ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ದೇಶದ ಪ್ರತಿಯೊಬ್ಬ ಪ್ರಜೆಗೂ ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದ್ದು, ಅದರ ಬಗ್ಗೆ ಪ್ರತಿಯೊಬ್ಬರೂ ಅರಿವು ಹೊಂದಿರುವುದರೊಂದಿಗೆ ಅಗತ್ಯಕ್ಕನುಗುಣವಾಗಿ ಕಾನೂನುಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಪೋಷಕರಾದ ಗೌರವಾನ್ವಿತ ನ್ಯಾಯಮೂರ್ತಿ ವಿಭು ಬಖ್ರು ಹೇಳಿದರು.
ಅವರು ಇಂದು ಕುಂದಾಪುರ ತಾಲೂಕು ಕೆರಾಡಿ ಗ್ರಾಮದ ವರಸಿದ್ಧಿ ವಿನಾಯಕ ಕಾಲೇಜಿನಲ್ಲಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ವಕೀಲರ ಸಂಘ ಕುಂದಾಪುರ, ಗ್ರಾಮ ಪಂಚಾಯತ್ ಕೆರಾಡಿ, ವೈಕುಂಠ ಬಾಳಿಗ ಕಾನೂನು ಕಾಲೇಜು ಉಡುಪಿ ಮತ್ತು ವರಸಿದ್ಧಿ ವಿನಾಯಕ ಕಾಲೇಜು ಕೆರಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮೀಣ ಸಮುದಾಯದವರ ಸಬಲೀಕರಣ : ಹಕ್ಕುಗಳು ಮತ್ತು ಯೋಜನೆಗಳ ಕುರಿತು ಕಾನೂನು ಅರಿವು ಮತ್ತು ನೆರವು ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಜನಸಾಮಾನ್ಯರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಬಡವರು ಹಾಗೂ ಗ್ರಾಮೀಣ ಭಾಗದಲ್ಲಿ ಜನರಿಗೆ ಕಾನೂನಿನಲ್ಲಿ ತಮಗೆ ನೀಡಲಾದ ಹಕ್ಕು ಮತ್ತು ಕರ್ತವ್ಯಗಳನ್ನು ಅವರುಗಳ ಮನೆ ಬಾಗಿಲಿಗೆ ತಲುಪಿಸಿ, ಕಾನೂನಿನ ನೆರವು ಒದಗಿಸುವುದು ಕಾನೂನು ಸೇವೆಗಳ ಪ್ರಾಧಿಕಾರದ ಕರ್ತವ್ಯವಾಗಿದೆ ಎಂದರು.
ಕೋರ್ಟ್ನ ಆವರಣದಲ್ಲಿ ಕಾಣುತ್ತಿದ್ದಂತಹ ನ್ಯಾಯದಾನ ಪ್ರಕ್ರಿಯೆ ಸಮುದಾಯಗಳ ನಡುವೆ ತಳ ಹಂತಕ್ಕೂ ಬಂದು ತಲುಪಬೇಕು. ಸಮುದಾಯಗಳ ಹೊಂದಾಣಿಕೆ, ಸಮುದಾಯಗಳ ಕಾರ್ಯಕ್ರಮ, ನ್ಯಾಯ ದಾನಗಳ ಪ್ರಕ್ರಿಯೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎನ್ನುವುದು ಕಾರ್ಯಕ್ರಮದ ಆಶಯವಾಗಿದೆ ಎಂದ ಅವರು, ಮಕ್ಕಳ ಪಂಚಾಯತ್ ನಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕೆರಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದರು.
ಕೆರಾಡಿ ಮತ್ತು ಬೆಲ್ಲಾಳ ವ್ಯಾಪ್ತಿಯಲ್ಲಿ ಸರ್ವೇ ನಡೆಸಿದ ಕಾನೂನು ಸೇವೆಗಳ ಪ್ರಾಧಿಕಾರದ ತಂಡವು ಸುಮಾರು 1230 ಮನೆಗಳನ್ನು ಸಂದರ್ಶಸುವುದರೊಂದಿಗೆ ಸುಮಾರು 3700 ಕ್ಕೂ ಹೆಚ್ಚು ಜನರನ್ನು ವೈಯಕ್ತಿಕ ವಾಗಿ ಭೇಟಿ ಮಾಡಿದ್ದು, ಅವರುಗಳು ಅಯುಷ್ಮಾನ್, ಆಧಾರ್, ಹಕ್ಕುಪತ್ರ, ಪಡಿತರ ಚೀಟಿ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿರುತ್ತಾರೆ. ಈ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸುವ ಕೆಲಸ ಕಾನೂನು ಸೇವೆಗಳ ಪ್ರಾಧಿಕಾರ ಮಾಡುತ್ತಿದೆ ಎಂದರು.
ಸಮಾಜದ ತಳಹಂತದವರೆಗೂ ನ್ಯಾಯ ತಲುಪಿಸಲು ವಿದ್ಯಾರ್ಥಿಗಳು ಹಾಗು ಯುವಜನರು ನಿರ್ಣಾಯಕ ಪಾತ್ರ ವಹಿಸಲಿದ್ದು, ನ್ಯಾಯದ ಪ್ರಕ್ರಿಯೆಗಳು ಸಮಾನ ಹಂತದಲ್ಲಿ ಸಮಾಜದ ಪ್ರತಿಯೊಬ್ಬರಿಗೂ ತಲುಪುವಂತಾಗಬೇಕು. ಕೆರಾಡಿಯಿಂದ ಆರಂಭವಾದ ನ್ಯಾಯದಾಯಿಕ ಈ ಕಾರ್ಯಕ್ರಮ ರಾಜ್ಯದ ಪ್ರತಿಯೊಂದು ಹಳ್ಳಿಗಳಿಗೂ ತಲುಪಲಿ ಎಂದರು.
ವರಸಿದ್ಧಿ ವಿನಾಯಕ ಕಾಲೇಜು ಕೆರಾಡಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಮಾತನಾಡಿ, ಇಂದಿನ ಮಕ್ಕಳು ಮುಂದಿನ ಪ್ರಜೆಗಳಾಗಿದ್ದು, ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರಜೆಗೂ ನೀಡಲಾದ ಹಕ್ಕುಗಳನ್ನು ಗ್ರಾಮೀಣ ಭಾಗದಲ್ಲಿ ಜನತೆಗೆ ತಲುಪಿಸುವಲ್ಲಿ ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ. ವಿದ್ಯಾರ್ಥಿಗಳು ಕಾನೂನುಗಳ ಬಗ್ಗೆ ಮಾಹಿತಿ ಹೊಂದುವುದರೊಂದಿಗೆ ಅದನ್ನು ತಮ್ಮ ಕುಟುಂಬದವರಿಗೂ, ನೆರೆಹೊರೆಯವರಿಗೂ ತಲುಪಿಸುವುದರೊಂದಿಗೆ ಕಾನೂನಿನ ನೆರವನ್ನು ಎಲ್ಲರೂ ಪಡೆಯುವಂತಾಗಲಿ ಎಂದರು.
ಬೆಂಗಳೂರು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್. ಶಶಿಧರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರುವ ಜನರ ಸಂಕಷ್ಟಗಳನ್ನು ಅರಿತು ಅದನ್ನು ಹೋಗಲಾಡಿಸುವುದರೊಂದಿಗೆ ತಮಗಿರುವ ಹಕ್ಕುಗಳ ಬಗ್ಗೆ ಅರಿವು ಮೂಡಿಸಿ, ವ್ಯಾಜ್ಯ ಮುಕ್ತ ಗ್ರಾಮ ವಾಗಿಸುವುದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಉದ್ದೇಶವಾಗಿದೆ. ಕಾರ್ಯಕ್ರಮದ ಮೂಲಕ ಗ್ರಾಮೀಣ ಭಾಗದಲ್ಲಿರುವ ಮುಗ್ದ ಜನರು ಕಾನೂನು ಸೇವೆಗಳ ಲಾಭ ಪಡೆಯುವಂತಾಗಬೇಕು ಎಂದರು.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷೆ ನ್ಯಾಯಮೂರ್ತಿ ಅನು ಸಿವರಾಮನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನ್ಯಾಯ ಪ್ರತಿಯೊಬ್ಬರ ಮನೆ ಬಾಗಿಲಿಗೂ ತಲುಪಬೇಕು. ಕಾನೂನಿನ ಬಗ್ಗೆ ಯಾವುದೇ ಅಗತ್ಯ ಮಾಹಿತಿ ಪಡೆಯಲು ಸಹಾಯವಾಣಿ ಸಂಖ್ಯೆ 15100 ಅನ್ನು ಸಂಪರ್ಕಿಸಬಹುದಾಗಿದೆ. ಜನಸಾಮಾನ್ಯರ ಸೇವೆಗಾಗಿ ಕಾನೂನು ಸೇವೆಗಳ ಪ್ರಾಧಿಕಾರವು ಸದಾ ಸಿದ್ಧವಾಗಿರುತ್ತದೆ ಎಂದ ಅವರು, ಕಾರ್ಯಕ್ರಮದಲ್ಲಿ ತೆರೆಯಲಾದ ವಿವಿಧ ಇಲಾಖೆಗಳ ಮಾಹಿತಿ ನೀಡುವ ಮಳಿಗೆಗಳ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಇಲಾಖೆಗಳಿಗೂ, ಸಂಘ ಸಂಸ್ಥೆಗಳಿಗೂ, ಕಾಲೇಜಿಗೂ ಅಭಿನಂದನೆ ಸಲ್ಲಿಸಿದರು.
ಸುರೇಶ್ ಶೆಟ್ಟಿ ಮತ್ತು ಬಳಗದವರಿಂದ ಕರಾವಳಿ ಭಾಗದ ಸಂಪ್ರದಾಯ ಕಲೆ ಯಕ್ಷಗಾನದ ಪ್ರಾತ್ಯಕ್ಷಿಕೆ ನಡೆಯಿತು. ಸುಮಾರು 26 ಕ್ಕೂ ಹೆಚ್ಚು ವಿವಿಧ ಇಲಾಖೆಗಳು ತಮ್ಮ ಇಲಾಖೆಯ ವತಿಯಿಂದ ಲಭ್ಯವಿರುವ ಯೋಜನೆಗಳ ಮಾಹಿತಿಯನ್ನು ಒದಗಿಸುವ ಮಳಿಗೆಗಳನ್ನು ತೆರೆದಿದ್ದರು.
ಇದೇ ಸಂದರ್ಭದಲ್ಲಿ ಮೂವರು ಫಲಾನುಭವಿಗಳಿಗೆ ಸಂಕೇತಿಕವಾಗಿ ಹಕ್ಕುಪತ್ರಗಳನ್ನು ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಮಹಾ ವಿಲೇಖನಾಧಿಕಾರಿ ಕೆ. ಎಸ್ ಭರತ್ ಕುಮಾರ್, ಕೆರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದರ್ಶನ್ ಶೆಟ್ಟಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕಿರಣ್ ಎಸ್ ಗಂಗಣ್ಣವರ್ ಸ್ವಾಗತಿಸಿ, ಕೆ. ಸಿ ರಾಜೇಶ್, ಪಿ.ಡಿ. ಓ ಸತೀಶ್ ವಡ್ಡರ್ಸೆ ಹಾಗೂ ರಾಘವೇಂದ್ರ ಚರಣ್ ನಾವಡ ನಿರೂಪಿಸಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಬಿ. ವೈ ವಂದಿಸಿದರು.











