ಅ.31ರಂದು ವಂಡ್ಸೆಯಲ್ಲಿ “ಸಮುದಾಯ ಉಪಶಮನ ಆರೈಕೆ ಕೇಂದ್ರ” ಉದ್ಘಾಟನೆ – ಉದಯ ಕುಮಾರ್ ಶೆಟ್ಟಿ

0
391

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ವಂಡ್ಸೆ ಕ್ಲಸ್ಟರ್ ವ್ಯಾಪ್ತಿಯ ವಂಡ್ಸೆ, ಚಿತ್ತೂರು, ಇಡೂರು-ಕುಂಜ್ಞಾಡಿ, ಆಲೂರು, ಹಕ್ಲಾಡಿ, ಹೆಮ್ಮಾಡಿ ಮತ್ತು ಕೆರಾಡಿ ಗ್ರಾಮ ಪಂಚಾಯತ್‍ಗಳಲ್ಲಿ ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಜಂಟಿ ಸಹಭಾಗಿತ್ವದಲ್ಲಿ ‘ನಿರಾಮಯ ಸೊಸೈಟಿ’ ಮೂಲಕ ಅನುಷ್ಟಾನಗೊಳ್ಳುತ್ತಿರುವ ‘ಸಮುದಾಯ ಉಪಶಮನ ಆರೈಕೆ ಕೇಂದ್ರ’ ಹಾಗೂ ಉಡುಪಿ ಜಿಲ್ಲೆಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯ ಪ್ರಪ್ರಥಮ ಸಮುದಾಯ ನಿರ್ವಹಣಾ ತರಬೇತಿ ಕೇಂದ್ರ(ಸಿ.ಎಂ.ಟಿ.ಸಿ) ಸಹ್ಯಾದ್ರಿ ಸಂಜೀವಿನಿ ಕೌಶಲ್ಯಾವೃದ್ಧಿ ತರಬೇತಿ ಕೇಂದ್ರದ ಉದ್ಘಾಟನೆ ಅಕ್ಟೋಬರ್ 31 ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ವಂಡ್ಸೆ ಗ್ರಾಮ ಪಂಚಾಯತ್ ಎದುರುಗಡೆ ಇರುವ ನಿರಾಮಯ ಸೊಸೈಟಿ ಕಛೇರಿಯಲ್ಲಿ ನಡೆಯಲಿದೆ ಎಂದು ನಿರಾಮಯ ಸೊಸೈಟಿ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಹೇಳಿದರು.

ಅವರು ಅ.29ರಂದು ಕುಂದಾಪುರ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.

ಸಹ್ಯಾದ್ರಿ ಸಂಜೀವಿನಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಎಸ್.ಎಲ್.ಆರ್.ಎಂ ಸಂಕೀರ್ಣದಲ್ಲಿ ಅಂದು ಅಪರಾಹ್ನ 2.45ಕ್ಕೆ ಉದ್ಘಾಟನೆಗೊಳ್ಳಲಿದೆ. ಸಮುದಾಯ ಉಪಶಮನ ಆರೈಕೆ ಕೇಂದ್ರ ಉದ್ಘಾಟನೆ ಹಾಗೂ ಅಂಬುಲೆನ್ಸ್ ಮತ್ತು ಶೀತಲೀಕರಣ ಪೆಟ್ಟಿಗೆ ಹಸ್ತಾಂತರ ಕಾರ್ಯಕ್ರಮ ಅಪರಾಹ್ನ 3 ಗಂಟೆಗೆ ನಡೆಯಲಿದೆ. 3.10ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಉದ್ಘಾಟನೆ ನೆರವೇರಿಸಲಿದ್ದಾರೆ. ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅಧ್ಯಕ್ಷತೆ ವಹಿಸಲಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ ಪಾಟೀಲ್, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಎಸ್.ಎಲ್.ಬೋಜೆಗೌಡ,ಕಿರಣ್ ಕುಮಾರ್ ಕೊಡ್ಗಿ, ಮಂಜುನಾಥ ಭಂಡಾರಿ,ಡಾ.ಧನಂಜಯ ಸರ್ಜಿ, ಕಿಶೋರ್ ಕುಮಾರ್ ಪುತ್ತೂರು ಸಹಿತ ಜನಪ್ರತಿನಿಧಿಗಳು, ಅಧಿಕಾರಿಗಳು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

Click Here

ಕರ್ನಾಟಕ ರಾಜ್ಯದಲ್ಲಿ ಪ್ರಥಮ ಬಾರಿಗೆ ಉಪಶಮನ ಆರೈಕೆ ಕಾರ್ಯಕ್ರಮವನ್ನು ಅನುಷ್ಠಾನ ಮಾಡುವ ಸರಕಾರದ ಆಶಯದಂತೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ವಂಡ್ಸೆ ಕ್ಲಸ್ಟರ್ ನ ವಂಡ್ಸೆ ಚಿತ್ತೂರು, ಇಡೂರು-ಕುಂಜ್ಞಾಡಿ ಆಲೂರು, ಹಕ್ಲಾಡಿ, ಕೆರಾಡಿ ಮತ್ತು ಹೆಮ್ಮಾಡಿ ಗ್ರಾಮ ಪಂಚಾಯತ್ ಗಳಲ್ಲಿ ಕೆ.ಎಚ್.ಪಿ.ಟಿ. ಮತ್ತು ಅರುವು ಕೊಲಾಬರೇಟರಿ ಸಂಸ್ಥೆಗಳ ಸಹಕಾರದೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಭಾಗಿತ್ವದಲ್ಲಿ ಸಮುದಾಯ ಉಪಶಮನ ಆರೈಕೆ ಕೇಂದ್ರ ಕಾರ್ಯಾಚರಿಸುತ್ತಿದೆ ಎಂದರು.

ಉಪಶಮನ ಆರೈಕೆ ಕಾರ್ಯಕ್ರಮದ ಸಮರ್ಪಕ ಅನುಷ್ಠಾನ, ಆಡಳಿತ, ಅನುದಾನ ಬಳಕೆ, ಸಂಪನ್ಮೂಲ ಕ್ರೋಢೀಕರಣ, ಸಿಬ್ಬಂದಿ ನೇಮಕ ಇವುಗಳನ್ನು ಸುಲಭವಾಗಿ ನಿರ್ವಹಿಸುವ ಸಲುವಾಗಿ 7 ಗ್ರಾಮ ಪಂಚಾಯತ್‍ಗಳ ಪ್ರತಿನಿಧಿಗಳು, ಅಧಿಕಾರಿಗಳನ್ನು ಒಳಗೊಂಡು “ನಿರಾಮಯ ಸೊಸೈಟಿ” ಎಂಬ ಸಂಸ್ಥೆಯನ್ನು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರಂತೆ ರಚಿಸಲಾಗಿದೆ. ಸೊಸೈಟಿಯ ಮೂಲಕ ಇಬ್ಬರು ಫಿಸಿಯೋಥೆರಪಿಸ್ಟ್, ಇಬ್ಬರು ಸ್ಟಾಫ್ ನರ್ಸ್ ಒಬ್ಬರು ಕೌನ್ಸೆಲ್ಲರ್ ಕಮ್ ಕೊ-ಆರ್ಡಿನೇಟರ್ ಮತ್ತು ಒಬ್ಬರು ಡ್ರೈವರ್ ಕಮ್ ಅಟೆಂಡರ್ ಅವರನ್ನು ನೇಮಕ ಮಾಡಿಕೊಂಡು ಮಾಸಿಕ ಬಾಡಿಗೆ ಆಧಾರದಲ್ಲಿ ಪಡೆದ 2 ಕಾರುಗಳು ಮತ್ತು ದಾನಿಗಳಿಂದ ಪಡೆದ ಅಂಬುಲೆನ್ಸ್ ಮುಖಾಂತರ 7 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೋಗಿಗಳ ಮನೆಗೆ ಭೇಟಿ ನೀಡಿ ಆರೈಕೆ ಮಾಡಲಾಗುತ್ತಿದೆ. ಸಿಬ್ಬಂದಿಗಳಿಗೆ ಮತ್ತು ನಾಲ್ವರು ವೈದ್ಯರುಗಳಿಗೆ ತಿರುವನಂತಪುರದ ಪ್ಯಾಲಿಯಂ ಇಂಡಿಯಾ ಸಂಸ್ಥೆಯಲ್ಲಿ ತರಭೇತಿ ನೀಡಿ ಸೆಪ್ಟೆಂಬರ್ ತಿಂಗಳ ಒಂದನೇ ತಾರೀಖನಿಂದ ಸಂಸ್ಥೆಯು ಸೇವೆ ನೀಡುತ್ತಿದೆ.
ಉಪಶಮನ ಆರೈಕೆಗೆ ಒಳಪಡುವ ರೋಗಿಗಳನ್ನು ಗುರುತಿಸುವ ಹಾಗೂ ಅವರ ದೈಹಿಕ, ಸಾಮಾಜಿಕ, ಆರ್ಥಿಕ ಮತ್ತು ಆಧ್ಯಾತ್ಮಿಕ ಮೌಲ್ಯ ಮಾಪನದ ಪ್ರಕ್ರಿಯೆಯನ್ನು ಕೆ.ಎಮ್.ಸಿ. ಆಸ್ಪತ್ರೆ ಮಣಿಪಾಲ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಕಾರದೊಂದಿಗೆ ನಡೆಸಲಾಗಿದೆ. ಇದರಂತೆ 284 ಜನರನ್ನು ಈಗಾಗಲೇ ಗುರುತಿಸಿದ್ದು ಅವರಲ್ಲಿ 73 ಜನರು ಹಾಸಿಗೆ ಹಿಡಿದವರಾಗಿದ್ದಾರೆ. ಅಭದ್ರತೆ ಕಾಡುತ್ತಿರುವ ಹಿರಿಯ ನಾಗರಿಕರನ್ನು ಗುರುತಿಸುವ ಕಾರ್ಯ ಇನ್ನಷ್ಟೇ ಆಗಬೇಕಿದೆ. ಈ ಕಾರ್ಯಕ್ರಮದ ಪ್ರಮುಖ ಉದ್ದೇಶವು ಅದರ ನೋವು, ಅಸಹಜತೆ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ರೋಗಿಯ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಿ ಅಗತ್ಯವಿದ್ದಲ್ಲಿ ಜೀವನೋಪಾಯ ಚಟುವಟಿಕೆಯೊಂದಿಗೆ ಜೀವನದ ಗುಣಮಟ್ಟವನ್ನು ಸುಧಾರಿಸಿ ಗೌರವಯುತವಾದ ಬದುಕು ನಡೆಸುವಂತೆ ಮಾಡುವುದಾಗಿದೆ ಎಂದರು.
ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಈ ಯೋಜನೆ ಉಡುಪಿ ಜಿಲ್ಲೆಯಲ್ಲಿ 7 ಗ್ರಾಮ ಪಂಚಾಯತ್‍ಗಳಲ್ಲಿ ಅನುಷ್ಟಾನವಾಗುತ್ತಿದೆ. ಇದರ ಪ್ರಗತಿ, ಬೆಳವಣಿಗೆ ಗಮನಿಸಿ ಮುಂದೆ ರಾಜ್ಯ ಮಟ್ಟದಲ್ಲಿ ವಿಸ್ತರಣೆಗೆ ಸರಕಾರ ಯೋಚನೆ ಮಾಡುತ್ತದೆ. ಇಲ್ಲಿ ಈಗಿನ ಅಂಕಿಅಂಶಗಳ ಪ್ರಕಾರ ವರ್ಷಕ್ಕೆ 55ಲಕ್ಷ ರೂ ಬೇಕಾಗುತ್ತದೆ. ಸರಕಾರದ ಅನುದಾನದ ಜೊತೆಗೆ, ಪಂಚಾಯತ್‍ಗಳ ಆರೋಗ್ಯ ಕರ ಬಳಕೆ, ಸಿ.ಎಸ್.ಆರ್ ಅನುದಾನದಿಂದ ಅವಲಂಬಿತವಾಗಿ ಕಾರ್ಯನಿರ್ವಹಿಸಲಾಗುತ್ತಿದೆ. 7 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 40 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದ್ದು, ವರ್ಷದಿಂದ ವರ್ಷಕ್ಕೆ ವೆಚ್ಚವೂ ಕೂಡಾ ಹೆಚ್ಚಳವಾಗುತ್ತದೆ ಎಂದರು.
ದೀರ್ಘಕಾಲೀನ ಮತ್ತು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರು, ವಯೋಸಹಜವಾಗಿ ಹಾಸಿಗೆ ಹಿಡಿದವರು, ತೀವ್ರತರದ ಮಾನಸಿಕ ಖಿನ್ನತೆಗೆ ಒಳಗಾದವರು ಮತ್ತು ಅಭದ್ರತೆಯಿಂದ ಬದುಕುತ್ತಿರುವ ಹಿರಿಯ ನಾಗರಿಕರಿಗೆ ಉಚಿತ ಆರೈಕೆಯನ್ನು ನೀಡುವುದು ಸಂಸ್ಥೆಯ ಉದ್ದೇಶ. ಮುಂದಿನ ಎರಡು ವರ್ಷಗಳಲ್ಲಿ ಚಿತ್ತೂರು-ಆಲೂರು ಮುಖ್ಯರಸ್ತೆಯಲ್ಲಿರುವ ವಂಡ್ಸೆ ಗ್ರಾಮ ಪಂಚಾಯತಿಗೆ ಸಂಬಂಧಿಸಿದ 1.28 ಎಕ್ರೆ ಜಮೀನನ್ನು ಈಗಾಗಲೇ 30 ವರ್ಷಗಳಿಗೆ ಲೀಸ್‍ನಲ್ಲಿ ಪಡೆದುಕೊಂಡಿದ್ದು ಸುಮಾರು 4.50 ಕೋಟಿ ರೂಪಾಯಿ ವೆಚ್ಚದಲ್ಲಿ ಉಪಶಮನ ಆರೈಕೆ ಕೇಂದ್ರವನ್ನು ತೆರೆದು ರೋಗಿಗಳ ಆರೈಕೆ ಮಾಡುವ ಗುರಿ ಹೊಂದಿದೆ. ಪತ್ರಿಕಾಗೋಷ್ಟಿಯಲ್ಲಿ ನಿರಾಮಯ ಸೊಸೈಟಿ ಕಾರ್ಯದರ್ಶಿ ಸುದರ್ಶನ ಶೆಟ್ಟಿ ಕೆರಾಡಿ, ಕೋಶಾಧಿಕಾರಿ, ಇಡೂರು ಕುಂಜ್ಞಾಡಿ ಗ್ರಾ.ಪಂ ಅಧ್ಯಕ್ಷೆ ಆಶಾ ಆಚಾರ್ಯ, ವಂಡ್ಸೆ ಗ್ರಾ.ಪಂ. ಅಧ್ಯಕ್ಷೆ ಗೀತಾ ಅವಿನಾಶ್, ಸಹ್ಯಾದ್ರಿ ಸಂಜೀವಿನಿ ಸಿಎಂಟಿಸಿ ಅಧ್ಯಕ್ಷೆ ಸಲ್ಮಾ ನಜೀರ್ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here