ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ ಅಂಪಾರು, ಇಲ್ಲಿನ ಶಿಶುವಿಹಾರ (ಕಿಂಡರ್‌ಗಾರ್ಟನ್) ವಿಭಾಗದಲ್ಲಿ ಡಿ.5ರಂದು “ಪತ್ರ ಬರವಣಿಗೆ ದಿನ” ವನ್ನು ಬಹಳ ವಿಶಿಷ್ಟವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಲೆಯ ಪುಟ್ಟ ಮಕ್ಕಳು ಈ ಚಟುವಟಿಕೆಯಲ್ಲಿ ಅಪಾರ ಉತ್ಸಾಹ ಮತ್ತು ಪ್ರೀತಿಯಿಂದ ಪಾಲ್ಗೊಂಡರು.
ಈ ವಿಶೇಷ ದಿನದಂದು ಸಂಜಯಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಇವರು ಉಪಸ್ಥಿತರಿದ್ದು, ಈ ತಂತ್ರಜ್ಞಾನ ಯುಗದಲ್ಲಿ ಪತ್ರ ಬರವಣಿಗೆ ಮಹತ್ವ ತಿಳಿಸುವ ಕಾರ್ಯವನ್ನು ಪ್ರಶಂಸಿಸಿದರು.
ಆಡಳಿತಾಧಿಕಾರಿ ಚೈತ್ರ ಯಡಿಯಾಳ ಇವರ ಉಪಸ್ಥಿತಿಯಲ್ಲಿ ಕಿಂಡರ್ಗಾರ್ಟನ್ ವಿಭಾಗದ ಶಿಕ್ಷಕಿಯರಾದ ಶೋಭಾ ಮತ್ತು ಶ್ವೇತಾ ಶೇಟ್ ಇವರು ಪುಟಾಣಿಗಳಿಗೆ ಪತ್ರದ ಮಹತ್ವ ಮತ್ತು ಬರೆಯುವ ವಿಧಾನದ ಬಗ್ಗೆ ಸರಳವಾಗಿ ತಿಳಿಸಿಕೊಟ್ಟರು. ನಂತರ, ಮಕ್ಕಳು ತಮ್ಮ ಪಾಲಕರಿಗೆ (ಅಪ್ಪ-ಅಮ್ಮನಿಗೆ) ತಮ್ಮ ಮನಸ್ಸಿನ ಭಾವನೆಗಳನ್ನು, ಪ್ರೀತಿಯ ಮಾತುಗಳನ್ನು ಅಂಚೆ ಕಾರ್ಡ್ ಮೇಲೆ ಬರೆಯಲು ಪ್ರಯತ್ನಿಸಿದರು ಮತ್ತು ಚಿತ್ರ ಬಿಡಿಸಿದರು. ಪ್ರತಿ ಮಗುವಿನ ಮುಖದಲ್ಲೂ ತಮ್ಮ ಪಾಲಕರಿಗೆ ಪತ್ರ ತಲುಪಿಸುವ ಸಂಭ್ರಮ ಮನೆಮಾಡಿತ್ತು. ಕೇವಲ ಪತ್ರ ಬರೆದು ಮುಗಿಸದೆ, ಈ ಸಂಪೂರ್ಣ ಪ್ರಕ್ರಿಯೆಯ ಪ್ರಾಯೋಗಿಕ ಅನುಭವ ನೀಡಲು ಮಕ್ಕಳಿಗೆ ಸ್ಥಳೀಯ ಅಂಚೆ ಕಚೇರಿಗೆ ಭೇಟಿ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳು ಅಂಪಾರಿನ ಅಂಚೆ ಕಚೇರಿಗೆ ತೆರಳಿ, ಅಲ್ಲಿ ಅಂಚೆ ಕಚೇರಿಯ ಕಾರ್ಯವೈಖರಿಯ ಬಗ್ಗೆ ಪೋಸ್ಟ್ ಮಾಸ್ಟರ್ ಅನಂತ ಪದ್ಮನಾಭ ಪ್ರಭು ಇವರಿಂದ ತಿಳಿದುಕೊಂಡರು. ನಂತರ ಸ್ವತಃ ತಮ್ಮ ಪುಟ್ಟ ಕೈಗಳಿಂದ ಪತ್ರಗಳನ್ನು ಅಂಚೆ ಪೆಟ್ಟಿಗೆಗೆ (ಪೋಸ್ಟ್‌ಬಾಕ್ಸ್) ಹಾಕಿದರು.
ಈ ಚಟುವಟಿಕೆಯು ಮಕ್ಕಳಿಗೆ ಪತ್ರ ಸಂವಹನದ ನೈಜ ಅನುಭವ ನೀಡಿತು. ತಂತ್ರಜ್ಞಾನದ ಯುಗದಲ್ಲಿ ಪತ್ರ ಬರವಣಿಗೆಯ ಮಹತ್ವವನ್ನು ತಿಳಿಸಿಕೊಡುವಲ್ಲಿ ಮತ್ತು ಅಂಚೆ ವ್ಯವಸ್ಥೆಯ ಪರಿಚಯ ಮಾಡಿಕೊಡುವಲ್ಲಿ ಶಾಲೆಯ ಈ ವಿನೂತನ ಪ್ರಯತ್ನ ಯಶಸ್ವಿಯಾಯಿತು. ಮಕ್ಕಳಿಗೂ ಇದೊಂದು ಸ್ಮರಣೀಯ ಅನುಭವವಾಗಿ ಉಳಿಯಿತು.











