತೆರಳಿ ಚಿಕಿತ್ಸೆ ಪಡೆಯುವಂತಾಗಿದೆ. ತುರ್ತು ಚಿಕಿತ್ಸೆ ಬಗ್ಗೆ ನಾವು ಯಾರೂ ಈ ವಿಚಾರದಲ್ಲಿ ಅನುಭವಿಗಳಲ್ಲ. ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ಬಗ್ಗೆ ವೈದ್ಯರಿಗೆ ಬಿಡಬೇಕು. ಅಪಘಾತದ ಸಂದರ್ಭ ಗಾಯಾಳುಗಳಿಗೆ ನೀಡಬಹುದಾದ ತುರ್ತು ಚಿಕಿತ್ಸೆ ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ತರಬೇತಿ ನೀಡಲು ಚಿಂತನೆ ನಡೆಸಲಾಗಿದೆ ಎಂದರು.
ಇದೇ ಸಂದರ್ಭ ರಸ್ತೆ ಸುರಕ್ಷತಾ ದೃಷ್ಟಿಯಿಂದ ಕುಂದಾಪುರ ಪೊಲೀಸ್ ಠಾಣೆಗೆ ಬ್ಯಾರಿಕೇಡ್‍ಗಳನ್ನು ಹಸ್ತಾಂತರಿಸಲಾಯಿತು.
ಯೂನಿಯನ್ ಬ್ಯಾಂಕಿನ ಉಡುಪಿ ವಿಭಾಗದ ಡೆಪ್ಯುಟಿ ರೀಜಿನ್ ಹೆಡ್ ಸತ್ಯಭ್ರತೋ ಭಾದುರಿ, ಮಂಗಳೂರು ಕೆಎಂಸಿ ಆಸ್ಪತ್ರೆಯ ತುರ್ತು ವೈದ್ಯಕೀಯ ವಿಭಾಗದ ಕ್ಲಸ್ಟರ್ ಮುಖ್ಯಸ್ಥ ಡಾ.ಜೀಧು ರಾಧಾಕೃಷ್ಣನ್, ಮಾರ್ಕೇಟಿಂಗ್ ವಿಭಾಗದ ಸೀನಿಯರ್ ಮ್ಯಾನೇಜರ್ ರಾಕೇಶ್, ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿ ಡಾ.ಪ್ರೇಮಾನಂದ, ಕುಂದಾಪುರ ಐಎಂಎ ಅಧ್ಯಕ್ಷ ಡಾ.ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಕುಂದಾಪುರ ನ್ಯೂ ಮೆಡಿಕಲ್ ಸೆಂಟರ್‍ನ ನಿರ್ದೇಶಕ ಡಾ.ರಂಜನ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಕೆ.ಸಿ.ರಾಜೇಶ ಕಾರ್ಯಕ್ರಮ ನಿರ್ವಹಿಸಿದರು. ಡಾ.ಪ್ರಕೃತಿ ವಂದಿಸಿದರು.











